ಶ್ರೀಮಂಗಲ, ನ.7 : ಟಿಪ್ಪು ಜಯಂತಿ ಆಚರಣೆಗೆ ನಿಷೇಧ ಕೋರಿ ಪಿ.ಐ.ಎಲ್ ಸಲ್ಲಿಸಿದ್ದ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರೊಂದಿಗೆ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರು ಬೆಂಗಳೂರಿನ ವಿಕಾಸ ಸೌಧದಲ್ಲಿ ಸಭೆ ನಡೆಸಿದರು.

ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಅವರ ಅಧ್ಯಕ್ಷತೆಯಲ್ಲಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನೇತೃತ್ವದಲ್ಲಿ ಕನ್ನಡ ಸಂಸ್ಕøತಿ ಇಲಾಖೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅರ್ಜಿದಾರ ಮಂಜು ಚಿಣ್ಣಪ್ಪ ಅವರಿಂದ ಅಧಿಕಾರಿಗಳು ವಿವರಣೆ ಪಡೆದರು.

ಟಿಪ್ಪು ಜಯಂತಿಯನ್ನು ನಿಷೇಧಿಸುವ ನಿಟ್ಟಿನಲ್ಲಿ ಪೂರಕವಾದ ಹಲವು ಅಂಶಗಳನ್ನು ದಾಖಲೆ ಸಹಿತ ಈ ಸಂಧರ್ಭ ಅರ್ಜಿದಾರರು ವಿವರಿಸಿದರು. ಇದರ ಹೊರತಾಗಿಯೂ ಸರಕಾರ ಬಲವಂತವಾಗಿ ಟಿಪ್ಪು ಜಯಂತಿ ಆಚರಿಸಲು ಮುಂದಾದರೆ, ಉಂಟಾಗುವ ಅಹಿತಕರ ಘಟನೆಗೆ ಸರಕಾರವೇ ನೇರ ಹೊಣೆ ಹೊರಬೇಕು ಎಂದು ಮಂಜು ಚಿಣ್ಣಪ್ಪ ಹೇಳಿದರು. ಯಾವದೇ ಕಾರಣಕ್ಕೂ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಿಸಲೇಬಾರದು. ರಾಜ್ಯದಲ್ಲಿಯೂ ಸಾರ್ವಜನಿಕ ಹಣ ಬಳಸಿ ಇದರ ಆಚರಣೆ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದರು.

ಈ ಕುರಿತಂತೆ ತಾ. 8(ಇಂದು) ಮಧ್ಯಾಹ್ನದ ವೇಳೆಗೆ ಮುಖ್ಯ ಕಾರ್ಯದರ್ಶಿ ಅವರ ಕಚೇರಿಯಲ್ಲಿ ತೀರ್ಪು ಹೊರಬೀಳಲಿದೆ ಎಂದು ಗೊತ್ತಾಗಿದೆ. ಉಚ್ಛನ್ಯಾಯಾಲಯದಲ್ಲಿ ಟಿಪ್ಪು ಜಯಂತಿ ಆಚರಣೆ ನಿಷೇಧಿಸುವಂತೆ ಪಿ.ಐ.ಎಲ್ ಸಲ್ಲಿಸಿದ್ದ ವಿಚಾರಣೆ ಸಂದರ್ಭ ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸುವಂತೆ ನ್ಯಾಯಾಲಯ ಅರ್ಜಿದಾರ ಮಂಜು ಚಿಣ್ಣಪ್ಪ ಅವರಿಗೆ ಸೂಚಿಸಿತ್ತು.

ಈ ಸಂದರ್ಭ ಅರ್ಜಿದಾರರ ವಕೀಲ ಪವನ್ ಚಂದ್ರ ಶೆಟ್ಟಿ, ಕನ್ನಡ ಸಂಸ್ಕøತಿ ಇಲಾಖೆಯ ನಿರ್ದೇಶಕ ಗೋವಿಂದರಾಜು, ಯುಕೊ ಸಂಘಟನೆಯ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ತೇಲಪಂಡ ಶಶಿ ಕುಮಾರ್ ನಾಣಯ್ಯ ಹಾಜರಿದ್ದರು.