ಶ್ರೀಮಂಗಲ, ನ. 4: ಟಿಪ್ಪು ಜಯಂತಿ ಆಚರಣೆಗೆ ತಡೆ ಕೋರಿ ಉಚ್ಚ ನ್ಯಾಯಾಲಯದಲ್ಲಿ ಪಿ.ಐ.ಎಲ್ ಸಲ್ಲಿಸಿದ್ದ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಶುಭಾಷ್ ಚಂದ್ರ ಕೌಟಿಯಾ ಅವರನ್ನು ಭೇಟಿ ಮಾಡಿ ಸಂಪೂರ್ಣ ವಿವರಗಳುಳ್ಳ ಮನವಿ ಪತ್ರವನ್ನು ಸಲ್ಲಿಸಿ, ಟಿಪ್ಪು ಜಯಂತಿ ಆಚರಣೆಯನ್ನು ಸ್ಥಗಿತಗೊಳಿಸುವಂತೆ ಹಾಗೂ ಇದಕ್ಕೆ ಪೂರಕವಾದ ವಿಚಾರಗಳನ್ನು ಮನವರಿಕೆ ಮಾಡಿದರು.
ಉಚ್ಚನ್ಯಾಯಾಲಯದಲ್ಲಿ ಟಿಪ್ಪು ಜಯಂತಿಗೆ ತಡೆ ಮಾಡುವಂತೆ ಕೋರಿ ಪಿ.ಐ.ಎಲ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಬೂದಿಹಾಳ್ ಅವರ ವಿಭಾಗೀಯ ಪೀಠ ಸರಕಾರದ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಆದರೂ ಟಿಪ್ಪು ಜಯಂತಿ ಆಚರಣೆ ಸಚಿವ ಸಂಪುಟದ ತೀರ್ಮಾನವಾಗಿದ್ದು, ಇದರಲ್ಲಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಈ ಬಗ್ಗೆ ಮತ್ತೊಮ್ಮೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸುವಂತೆ ಅರ್ಜಿದಾರ ಮಂಜು ಚಿಣ್ಣಪ್ಪ ಅವರಿಗೆ ನಿರ್ದೇಶಿಸಿತು. ತಾ. 8 ಕ್ಕೆ ವಿಚಾರಣೆಯನ್ನು ಮುಂದೂಡಿದ್ದು ಇದರೊಳಗೆ ಮುಖ್ಯ ಕಾರ್ಯದರ್ಶಿಯವರು ಅರ್ಜಿದಾರರ ಮನವಿಯನ್ನು ಪರಿಶೀಲಿಸಿ, ಸರಕಾರದ ನಿರ್ಧಾರವನ್ನು ನ್ಯಾಯಾಲಯಕ್ಕೆ ಒದಗಿಸುವಂತೆ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಮಂಜು ಚಿಣ್ಣಪ್ಪ ಅವರು, ಟಿಪ್ಪುವಿನ ಜನ್ಮ ದಿನಾಂಕದ ಗೊಂದಲ, ಕೊಡಗು ಜಿಲ್ಲೆಯಲ್ಲಿ ಆತನ ಕ್ರೌರ್ಯ, ಕೊಡವರ ಮೇಲೆ ನಡೆಸಿದ ನರಮೇಧ ಹಾಗೂ ಮತಾಂತರ, ಕಳೆದ ವರ್ಷ ಟಿಪ್ಪು ಜಯಂತಿ ಸಂದರ್ಭ ಹಿಂಸಾಚಾರ ಹಾಗೂ ಕೊಲೆ ಇತ್ಯಾದಿ ವಿಚಾರಗಳ ಬಗ್ಗೆ ಮುಖ್ಯ ಕಾರ್ಯದರ್ಶಿ ಅವರಿಗೆ ವಿವರಿಸಿದರು.
40 ನಿಮಿಷ ಅಹವಾಲು ಆಲಿಸಿ ಮಾತನಾಡಿದ ಮುಖ್ಯಕಾರ್ಯದರ್ಶಿ ಅವರು ಕೊಡಗು ಶಾಂತಿಯುತ ಜಿಲ್ಲೆಯಾಗಿದ್ದು ಇಲ್ಲಿ ಶಾಂತಿ ಕದಲುವ ಯಾವದೇ ಕೆಲಸ ಆಗಬಾರದು. ಶಾಂತಿಯುತವಾದ ಹಾಗೂ ಸುಸಂಸ್ಕøತ, ಘನತೆ, ಗಾಂಭೀರ್ಯದ ಕೊಡವ ಜನಾಂಗದಲ್ಲಿ ಯಾವದೇ ರೀತಿಯಲ್ಲಿ ತೊಂದರೆಯಾಗುವದು ವೈಯಕ್ತಿಕ ನೋವಿದೆ. -ಕರ್ನಾಟಕದಲ್ಲಿ ಕೊಡವರ ಬಗ್ಗೆ ವಿಶೇಷ ಅಭಿಮಾನ, ಗೌರವ ಸರಕಾರಕ್ಕಿದೆ. ಕೊಡವರಿಗೆ ತಾವು ಅಲ್ಪಸಂಖ್ಯಾತರು ಎನ್ನುವ ಭಾವನೆ ಎಂದಿಗೂ ಬರಬಾರದು ಎಂದು ಹೇಳಿದರು.
ಟಿಪ್ಪು ಜಯಂತಿ ಕೊಡಗಿನಲ್ಲಿ ಆಚರಣೆಗೆ ತಡೆ ಕೇಳುತ್ತಿದ್ದೀರಾ ಅಥವಾ ಇಡೀ ರಾಜ್ಯದಲ್ಲಿ ತಡೆ ಮಾಡುವಂತೆ ಕೇಳುತ್ತಿದ್ದೀರಾ ಎಂದು ಮುಖ್ಯ ಕಾರ್ಯದರ್ಶಿ ಹಲವು ಬಾರಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಂಜು ಚಿಣ್ಣಪ್ಪ, ಈ ಬಗ್ಗೆ ಮೊದಲು ಸರಕಾರಕ್ಕೆ ಸಲ್ಲಿಸಿದ ಹಾಗೂ ನ್ಯಾಯಾಲಯಕ್ಕೆ ಮನವಿಯಲ್ಲಿ ಕೊಡಗಿಗೆ ಸೀಮಿತವಾಗಿ ಈ ಆಚರಣೆಗೆ ತಡೆ ಕೋರಲಾಗಿದೆ. ಆದರೆ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿ ಪಿ.ಐ.ಎಲ್ ಆಗಿ ಪರಿವರ್ತನೆಯಾದ ನಂತರ ಅದು ಇಡೀ ರಾಜ್ಯಕ್ಕೆ ವ್ಯಾಪಿಸುತ್ತದೆ. ಈಗಲೂ ತಮ್ಮಲ್ಲಿ ಕೊಡಗಿಗೆ ಸೀಮಿತವಾಗಿ ಈ ಜಯಂತಿ ಆಚರಣೆಯನ್ನು ನಿಲ್ಲಿಸಬೇಕೆಂದು ತಮ್ಮ ಮನವಿಯಾಗಿದೆ ಎಂದು ಮಂಜು ಚಿಣ್ಣಪ್ಪ ವಿವರಿಸಿದರು.
ಈ ಸಂದರ್ಭ ಯುಕೋ ಸಂಘಟನೆಯ ಪ್ರಮುಖರಾದ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ಕೊಪ್ಪಿರ ವಿನು ಅಯ್ಯಪ್ಪ, ತೇಲಪಂಡ ಶಿವಕುಮಾರ್ ನಾಣಯ್ಯ ಹಾಜರಿದ್ದರು.