ಮಡಿಕೇರಿ, ನ. 3: ಬೇಡ... ಬೇಕು ಎಂಬ ವಾದ - ವಿವಾದ ಗೊಂದಲದ ನಡುವೆ ಕೊಡಗು ಜಿಲ್ಲೆ 2015ರ ನವೆಂಬರ್ 10ರ ಆ ಮರೆಯಲಾಗದ ಮತ್ತೊಂದು ದಿನವನ್ನು ಎದುರಿಸ ಬೇಕಾದ ಕಾಲ ಸನ್ನಿಹಿತವಾಗುತ್ತಿದೆ. ಕಳೆದ ವರ್ಷದಿಂದ ರಾಜ್ಯ ಸರಕಾರ ಜಾರಿಗೆ ತಂದಿರುವ ಟಿಪ್ಪು ಜಯಂತಿಯ ಎರಡನೆಯ ವರ್ಷಾ ಚರಣೆಗೆ ಸರಕಾರ ಟೊಂಕಕಟ್ಟಿ ನಿಂತಿದೆ. ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿಗೆ ವ್ಯಾಪಕ ವಿರೋಧ ದಿನೇ ದಿನೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಕೆಲವರು ಟಿಪ್ಪು ಜಯಂತಿ ಆಚರಿಸ ಬೇಕೆಂಬ ನಿಲುವು ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರಕಾರವೂ ಟಿಪ್ಪು ಜಯಂತಿ ಆಚರಿಸುವದನ್ನು ಸವಾಲಾಗಿ ತೆಗೆದುಕೊಂಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸರಕಾರದ ಆದೇಶ ಪಾಲಿಸಲು ಖಾಕಿಪಡೆ ಸಿದ್ಧಗೊಳ್ಳುತ್ತಿದೆ. ಮಾನಸಿಕವಾಗಿ ಹಾಗೂ ದೈಹಿಕ ರಕ್ಷಣೆಯೊಂದಿಗೆ ಆ ದಿನವನ್ನು ಎದುರಿಸಲು ಪೊಲೀಸರು ಸಿದ್ಧಗೊಳ್ಳುತ್ತಿದ್ದಾರೆ.
ಕಳೆದ ವರ್ಷ ಮಡಿಕೇರಿಯಲ್ಲಿ ನಡೆದ ಕೋಮು ಘರ್ಷಣೆ - ಗಲಭೆ, ಲಾಠಿ ಚಾರ್ಜ್ ಬಹುಶಃ ಕೊಡಗಿನ ಇತಿಹಾಸದಲ್ಲಿ ಮರೆಯಲಾಗದಂತದ್ದು. ಕಳೆದ ವರ್ಷದ ಸನ್ನಿವೇಶದಿಂದ ಎಚ್ಚೆತ್ತಿರುವ ಪೊಲೀಸ್ ಇಲಾಖೆ ಈ ಬಾರಿ ಅಂತಹ ಘಟನೆ ನಡೆಯದಂತೆ ತಡೆಯಲು ಈಗಾಗಲೇ ಸಿದ್ಧವಾಗಿದೆ. ಎಸ್ಪಿ ರಾಜೇಂದ್ರ ಪ್ರಸಾದ್ ಅವರು ತಮ್ಮ ಮಾತಿನಲ್ಲಿ ಶಾಂತಿ ಕಾಪಾಡುವ ದರೊಂದಿಗೆ ಗಲಭೆಕೋರರನ್ನು ನಿಯಂತ್ರಿಸುವದು ಇಲಾಖೆಯ ಕರ್ತವ್ಯ. ಪೊಲೀಸರು ಶತಾಯ - ಗತಾಯವಾಗಿ ಈ ಕೆಲಸವನ್ನು ಎಲ್ಲಾ ರೀತಿಯಲ್ಲಿ ಮಾಡಿಯೇ ಮಾಡುತ್ತಾರೆ ಎಂಬ ಸೂಚ್ಯವನ್ನು ಹೊರಗೆಡ ವಿದ್ದಾರೆ. ಆದರೆ ಇಲಾಖೆಯ ಸಿದ್ಧತೆಗಳ ಬಗ್ಗೆ ಅವರು ಅಧಿಕೃತವಾದ ಮಾಹಿತಿಯನ್ನು ತಕ್ಷಣಕ್ಕೆ ನೀಡಲು ನಿರಾಕರಿಸಿದ್ದಾರೆ.
‘ಶಕ್ತಿ'ಗೆ ತಿಳಿದುಬಂದ ಮಾಹಿತಿ ಯಂತೆ ಹಾಗೂ ಗೋಚರ ವಾಗುತ್ತಿರುವ ಚಿತ್ರಣದಂತೆ ಪೊಲೀಸ್ ಇಲಾಖೆಯ ಚಟುವಟಿಕೆ ಬಿರುಸು ಗೊಂಡಿದೆ. ಜಿಲ್ಲೆಯ 17 ಪೊಲೀಸ್ ಠಾಣೆಗಳಿಗೂ ನಿರ್ದಿಷ್ಟ ಸೂಚನೆ - ಮಾರ್ಗಸೂಚಿ ರವಾನೆಯಾಗಿದೆ. ಹೊಸ ಹೊಸ ಲಾಠಿಗಳು ಜಿಲ್ಲೆಗೆ ಬಂದಿವೆ. ಇದರೊಂದಿಗೆ ಕ್ರಿಕೆಟ್ ಬ್ಯಾಟ್ಸ್ಮೆನ್ಗಳು,
(ಮೊದಲ ಪುಟದಿಂದ) ಹಾಕಿ ಗೋಲ್ ಕೀಪರ್ಗಳು ದೈಹಿಕವಾಗಿ ರಕ್ಷಣೆಗೆ ಹಾಕಿಕೊಳ್ಳುವಂತಹ ಪರಿಕರಗಳು (ಬಾಡಿ ಪ್ರೊಟೆಕ್ಟರ್) ಧೂಳು ತಟ್ಟಿ ಹೊರಬಂದಿವೆ. ಹೊಸ ಪರಿಕರಗಳು ಜಿಲ್ಲೆಯ ಪೊಲೀಸ್ ಇಲಾಖೆಗೆ ಬಂದಿದ್ದು, ಎಲ್ಲಾ ಠಾಣೆಗಳಲ್ಲೂ ಇದರ ‘ರಿಹರ್ಸಲ್' ಕೂಡ ಈಗಾಗಲೇ ನಡೆಯುತ್ತಿವೆ.
ಕಳೆದ ವರ್ಷ ಟಿಪ್ಪು ಜಯಂತಿಯ ಸಂದರ್ಭ ಮೊಕದ್ದಮೆಗೆ ಒಳಗಾದವರು, ರೌಡಿಶೀಟರ್ಗಳು, ಕೋಮು ದಳ್ಳುರಿಯ ವ್ಯಕ್ತಿತ್ವದಂತೆ ಪೊಲೀಸ್ ದಾಖಲೆಯಲ್ಲಿರುವವರನ್ನು ಸೆಕ್ಷನ್ 107ರಂತೆ ನೋಟೀಸ್ ನೀಡಿ ತಹಶೀಲ್ದಾರ್ ಕೋರ್ಟ್ಗೆ ಬುಲಾವ್ ಮಾಡಿ ಮುಚ್ಚಳಿಕೆ ಪಡೆದುಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 600ಕ್ಕೂ ಅಧಿಕ ಮಂದಿಗೆ ಈ ಬುಲಾವ್ ಬಂದಿದೆ. ಮಡಿಕೇರಿ ನಗರ ಠಾಣೆಯಲ್ಲೇ ಸುಮಾರು 120 ಮಂದಿಗೆ ಈ ಪೊಲೀಸ್ ಕರೆಯೋಲೆ ಹೋಗಿರುವದಾಗಿ ತಿಳಿದುಬಂದಿದೆ. ಪೊಲೀಸ್ ಜೀಪ್- ವ್ಯಾನ್ಗಳ ಗಾಜುಗಳಿಗೆ ರಕ್ಷಣೆಯಾಗಿ ನೆಟ್ಗಳನ್ನು ಅಳವಡಿಸಲಾಗಿದ್ದು, ಬಹುತೇಕ ಪೊಲೀಸ್ ವಾಹನಗಳು ಹೊಸ ರೂಪದಲ್ಲಿ ತಿರುಗಾಡುತ್ತಿವೆ. ಹೊರ ಭಾಗದಿಂದ ಸುಮಾರು 40ಕ್ಕೂ ಅಧಿಕ ಕೆ.ಎಸ್.ಆರ್.ಪಿ. ತುಕಡಿಗಳು, ರ್ಯಾಪಿಡ್ ಆ್ಯಕ್ಷನ್ ಫೋರ್ಸ್ನ ಗಂಭೀರ ವದನದ ರಕ್ಷಕರು ಅಧಿಕ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸಲಿದ್ದಾರೆನ್ನಲಾಗಿದೆ. ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ಮುಖ್ಯ ಪಟ್ಟಣಗಳಲ್ಲಿ ತಕ್ಷಣದ ಪರಿಸ್ಥಿತಿಗೆ ತಾತ್ಕಾಲಿಕ ಜೈಲುಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದೂ ತಿಳಿದುಬಂದಿದೆ. ಪೊಲೀಸ್ ಹದ್ದುಗಣ್ಣಿನಲ್ಲಿರುವ ಕೆಲವರೂ ಈಗಾಗಲೇ ಊರುಬಿಟ್ಟಿದ್ದು, ಟಿಪ್ಪು ಜಯಂತಿ ಮುಗಿದ ಬಳಿಕವಷ್ಟೇ ಜಿಲ್ಲೆಗೆ ಬರುವದಾಗಿ ಹೇಳಿ ತೆರಳಿರುವದಾಗಿಯೂ ಮಾತು ಕೇಳಿಬಂದಿದೆ.
ಪ್ರಚೋದನೆ ಮಾಡುವವರನ್ನು ಗಲಭೆ ಸೃಷ್ಟಿಸುವವರನ್ನು ಬಳ್ಳಾರಿಯ ಕಾರಾಗೃಹಕ್ಕೆ ರವಾನಿಸುವ ನಿಟ್ಟಿನಲ್ಲೂ ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ ಎಂಬ ಅಂಶವೂ ಪತ್ರಿಕೆಗೆ ತಿಳಿದುಬಂದಿದೆ. ಕೆಲವು ಮುಖಂಡರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸುವದು... ಕೆಲವು ದಿನಗಳ ಮುನ್ನವೇ ಸೆಕ್ಷನ್ ಜಾರಿಯಾಗುವ ಸಾಧ್ಯತೆಗಳೂ ಇವೆ ಎಂಬದು ಮತ್ತೊಂದು ಮೂಲದ ಮಾಹಿತಿಯಾಗಿದೆ.