ಸೋಮವಾರಪೇಟೆ, ಅ.22: ಪ್ರಸಕ್ತ ವರ್ಷ ನವೆಂಬರ್ 10ರಂದು ಆಚರಿಸಲು ಉದ್ದೇಶಿಸಿರುವ ಟಿಪ್ಪು ಜಯಂತಿಗೆ ಕೊಡಗಿನಾದ್ಯಂತ ಸೂಕ್ತ ಬಂದೋಬಸ್ತ್ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಬೇಕೆಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಆಗ್ರಹಿಸಿದೆ.ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ಟಿಪ್ಪು ಸುಲ್ತಾನ್ ಅವರ ದೇಶಭಕ್ತಿಯ ಬಗ್ಗೆ ಅಧ್ಯಯನ ಮಾಡಿಯೇ ಸರ್ಕಾರ ಜಯಂತಿಯನ್ನು ಆಚರಿಸಲು ಮುಂದಾಗಿದೆ. ಸರ್ಕಾರದ ವತಿಯಿಂದ ಆಚರಿಸುತ್ತಿರುವ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿದ್ದ ಕೊಡ್ಲಿಪೇಟೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಔರಂಗಜೇಬ್ ಮಾತನಾಡಿ, ಟಿಪ್ಪು ಸುಲ್ತಾನ್ ಓರ್ವ ಮುಸ್ಲಿಂ ಎಂಬ ಕಾರಣಕ್ಕೆ ಆತನ ತ್ಯಾಗ ಬಲಿದಾನವನ್ನು ಕತ್ತಲೆಗೆ ಸರಿಸಲಾಗಿದೆ. ಬಿಜೆಪಿ, ಆರ್‍ಎಸ್‍ಎಸ್ ಸೇರಿದಂತೆ ಸಂಘ ಪರಿವಾರದವರು ಸುಳ್ಳು ಸೃಸ್ಟಿಸುತ್ತಿದ್ದಾರೆ. ಕಳೆದ ಬಾರಿಯ ಆಚರಣೆ ಸಂದರ್ಭ ಕೊಡ್ಲಿಪೇಟೆಯಲ್ಲೂ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರಸಕ್ತ ಸಾಲಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಎಲ್ಲೆಡೆಯೂ ಅವಕಾಶ ನೀಡಬೇಕು. ಬಂದೋಬಸ್ತ್ ನೆಪದಲ್ಲಿ ಕಾರ್ಯಕ್ರಮವನ್ನು ಹತ್ತಿಕ್ಕಬಾರದು ಎಂದರು.

ಇದೀಗ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸುತ್ತಿದ್ದು, ಮುಂದಿನ ದಿನಗಳಲ್ಲಿ ದಲಿತ ದೌರ್ಜನ್ಯ ಕಾಯ್ದೆಯನ್ನೂ ಕಸಿಯುವ ಹುನ್ನಾರ ನಡೆಸಿದೆ. ಇದೇ ಬಿಜೆಪಿಯ ಅಜೆಂಡವಾಗಿದೆ. ಮುಸ್ಲಿಂ, ದಲಿತರು ಮತ್ತು ಜಾತ್ಯತೀತವಾದಿಗಳು ಇಂತಹ ಚಟುವಟಿಕೆಗಳನ್ನು ಖಂಡಿಸಬೇಕಿದೆ ಎಂದರು.

ಗೋಷ್ಠಿಯಲ್ಲಿ ಕೊಡ್ಲಿಪೇಟೆ ವಲಯ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್, ಪ್ರಮುಖರಾದ ಸಾಬ್‍ಜಾನ್ ಅವರುಗಳು ಉಪಸ್ಥಿತರಿದ್ದರು.