*ಗೋಣಿಕೊಪ್ಪಲು, ನ. 6: ಜನ ವಿರೋಧದ ನಡುವೆಯೂ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವದನ್ನು ಅತ್ತೂರು ಪಂಚಾಯಿತಿ ಖಂಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅಧ್ಯಕ್ಷೆ ಕೆ.ಡಿ. ಆಶಾಲತಾ ಮತ್ತು ಉಪಾಧ್ಯಕ್ಷ, ಕೆ.ಡಿ. ಪೂವಣ್ಣ ಟಿಪ್ಪು ಜಯಂತಿ ಆಚರಣೆಯ ವಿರುದ್ಧ ಪಂಚಾಯಿತಿಯಲ್ಲಿ ತುರ್ತು ಸಭೆ ಕರೆದು ಖಂಡನಾ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಜನಾಂಗೀಯ ಹಾಗೂ ಮತೀಯ ಸಾಮರಸ್ಯವನ್ನು ಕದಡುವ ಟಿಪ್ಪು ಜಯಂತಿ ಕೊಡಗಿನಿಂದ ದೂರ ಉಳಿದರೆ ಒಳಿತು. ತಾ. 10 ರಂದು ನಡೆಯುವ ಟಿಪ್ಪು ಜಯಂತಿ ಆಚರಣೆಯಿಂದ ಜಿಲ್ಲೆಯ ಶಾಂತಿ ಕದಡಲಿದೆ. ಶಾಂತಿಯಿಂದ ಕೂಡಿದ ಜಿಲ್ಲೆಯಲ್ಲಿ ಅಶಾಂತಿಯ ಬೀಜ ಬಿತ್ತಲು ಸರಕಾರ ಹೊರಟಿದೆ. ಇದು ಖಂಡನೀಯ ಎಂದರು. ಟಿಪ್ಪು ಜಯಂತಿ ಆಚರಣೆಯ ಸಂದÀರ್ಭ ನಷ್ಟ ಸಂಭವಿಸಿದರೆ ಇದಕ್ಕೆ ಸರಕಾರವೇ ಹೊಣೆಯಾಗಲಿದೆ. ಯಾವದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಬಾರದು. ಟಿಪ್ಪು ಜಯಂತಿ ಆಚರಣೆಯ ಬದಲು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜಯಂತಿ, ಅಬ್ದುಲ್ ಕಲಾಂ ಜಯಂತಿ ಸೇರಿದಂತೆ ದೇಶಕ್ಕಾಗಿ ಹೋರಾಡಿದ ವೀರ ಮಹಾತ್ಮರ ಜಯಂತಿಗಳನ್ನು ಆಚರಿಸಲಿ ಎಂದರು.

ಟಿಪ್ಪು ಕೊಡವರ ಧಮನಕ್ಕೆ ಕಾರಣಕರ್ತನಾದವನು, ತನ್ನ ಸಾಮ್ರಾಜ್ಯದ ವಿಸ್ತರಣೆಗಾಗಿ ಬಿಟೀಷರೊಂದಿಗೆ ಹೋರಾಡಿದವನು. ದೇಶಕ್ಕಾಗಿ ಹೋರಾಡಿದ ವ್ಯಕ್ತಿ ಅಲ್ಲ. ಈತನ ಜಯಂತಿಯ ಆಚರಣೆ ಅರ್ಥ ಪಡೆದುಕೊಳ್ಳುವದಿಲ್ಲ. ಹಿಂದೂಗಳ ಧಾರ್ಮಿಕ ಕೇಂದ್ರಗಳನ್ನು, ಹಿಂದೂಗಳನ್ನು ನಾಶ ಮಾಡಿದ ಕ್ರೂರಿ ಎಂದರು.

ಗೋಷ್ಠಿಯಲ್ಲಿ ಕುಲ್ಲಚಂಡ ಚಿಣ್ಣಪ್ಪ, ಗುಮ್ಮಟ್ಟಿರ ದರ್ಶನ್ ನಂಜಪ್ಪ, ಎಂ.ಜೆ. ಮ್ಯಾಥ್ಯು, ಹೆಚ್.ಡಿ. ಶ್ರೀನಿವಾಸ್, ಜಿ.ಎಸ್. ನಂಜಪ್ಪ, ಜಯಂತಿ, ಕೆ.ಎಂ. ರೇಖಾ, ಆರ್. ಸಾವಿತ್ರಮ್ಮ, ಪಿ.ಎಂ. ಲಕ್ಷ್ಮಿ, ಬಿ.ಕೆ. ದಿನೇಶ್, ಜೆ.ಎ. ಕವಿತಾ, ವೈ.ಬಿ. ಪಾಲ, ಪಿ.ಕೆ. ಬೋಜ, ತೇಜಾ ಪೂವಣ್ಣ, ಹೆಚ್.ಎ. ಮೀರಾ, ಮುತ್ತ ರೈ ಉಪಸ್ಥಿತರಿದ್ದರು.