ಶ್ರೀಮಂಗಲ, ನ. 3: ಟಿಪ್ಪು ಜಯಂತಿ ಆಚರಣೆಗೆ ತಡೆ ಕೋರಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಪ್ರಕರಣ ಇಂದು ವಿಚಾರಣೆಗೆ ಬಂದಿದ್ದು, ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಅವರು ತಾ. 8ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.ಹೈಸೊಡ್ಲೂರು ಗ್ರಾಮದ ಕೊಕ್ಕಲೆಮಾಡ ಮಂಜು ಸಲ್ಲಿಸಿರುವ ಪಿಐಎಲ್ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಮುಖರ್ಜಿ ಹಾಗೂ ನ್ಯಾಯಮೂರ್ತಿ ಬೂದಿಹಾಳ್ ಅವರ ವಿಭಾಗೀಯ ಪೀಠದ ಎದುರು ನಡೆಯಿತು. ಅರ್ಜಿದಾರರ ಪರ ವಕೀಲ ಮೇರಿಯಂಡ ಸಜನ್ ಪೂವಯ್ಯ ಅವರು ವಾದ ಮಂಡಿಸಿ ಕೊಡಗಿನಲ್ಲಿ 80 ಸಾವಿರ ಕೊಡವರನ್ನು ಟಿಪ್ಪು ಹತ್ಯೆ ಮಾಡಿದ್ದು, ಮತಾಂತರ ಮಾಡಿದ್ದಾನೆ ಎಂದು ಪ್ರಸ್ತಾಪಿಸಿದರು.

ಕೆಲವೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿದ ವಕೀಲ ಸಜನ್ ಪೂವಯ್ಯ ಅವರು ರಾಜರು, ನಿರಂಕುಶವಾದಿಗಳು ಇವರ ಜಯಂತಿಗಳನ್ನು ಆಚರಿಸಬಾರದು ಪ್ರಜಾಪ್ರಭುತ್ವ

ಆಡಳಿತದಲ್ಲಿ ಸಾರ್ವಜನಿಕರ ಹಣವನ್ನು ಇಂತಹ ಜಯಂತಿ ಆಚರಣೆಗೆ ಬಳಸುವದು ಸರಿಯಲ್ಲ ಎಂದು ವಾದಿಸಿದರು.

ವಾದ ಆಲಿಸಿದ ನ್ಯಾಯಮೂರ್ತಿಗಳು ಅರ್ಜಿದಾರರು ಅರ್ಜಿಯಲ್ಲಿ ಹಲವಾರು ಸಾರ್ವಜನಿಕ ಹಿತಾಸಕ್ತಿಯ ಅಂಶಗಳು ಇವೆ. ಜಯಂತಿ ಆಚರಣೆ ಸರ್ಕಾರದ ಸಚಿವ ಸಂಪುಟದ ನಿರ್ಧಾರವಾಗಿರು ವದರಿಂದ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಾಗುವದಿಲ್ಲ. ಈ ಬಗ್ಗೆ ಮತ್ತೊಮ್ಮೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಅರ್ಜಿದಾರರು ಹಾಗೂ ಸಂಬಂಧಪಟ್ಟವರು ತುರ್ತಾಗಿ ಅರ್ಜಿ ಸಲ್ಲಿಸಲು ನಿರ್ದೇಶನ ನೀಡಿದರು. ಮನವಿ ಸ್ವೀಕರಿಸಿ ಶೀಘ್ರವಾಗಿ ಅಹವಾಲುಗಳನ್ನು ಪರಿಶೀಲಿಸಿ ತಾ. 8ರೊಳಗೆ ಸರ್ಕಾರದ ನಿರ್ಧಾರ ತಿಳಿಸುವಂತೆ ನ್ಯಾಯಾಲಯ ಸೂಚಿಸಿದೆ. ಇದರಿಂದಾಗಿ ಪ್ರಕರಣದ ತೀರ್ಪನ್ನು ಎದುರು ನೋಡುತ್ತಿದ್ದ ಕೊಡಗಿನ ಜನತೆ ತಾ. 8ರವರೆಗೆ ಕಾಯಲೇ ಬೇಕಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅರ್ಜಿದಾರ ಮಂಜು ಅವರು ನ್ಯಾಯಾಲಯದ ನಿರ್ದೇಶನದಂತೆ ತಾ. 4ರಂದು (ಇಂದು) ಮುಖ್ಯ ಕಾರ್ಯದರ್ಶಿ ಯವರಿಗೆ ವಿವರ ಮನವಿ ಸಲ್ಲಿಸಲಾಗುವದು. ತಾ. 8ರ ತೀರ್ಪಿನ ನಂತರ ಮುಂದಿನ ತೀರ್ಮಾನ ಕೈಕೊಳ್ಳಲಾಗುವದು. ನ್ಯಾಯಾಲಯದ ತೀರ್ಪಿನ ಬಗ್ಗೆ ವಿಶ್ವಾಸವಿದೆ ಎಂದು ಹೇಳಿದರು. - ವರದಿ : ಹರೀಶ್ ಮಾದಪ್ಪ