ಮಡಿಕೇರಿ, ನ.7 : ಟಿಪ್ಪು ಜಯಂತಿ ಆಚರಣೆ ಕೊಡಗಿನ ವ್ಯಾಪಾರಸ್ಥರ ನೆಮ್ಮದಿಗೆ ಭಂಗ ತಂದಿದ್ದು, ಸೌಹಾರ್ದತೆಯ ಜೀವನದಲ್ಲಿ ಬಿರುಕು ಉಂಟು ಮಾಡಿದೆ ಎಂದು ಆರೋಪಿಸಿರುವ ಜಿಲ್ಲಾ ಬಿಜೆಪಿ ವ್ಯಾಪಾರಿ ಪ್ರಕೋಷ್ಠದ ಅಧ್ಯಕ್ಷ ಕೆ.ಬಿ.ಗಿರೀಶ್ ಗಣಪತಿ ಹಾಗೂ ಉಪಾಧ್ಯಕ್ಷ ಆರ್.ಬಿ.ರವಿ ಜಿಲ್ಲೆಯ ವ್ಯಾಪಾರಸ್ಥರಿಗೆ ಕಷ್ಟ ನಷ್ಟಗಳು ಹೆಚ್ಚಾಗುತ್ತಿರುವದರಿಂದ ಟಿಪ್ಪು ಜಯಂತಿಯನ್ನು ವಿರೋಧಿಸುವದಾಗಿ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಶಾಂತಿ ಕದಡುವ ಯಾವದೇ ದುಷ್ಕøತ್ಯಗಳು ನಡೆದರೂ ಅದು ಹೋರಾಟಕ್ಕಾಗಿ ನಾಗರಿಕರನ್ನು ಪ್ರೇರೇಪಿಸುತ್ತಿದೆ. ಪ್ರಜಾಮೌಲ್ಯ ಮತ್ತು ನಾಡಿನ ಹಿತಕ್ಕಿಂತ ಜಯಂತಿ ಆಚರಣೆ ಮುಖ್ಯವಲ್ಲವೆಂದು ಅಭಿಪ್ರಾಯ ಪಟ್ಟಿರುವ ಅವರುಗಳು ಕಳೆದ ಬಾರಿ ಜಯಂತಿ ಆಚರಣೆಯಿಂದ ಸಾಕಷ್ಟು ಕಷ್ಟನಷ್ಟಗಳು ಸಂಭವಿಸಿದೆಯೆಂದು ಆರೋಪಿಸಿದರು.

ಕೊಡಗು ಜಿಲ್ಲೆ ಪ್ರವಾಸೋದ್ಯಮ ವನ್ನೇ ನಂಬಿಕೊಂಡಿದ್ದು, ಪ್ರವಾಸಿಗರ ಸಂಖ್ಯೆಯಲ್ಲೂ ಇಳಿಮುಖ ವಾಗಿರುವದರಿಂದ ಆರ್ಥಿಕ ಹೊಡೆತ ಬಿದ್ದಿದೆ. ಯಾರಿಗೂ ಯಾವದೇ ಲಾಭವನ್ನು ತಂದು ಕೊಡದ, ಅಮಾಯಕರ ಜೀವ ಬಲಿ ಪಡೆದ ಟಿಪ್ಪು ಜಯಂತಿಯ ಅಗತ್ಯವಿದೆಯೇ ಎಂದು ಪ್ರಶ್ನಿಸಿರುವ ಕೆ.ಬಿ.ಗಿರೀಶ್ ಹಾಗೂ ಆರ್.ಬಿ. ರವಿ, ಕೋಮು ಸೌಹಾರ್ದತೆ ಯ ನಿರ್ಮಲ ಮನಸ್ಸುಗಳನ್ನು ಕದಡುತ್ತಿರುವ ಟಿಪ್ಪು ಜಯಂತಿ ಆಚರಣೆಯನ್ನು ಪ್ರಕೋಷ್ಠ ತೀವ್ರವಾಗಿ ವಿರೋಧಿಸುವದಾಗಿ ತಿಳಿಸಿದ್ದಾರೆ.

ಟಿಪ್ಪು ಜಯಂತಿ ವಿರುದ್ಧ ವಿವಿಧ ಸಂಘ ಸಂಸ್ಥೆಗಳು ನಡೆಸುವ ಹೋರಾಟಗಳಿಗೆ ಸಂಪೂರ್ಣ ಬೆಂಬಲ ಸೂಚಿಸುವದಾಗಿ ಸ್ಪಷ್ಟಪಡಿಸಿದ್ದಾರೆ. ಸರ್ವ ಜನರ ವಿರೋಧದ ನಡುವೆಯೂ ಟಿಪ್ಪು ಜಯಂತಿಯನ್ನು ಆಚರಿಸಿ, ಅಹಿತಕರ ಘಟನೆಗಳು ಸಂಭವಿಸಿದಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಕೆ.ಬಿ.ಗಿರಿಶ್ ಗಣಪತಿ ಹಾಗೂ ಆರ್.ಬಿ.ರವಿ ಎಚ್ಚರಿಕೆ ನೀಡಿದ್ದಾರೆ.