ಮಡಿಕೇರಿ, ಅ. 21: ಮುಸಲ್ಮಾನರು ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲರೂ ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಬೇಕೆಂದು ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿ ಕರೆ ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೂತನ ಸಮಿತಿಯ ಅಧ್ಯಕ್ಷ ಅಭಿಮನ್ಯು ಕುಮಾರ್, ವಿವಾದಾತ್ಮಕ ವ್ಯಕ್ತಿತ್ವ ಹೊಂದಿರುವ ಸಾಮ್ರಾಜ್ಯ ಶಾಹಿ ಟಿಪ್ಪುವಿನ ಜಯಂತಿ ಆಚರಿಸುವದನ್ನು ಎಲ್ಲಾ ಕೋಮಿನ ಜನರು, ರಾಜಕೀಯ ಪಕ್ಷಗಳು ಹಾಗೂ ಸಂಘ-ಸಂಸ್ಥೆಗಳು ಒಗ್ಗಟ್ಟಾಗಿ ವಿರೋಧಿಸಬೇಕೆಂದರು. ಸಮಿತಿ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದೆಯೆ ಹೊರತು ಮುಸಲ್ಮಾನರನ್ನಲ್ಲವೆಂದು ಅವರು ಸ್ಪಷ್ಟಪಡಿಸಿದರು.

ಟಿಪ್ಪು ಜಯಂತಿಗೆ ಕೊಡಗಿನಲ್ಲಿ ತೀವ್ರ ವಿರೋಧವಿರುವದನ್ನು ಜಿಲ್ಲಾಡಳಿತ ಸರ್ಕಾರದ ಗಮನಕ್ಕೆ ತರುವ ಮೂಲಕ ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ರದ್ದುಪಡಿಸಬೇಕೆಂದು ಅವರು ಒತ್ತಾಯಿಸಿದರು. ಆದರ್ಶ ವ್ಯಕ್ತಿಗಳ ಜಯಂತಿಯನ್ನು ಆಚರಿಸುವದು ಸಾಮಾನ್ಯ. ಆದರೆ, ಕೊಡಗಿನಲ್ಲಿ ಹತ್ಯೆ, ಅತ್ಯಾಚಾರ, ಮತಾಂತರಗಳ ಮೂಲಕ ಜಿಲ್ಲೆಯ 18 ಮೂಲ ನಿವಾಸಿಗಳು ಸೇರಿದಂತೆ ಎಲ್ಲರನ್ನು ನೋಯಿಸಿದ ಟಿಪ್ಪುವಿನ ಜಯಂತಿ ಆಚರಣೆ ಸರಿಯಲ್ಲವೆಂದರು.

ಜಿಲ್ಲೆಯಲ್ಲಿ ಎಲ್ಲಾ ಜಾತಿ, ಜನಾಂಗದವರು ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದರೂ ಸರ್ಕಾರ ಮಾತ್ರ ತನ್ನ ನಿರ್ಧಾರವನ್ನು ಪ್ರಕಟಿಸಿಲ್ಲ. ಪವಿತ್ರ ಖುರಾನ್‍ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲದೆ ಇರುವದರಿಂದ ಮುಸಲ್ಮಾನರಿಗೂ ಟಿಪ್ಪು ಜಯಂತಿ ಬಗ್ಗೆ ಒಲವಿಲ್ಲ. ಇದೆಲ್ಲವನ್ನು ಮನಗಂಡು ಸರ್ಕಾರ ಟಿಪ್ಪು ಜಯಂತಿ ಆಚರಣೆಯಿಂದ ಹಿಂದೆ ಸರಿಯಬೇಕೆಂದು ಅಭಿಮನ್ಯು ಕುಮಾರ್ ಒತ್ತಾಯಿಸಿದರು. ಒಂದು ವೇಳೆ ಸರ್ಕಾರ ಜಯಂತಿಯನ್ನು ಆಚರಿಸಲು ಮುಂದಾದರೆ ತೀವ್ರ ರೀತಿಯ ಹೋರಾಟವನ್ನು ನಡೆಸಲಾಗುವದೆಂದು ಅಭಿಮನ್ಯು ಕುಮಾರ್ ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಮಾಜದಲ್ಲಿ ಸಂಘರ್ಷವನ್ನು ಉಂಟು ಮಾಡುವ ಉದ್ದೇಶದಿಂದ ಪ್ರಚೋದÀÀನಕಾರಿ ಹೇಳಿಕೆಗಳನ್ನು ಸುಬ್ಬಯ್ಯ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರದ ರಾಯಭಾರಿಯಂತೆ ವರ್ತಿಸುತ್ತಿರುವ ಸುಬ್ಬಯ್ಯ ಮೊದಲು ಟಿಪ್ಪುವಿನ ಚರಿತ್ರೆಯನ್ನು ಓದಿ ಮನದಟ್ಟು ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು. ಕೊಡಗು ಜಿಲ್ಲೆಗೆ ಅಥವಾ ಕೊಡವ ಸಮಾಜಗಳಿಗೆ ಸುಬ್ಬಯ್ಯ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ ಅಭಿಮನ್ಯು ಕುಮಾರ್, ಟಿಪ್ಪುವಿನ ವೈಭವೀಕರಣಕ್ಕೆ ಜಿಲ್ಲೆಯಲ್ಲಿ ಅವಕಾಶ ನೀಡುವದಿಲ್ಲವೆಂದು ತಿಳಿಸಿದರು.

ಟಿಪ್ಪುವಿನ ಕರಾಳ ಇತಿಹಾಸ ತಿಳಿದಿದ್ದರು ಸುಬ್ಬಯ್ಯ ಏನು ತಿಳಿಯದಂತೆ ನಾಟಕವಾಡುತ್ತಿದ್ದಾರೆ. ಕೊಡವರು ಮತ್ತು ಗೌಡರ ನಡುವೆ ಸಂಘರ್ಷ ಉಂಟು ಮಾಡಲು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೊಡವ ಸಮಾಜದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಳೆದುಕೊಂಡಿರುವ ಸುಬ್ಬಯ್ಯ ಅವರನ್ನು ಜಿಲ್ಲೆಯಿಂದ ಮೊದಲು ಗಡಿಪಾರು ಮಾಡಬೇಕೆಂದು ಅಭಿಮನ್ಯು ಕುಮಾರ್ ಒತ್ತಾಯಿಸಿದರು.

ಸಮಿತಿಯ ಉಪಾಧ್ಯಕ್ಷ ಕೋಡಿ ಪೆÇನ್ನಪ್ಪ ಮಾತನಾಡಿ, ನ. 10 ರಂದು ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರದÀಲ್ಲಿ ಕಳೆದ ಸಾಲಿನ ಟಿಪ್ಪು ಜಯಂತಿಯ ಸಂದರ್ಭ ನಡೆದ ಅಹಿತಕರ ಘಟನೆಯಲ್ಲಿ ಸಾವನ್ನಪ್ಪಿದ ವಿಹಿಂಪ ಪ್ರಮುಖ ಕುಟ್ಟಪ್ಪ ಅವರ ಹುತಾತ್ಮ ದಿನವನ್ನು ಆಚರಿಸಲಾಗುವದೆಂದು ತಿಳಿಸಿದರು.

ಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಜಿಲ್ಲಾ ಸಂಚಾಲಕ ಮಾಚಿಮಾಡ ರವೀಂದ್ರ, ವಿಹಿಂಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ ಹಾಗೂ ಬಜರಂಗದಳದ ಜಿಲ್ಲಾಧ್ಯಕ್ಷ ಅಜಿತ್ ಕುಮಾರ್ ಉಪಸ್ಥಿತರಿದ್ದರು.