ಸೋಮವಾರಪೇಟೆ, ಅ.22: ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲು ವಿರೋಧ ವ್ಯಕ್ತಪಡಿಸುತ್ತಿರುವ ಭಾರತೀಯ ಜನತಾ ಪಾರ್ಟಿಯ ಮುಖಂಡರುಗಳು, ಚುನಾವಣೆಗಳಲ್ಲಿ ತಮ್ಮ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಮತಗಳು ಬೇಡ ಎಂದು ಬಹಿರಂಗವಾಗಿ ಘೋಷಿಸಲಿ ಎಂದು ಸಿಪಿಐಎಂಎಲ್ ಪಕ್ಷ ಸವಾಲು ಹಾಕಿದೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಿ.ಎಸ್. ನಿರ್ವಾಣಪ್ಪ, ಮಹಾನ್ ದೇಶಭಕ್ತನಾಗಿದ್ದ ಟಿಪ್ಪು ಓರ್ವ ಮುಸ್ಲಿಂ ಎಂಬ ಕಾರಣಕ್ಕಾಗಿ ಜಯಂತಿಯನ್ನು ಬಿಜೆಪಿ ವಿರೋಧಿಸುತ್ತಿರುವದು ಖಂಡನೀಯ ಎಂದರು.

ಟಿಪ್ಪು ಜಯಂತಿಯ ಬಗ್ಗೆ ಜಿಲ್ಲೆಯಲ್ಲಿ ಪರ-ವಿರೋಧ ಹೇಳಿಕೆಗಳು ವ್ಯಕ್ತವಾಗುತ್ತಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೌನಕ್ಕೆ ಶರಣಾಗಿರುವದು ಖಂಡನೀಯ. ಕರ್ನಾಟಕ ಸರಕಾರವು ಕಳೆದ ವರ್ಷದಿಂದ ಟಿಪ್ಪು ಜಯಂತಿಯನ್ನು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಸಾರ್ವಜನಿಕವಾಗಿ ಆಚರಿಸಬೇಕೆಂದು ಆದೇಶ ನೀಡಿದೆ. ಅದರಂತೆ ಪ್ರಸಕ್ತ ಸಾಲಿನಲ್ಲಿಯೂ ಟಿಪ್ಪು ಜಯಂತಿಯನ್ನು ಜಾತಿ, ಮತ, ಬೇಧವಿಲ್ಲದೆ ಆಚರಿಸುವಂತಾಗಬೇಕು ಎಂದರು.

ಕೊಡಗು ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುತ್ತಿದ್ದು, ಇಲ್ಲಿ ಎಲ್ಲವೂ ಸಂಘ ಪರಿವಾರದ ಕಟ್ಟಾಜ್ಞೆಯಂತೆ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾ ದಳ ಪಕ್ಷಗಳು ಬಿಜೆಪಿಯ ಆಕ್ಟೋಪಸ್ ಹಿಡಿತದಲ್ಲಿರುವಂತೆ ನಲುಗುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮನುವಾದ ಮತ್ತು ಸಂಘ ಪರಿವಾರವನ್ನು ತೀವ್ರವಾಗಿ ವಿರೋಧಿಸಿ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದರು. ಆದರೆ ಬಿಜೆಪಿಯವರು 125 ವರ್ಷಗಳ ನಂತರ ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಆಚರಿಸಲು ಮುಂದಾಗಿರುವದು ಹಾಸ್ಯಾಸ್ಪದವಾಗಿದೆ ಎಂದು ಲೇವಡಿ ಮಾಡಿದರು.

ಕೊಡಗಿನ ದೇವಟ್‍ಪರಂಬು ಎಂಬಲ್ಲಿ ಸಾವಿರಾರು ಕೊಡವರನ್ನು ಟಿಪ್ಪು ಹತ್ಯೆ ಮಾಡಿದ್ದಾನೆ ಎಂದು ನಾಚಪ್ಪ ಅವರು ಸುಳ್ಳು ಹೇಳುತ್ತಿದ್ದಾರೆ. ಕೊಡಗಿನಲ್ಲಿ ಈ ಹಿಂದೆ ದಲಿತರು ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದರು. ದಲಿತರನ್ನು ಅತ್ಯಂತ ನಿಕೃಷ್ಟವಾಗಿ ಕಾಣಲಾಗುತ್ತಿತ್ತು. ಈ ಬಗ್ಗೆ ಪಟ್ಟೋಲೆ ಪಳಮೆಯಲ್ಲೂ ಉಲ್ಲೇಖವಿದೆ. ಆದರೆ ಟಿಪ್ಪು ಎಲ್ಲರನ್ನೂ ಸಮಾನತೆಯಿಂದ ಕಾಣುತ್ತಾ, ಅಸ್ಪøಶ್ಯತೆಯನ್ನು ಹೋಗಲಾಡಿಸಲು ಶ್ರಮಿಸಿದ ಮಹಾನ್ ನಾಯಕ ಎಂದು ನಿರ್ವಾಣಪ್ಪ ಸಮರ್ಥಿಸಿಕೊಂಡರು.

ನವೆಂಬರ್ 10ರಂದು ಟಿಪ್ಪು ಜಯಂತಿಯನ್ನು ಆಚರಿಸಲು ಸರ್ಕಾರ ಆದೇಶ ನೀಡಿರುವದು ಸ್ವಾಗತಾರ್ಹ. ಇದನ್ನು ಅರ್ಥಪೂರ್ಣವಾಗಿ ಆಚರಿಸಲೇಬೇಕು. ಸರಕಾರದ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ಪಂಗಡದ, ಧರ್ಮದ ಜನರು ಅವರ ಪ್ರಜಾಸತ್ತಾತ್ಮಕ ಹಕ್ಕನ್ನು ಕಸಿದುಕೊಳ್ಳದಂತೆ ಜಾಗೃತಿಗೊಳಿಸಿ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಆರ್. ಮಂಜುನಾಥ್, ಪದಾಧಿಕಾರಿ ಎಚ್.ಈ. ಸಣ್ಣಪ್ಪ ಉಪಸ್ಥಿತರಿದ್ದರು.