ಶ್ರೀಮಂಗಲ, ಜ. 31 : ಟಿ.ಶೆಟ್ಟಿಗೇರಿ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಗ್ರಾ.ಪಂ. ಪಣತೊಟ್ಟಿದ್ದು ಪಟ್ಟಣದಲ್ಲಿ ವರ್ತಕರು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕರಪತ್ರಗಳನ್ನು ಹಂಚುವ ಮೂಲಕ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು ಚಾಲನೆ ನೀಡಿದರು.

ಪಟ್ಟಣದಲ್ಲಿ ಸಾರ್ವಜನಿಕರು ಹಾಗೂ ವರ್ತಕರು ಪ್ಲಾಸ್ಟಿಕ್ ಬಳಸುವದು ಮತ್ತು ಮಾರಾಟ ಮಾಡುವದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವದು. ಪ್ಲಾಸ್ಟಿಕ್ ತೋರಣ (ಬಂಟಿಂಗ್ಸ್), ಪ್ಲಾಸ್ಟಿಕ್ ಬ್ಯಾಗ್, ಪ್ಲಾಸ್ಟಿಕ್ ತಟ್ಟೆ, ಚಮಚ, ಲೋಟ, ಭಿತ್ತಿ ಪತ್ರ, ಫ್ಲೆಕ್ಸ್ ಇತರ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ಗ್ರಾ.ಪಂ.ಅಧ್ಯಕ್ಷ ಮಚ್ಚಮಾಡ ಸುಮಂತ್ ತಿಳಿಸಿದರು.

ಫೆಬ್ರವರಿ 16ನೇ ತಾರೀಕಿನಿಂದ ಸಾರ್ವಜನಿಕರು ಹಾಗೂ ವರ್ತಕರು ಪ್ಲಾಸ್ಟಿಕ್ ಬಳಸಿದರೆ ಪರಿಸರ ಸಂರಕ್ಷಣೆ ಕಾಯ್ದೆ 1986ರ ಪ್ರಕರಣ 19ರ ಅಡಿ ಉಲ್ಲಂಘಿಸಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವದು. 5 ಸಾವಿರ ರೂ.ದಂಡ ವಿಧಿಸಲಾಗುವದು ಹಾಗೂ ವರ್ತಕರ ಪರವಾನಗಿಯನ್ನು ರದ್ದುಗೊಳಿಸಲಾಗುವದೆಂದು ಹೇಳಿದರು.

ಈ ಸಂದರ್ಭ ಗ್ರಾ.ಪಂ.ಸದಸ್ಯ ಚೊಟ್ಟೆಯಂಡಮಾಡ ಕೆ. ಉದಯ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವಿತ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.