ಕುಶಾಲನಗರ, ನ. 9: ಪರ-ವಿರೋಧಗಳ ನಡುವೆ ಸಂಘರ್ಷದ ಹಾದಿ ಹಿಡಿಯುತ್ತಿರುವ ಟಿಪ್ಪು ಜಯಂತಿ ಸಂದರ್ಭ ಜಿಲ್ಲೆಯಲ್ಲಿ ಯಾವದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ಕಲ್ಪಿಸಬಾರದು ಎಂದು ಕೊಡಗು ಜಿಲ್ಲಾ ದಲಿತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಡಿ. ಅಣ್ಣಯ್ಯ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ದಿನಗಳಿಂದ ಟಿಪ್ಪು ಜಯಂತಿ ವಿಷಯಕ್ಕೆ ಸಂಬಂಧಿಸಿದಂತೆ ಪರ ವಿರೋಧ ಹೇಳಿಕೆಗಳು ಪ್ರಕಟಗೊಳ್ಳುತ್ತಿದ್ದು ಈ ಮೂಲಕ ನಾಡಿನ ಜನರಲ್ಲಿ ಗೊಂದಲ ಮೂಡುತ್ತಿರುವದು ಕಂಡುಬಂದಿದೆ. ಜಿಲ್ಲೆಯಲ್ಲಿ ಭಯ ಮಿಶ್ರಿತ ವಾತಾವರಣ ಉಂಟಾಗಿದ್ದು, ಸಂಘ-ಸಂಸ್ಥೆಗಳು ಪೊಲೀಸರಿಗೆ ಸಹಕಾರ ಮಾಡಿದಲ್ಲಿ ಮಾತ್ರ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದಿದ್ದಾರೆ.

ತಾ. 10 ರಂದು ನಡೆಯಲಿರುವ ಟಿಪ್ಪು ಜಯಂತಿ ಸಂದರ್ಭ ಜನರಿಗೆ ಯಾವದೇ ರೀತಿಯ ತೊಂದರೆ ಉಂಟಾಗದಂತೆ ಜಿಲ್ಲಾಡಳಿತ ಎಚ್ಚರವಹಿಸಬೇಕಿದೆ. ಕಳೆದ ಬಾರಿ ಜಯಂತಿ ಹೆಸರಿನಲ್ಲಿ ನಡೆದ ಅಹಿತಕರ ಘಟನೆಗಳಿಂದ ಜಿಲ್ಲೆಯಲ್ಲಿ ಅಶಾಂತಿಯೊಂದಿಗೆ ಪ್ರವಾಸೋದ್ಯಮ ಸಂಪೂರ್ಣ ಕುಸಿದಿತ್ತು. ಜಿಲ್ಲೆಯಲ್ಲಿ ಆಗಾಗ್ಗೆ ಕೆಲವು ಕಹಿ ಘಟನೆಗಳು ಪುನರಾವರ್ತನೆಗೊಳ್ಳುತ್ತಿರುವದು ಈ ಮೂಲಕ ಜಿಲ್ಲೆಯ ವ್ಯಾಪಾರ ವಹಿವಾಟುಗಳು ಸಂಪೂರ್ಣ ನಷ್ಟಕ್ಕೆ ಒಳಗಾಗುತ್ತಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಅಣ್ಣಯ್ಯ ಆಗ್ರಹಿಸಿದ್ದಾರೆ.

ಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಗಣೇಶ್, ಕಾರ್ಯದರ್ಶಿ ಗೋವಿಂದ ಇದ್ದರು.