ಶ್ರೀಮಂಗಲ, ನ. 9: ಟಿಪ್ಪು ಭಾರತೀಯ ಅಲ್ಲ. ಆತ ಪರ್ಷಿಯಾ ದೇಶದವನು. ವಿದೇಶಿಯೊಬ್ಬ ಭಾರತದಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸಿ ಪ್ರೆಂಚ್ ಸೈನ್ಯದೊಂದಿಗೆ ಬ್ರಿಟಿಷರೊಂದಿಗೆ ತನ್ನ ಸಾಮ್ರಾಜ್ಯ ಸಂರಕ್ಷಣೆ ಮತ್ತು ವಿಸ್ತರಣೆಗಾಗಿ ಯುದ್ಧ ಮಾಡಿದ ಈತನ ಜಯಂತಿ ಆಚರಣೆ ರಾಜ್ಯದ ಜನತೆಯ ಮೇಲೆ ರಾಜ್ಯ ಸರಕಾರ ಹೇರಿಕೆ ಮಾಡಿದೆ ಎಂದು ಶ್ರೀಮಂಗಲದ ವಿದ್ಯಾಸಂಸ್ಥೆಯ ಪ್ರಮುಖ ಮದ್ರೀರ ವಿಷ್ಣು ಆಕ್ರೋಶ ವ್ಯಕ್ತಪಡಿಸಿದರು.

ಶ್ರೀಮಂಗಲ ಪಟ್ಟಣದಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಆಯೋಜಿಸಿದ್ದ ಮಾನವ sಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಟಿಪ್ಪು ಕನ್ನಡ ಪ್ರೇಮಿಯೂ ಅಲ್ಲ. ಕನ್ನಡಿಗನೂ ಅಲ್ಲ. ಆತ ಪರ್ಷಿಯಾ ಭಾಷೆಯಲ್ಲಿ ಆಡಳಿತ ನಡೆಸುತ್ತಿದ್ದ. ಆತನ ಸಾಮ್ರಾಜ್ಯ ರಾಜ್ಯದ 5 ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿತ್ತು. ಆದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈತನ ಜಯಂತಿ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ 15 ದಿವಸದಿಂದ ಸರಕಾರಿ ಕಚೇರಿಗಳಲ್ಲಿ ಯಾವದೇ ಕೆಲಸಗಳಾಗುತ್ತಿಲ್ಲ. ಟಿಪ್ಪು ಜಯಂತಿಗೆ ಇಡೀ ಆಡಳಿತ ವ್ಯವಸ್ಥೆಯೇ ತೊಡಗಿಸಿಕೊಳ್ಳುವ ಮೂಲಕ ಜನರ ಕೆಲಸ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ ಮಾತನಾಡಿ, ಶಾಂತಿ ಕದಡುವಂತಹ ಆಚರಣೆ ಯಾವ ಜನರಿಗೂ ಬೇಕಾಗಿಲ್ಲ. ಸರಕಾರವೆ ಬಲವಂತವಾಗಿ ಆಚರಿಸಲು ಮುಂದಾಗಿದೆ ಎಂದು ಹೇಳಿದರು.

ಗ್ರಾ.ಪಂ. ಉಪಾಧ್ಯಕ್ಷ ಕಳ್ಳಂಗಡ ರಜನ್ ಪೂವಣ್ಣ ಮಾತನಾಡಿ, ಟಿಪ್ಪು ಯಾವದೇ ಸ್ವಾತಂತ್ರ್ಯ ಹೋರಾಟ ಮಾಡಿಲ್ಲ. ಟಿಪ್ಪುವಿನ ಕ್ರೌರ್ಯದ ಬಗ್ಗೆ ಹಾಗೂ ಆತನ ದೌರ್ಜನ್ಯದ ಬಗ್ಗೆ ಜಿಲ್ಲೆಯ ಮುಸ್ಲಿಮರಿಗೂ ಗೊತ್ತಿದ್ದು, ಅವರು ಈತನ ಜಯಂತಿಗೆ ಬೆಂಬಲಿಸಬಾರದು ಎಂದು ಹೇಳಿದರು.

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ ಮಾತನಾಡಿ, ಟಿಪ್ಪು ಹುಟ್ಟಿದ್ದು 1753, ಮೃತಪಟ್ಟಿದ್ದು 1799. ಮೊದಲ ಸ್ವಾತಂತ್ರ್ಯ ಸಂಗ್ರಾಮ 1857. ಹಾಗಿರುವಾಗ ಟಿಪ್ಪುವಿನ ಜೀವಿತಾವಧಿಯಲ್ಲಿ ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆಯೇ ಇರಲಿಲ್ಲ. ಈ ರಾಜ್ಯ ಸರಕಾರಕ್ಕೆ ಜಿಲ್ಲೆಯ ರೈತರಿಗೆ ಬೆಳೆ ಹಾನಿಗೆ ನೀಡಬೇಕಾದ ಪರಿಹಾರ ಮೊತ್ತವನ್ನೆ ಕೊಡಲು ಯೋಗ್ಯತೆ ಇಲ್ಲದೆ, ಸಾರ್ವಜನಿಕ ಹಣವನ್ನು ಬೇಡದ ವಿಚಾರಕ್ಕೆ ಪೋಲು ಮಾಡುತ್ತಿದೆ ಎಂದು ಟೀಕಿಸಿದ ಅವರು ಟಿಪ್ಪು ಜಯಂತಿ ಹಿನ್ನಲೆಯಲ್ಲಿ ಯಾವದೇ ಅಮಾಯಕರ ಮೇಲೆ ಕೇಸು ದಾಖಲಿಸದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.

ರೈತ ಸಂಘದ ಸಂಚಾಲಕ ಚಿಮ್ಮಂಗಡ ಗಣೇಶ್ ಮಾತನಾಡಿ, ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆ ಮೂಲಕ ಜಿಲ್ಲೆಯಲ್ಲಿ ಶಾಂತಿ ಭಂಗ ಮಾಡಲು ಹೊರಟಿದೆ ಎಂದರು. ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ ಮಾತನಾಡಿ, ಜಿಲ್ಲೆಯಲ್ಲಿ ಹಿಂದೂ ಮುಸ್ಲಿಮರು ಸೌಹಾರ್ದಯುತವಾಗಿ ಜೀವಿಸುತ್ತಿದ್ದು, ರಾಜಕೀಯ ಲಾಭ ಗಳಿಸಲು ಸಮಾಜವನ್ನು ಅಶಾಂತಿಯೆಡೆಗೆ ದೂಡುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು. ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ಅಜ್ಜಮಾಡ ಜಯಾ, ಚೋನಿರ ಕಾಳಯ್ಯ, ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ವಾಹನ ಮಾಲೀಕರ ಸಂಘದ ಪಧಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಮಾನವ ಸರಪಳಿಯಲ್ಲಿ ಪಾಲ್ಗೊಂಡು ಟಿಪ್ಪು ಜಯಂತಿ ವಿರುದ್ಧ ಘೋಷಣೆ ಕೂಗಿದರು.