ಮಡಿಕೇರಿ, ನ. 3: ನಾಡಿನಲ್ಲಿ ಅಶಾಂತಿ ಸೃಷ್ಟಿಯಾಗಲು ಕಾರಣ ವಾಗಿರುವ ಟಿಪ್ಪು ಜಯಂತಿಯನ್ನು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಾರ್ಯದರ್ಶಿ ವಿರುದ್ಧ ಮೊಕದ್ದಮೆ ದಾಖಲಿಸಬೇಕೆಂದು ಹಿರಿಯ ವಕೀಲ ಬಿ.ಎ.ಮಾಚಯ್ಯ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಟಿಪ್ಪು ತನ್ನ ರಾಜ್ಯವನ್ನು ಉಳಿಸಿಕೊಳ್ಳುವದಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಓರ್ವ ರಾಜನೇ ಹೊರತು ಭಾರತ ದೇಶಕ್ಕಾಗಿ ಆತ ಹೋರಾಟ ನಡೆಸಿಲ್ಲವೆಂದು ಆರೋಪಿಸಿದರು. ಟಿಪ್ಪು ಜಯಂತಿಯನ್ನು ರದ್ದು ಪಡಿಸುವÀಂತೆ ಸ್ವತ: ಮುಸ್ಲಿಮರೇ ಒತ್ತಾಯಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಧಾರ್ಮಿಕ ಭಾವನೆಯನ್ನು ಕೆಣಕಿ ಶಾಂತಿ ಕದಡುವ ಚಿಂತನೆಯುಳ್ಳ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹ ವ್ಯಕ್ತಿಯಲ್ಲವೆಂದು ಆರೋಪಿಸಿದರು. ಮುಸ್ಲಿಮರಿಗೆ ಬೇಡವಾದ ಟಿಪ್ಪು ಜಯಂತಿ ಇವರಿಗೇಕೆ ಬೇಕು ಎಂದು ಪ್ರಶ್ನಿಸಿದ ಮಾಚಯ್ಯ ಕಳೆದ ವರ್ಷ ಜಿಲ್ಲೆಯಲ್ಲಿ ಸಾವು - ನೋವುಗಳಾಗಿದ್ದರೂ ಸರಕಾರ ಎಚ್ಚೆತ್ತುಕೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ವ್ಯಕ್ತಿ ಪೂಜೆ ಇಸ್ಲಾಂ ನಲ್ಲಿ ಇಲ್ಲದೆ ಇರುವದರಿಂದ ಮುಸಲ್ಮಾನರೇ ಟಿಪ್ಪು ಜಯಂತಿಯನ್ನು ವಿರೋಧಿಸುವ ಮೂಲಕ ಸಮಾಜಕ್ಕೆ ಆದರ್ಶ ರಾಗಬೇಕೆಂದರು. ಪರ, ವಿರೋಧ ಹೇಳಿಕೆಗಳಿಂದ ಉತ್ತಮ ಸಂದೇಶ ರವಾನೆಯಾಗುವದಿಲ್ಲವೆಂದ ಅವರು ಅಂದಿನ ಕಾಲಮಾನದಲ್ಲಿ ನಡೆದು ಹೋದ ಘಟನಾವಳಿಗಳನ್ನು ಮೆಲುಕು ಹಾಕುವದರಿಂದ ದೇಶಕ್ಕೆ ಯಾವದೇ ಲಾಭವಿಲ್ಲವೆಂದರು.
ಈ ರೀತಿಯ ಜಯಂತಿಗಳನ್ನು ಆಚರಿಸಲು ಕೇಂದ್ರ ಸರಕಾರದ ಅನುಮತಿಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಮಾಚಯ್ಯ ದೇಶಕ್ಕಾಗಿ ಅನೇಕರು ಪ್ರಾಣ ತ್ಯಾಗ ಮಾಡಿದ್ದು, ಸರಕಾರ ಇವರುಗಳ ಜಯಂತಿಯನ್ನು ಯಾಕೆ ಆಚರಿಸುತ್ತಿಲ್ಲವೆಂದು ಪ್ರಶ್ನಿಸಿದರು.
ಮತ್ತೆ ರಾಜ್ಯ ಸರ್ಕಾರ ಈ ವರ್ಷದ ಟಿಪ್ಪು ಜಯಂತಿಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಹೆಗಲಿಗೆ ಹೊರಿಸಿದ್ದು, ಇದು ಅತ್ಯಂತ ಖಂಡನೀಯವೆಂದರು. ಮತ್ತೊಮ್ಮೆ ಸರಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಿ ಟಿಪ್ಪು ಜಯಂತಿ ಆಚರಣೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೂರು ಮಹೇಶ್, ಬೆಲ್ಲತಂಡ ರಾಣಿ ಮಾಚಯ್ಯ, ವಕೀಲರಾದ ದಿವ್ಯ ನಂಜಪ್ಪ ಹಾಗೂ ಕೆ.ಹರೀಶ್ ಉಪಸ್ಥಿತರಿದ್ದರು.