ಮಡಿಕೇರಿ, ನ. 4 : ರಾಜಕೀಯ ಸ್ವಾರ್ಥಕ್ಕಾಗಿ ರಾಜ್ಯ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸುತ್ತಿದ್ದು, ಕರ್ನಾಟಕವನ್ನು ವಿಭಜಿಸುವ ಷಡ್ಯಂತ್ರ ಇದರಲ್ಲಿ ಅಡಗಿದೆ ಎಂದು ಆರೋಪಿಸಿರುವ ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ರೋಜಿó ಚಿಣ್ಣಪ್ಪ, ಟಿಪ್ಪು ಜಯಂತಿ ಯನ್ನು ಆಚರಿಸಿದರೆ ಕೊಡಗು ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ಹೋರಾಟ ರೂಪಿಸುವದಾಗಿ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಜನರ ಭಾವನೆಗೆ ವಿರುದ್ಧವಾಗಿ ರಾಜ್ಯ ಸರಕಾರ ನ.10 ರಂದು ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಿದರೆ ನ.11 ರಿಂದಲೇ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಕೊಡಗು ಪ್ರತ್ಯೇಕ ರಾಜ್ಯದ ಹೋರಾಟವನ್ನು ಆರಂಭಿಸುವದಾಗಿ ತಿಳಿಸಿದರು. ಕೊಡಗು ಜಿಲ್ಲೆಯಲ್ಲಿ ಟಿಪ್ಪುವಿನಿಂದ ಕೊಡವರ ಹತ್ಯೆ ಮತ್ತು ಮತಾಂತರವಾಗಿದೆ. ದೇವಾಲಯಗಳು ಹಾಗೂ ಐನ್‍ಮನೆಗಳಿಗೆ ಹಾನಿ ಯಾಗಿದೆ. ಈ ಘಟನಾವಳಿಗಳಿಗೆ ಚರಿತ್ರೆಯಲ್ಲಿ ಸಾಕ್ಷ್ಯಗಳಿದ್ದರೂ ರಾಜಕೀಯ ಲಾಭ ಮತ್ತು ಅಧಿಕಾರಕ್ಕಾಗಿ ಇದನ್ನು ಮರೆ ಮಾಚುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಈಗಾಗಲೇ ಹೈದರಬಾದ್ ಕರ್ನಾಟಕದ ಮಂದಿ ನ.1 ರಂದು ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಚಾಲನೆ ನೀಡಿದ್ದಾರೆ. ಮಂಗಳೂರು ಭಾಗದ ತುಳುನಾಡಿನ ಜನ ಪ್ರತ್ಯೇಕ ತುಳುನಾಡು ರಾಜ್ಯಕ್ಕಾಗಿ ಹೋರಾಟ ನಡೆಸಲು ಮುಂದಾಗಿದ್ದಾರೆ. ಸರಕಾರದ ತಪ್ಪು ನಿರ್ಧಾರಗಳಿಂದಾಗಿ ಕೊಡಗು ಕೂಡ ಪ್ರತ್ಯೇಕ ರಾಜ್ಯವಾಗಿ ಗುರುತಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ದೇಶಕ್ಕಾಗಿ ಹೋರಾಡಿದ ಸಾವಿರಾರು ಮಾಜಿ ಸೈನಿಕರು, ಕೊಡಗಿನ ಮೂಲ ನಿವಾಸಿಗಳು, ಇತರ ಜನಾಂಗ ಮತ್ತು ಭಾಷಿಕರು, ಜಿಲ್ಲೆಯಲ್ಲಿ ನೆಲೆ ನಿಂತಿರುವ ಹೊರ ರಾಜ್ಯದವರು, ಜಿಲ್ಲೆಯ ಸಾವಿರಾರು ಕ್ರೀಡಾಪಟುಗಳು, ವಕೀಲರು ಸೇರಿದಂತೆ ಎಲ್ಲಾ ಸಮಾಜದ ಜನರ ಬೆಂಬಲವನ್ನು ಪಡೆದು ಶಾಂತಿಯುತ ಮತ್ತು ಕಾನೂನಾತ್ಮಕವಾಗಿ ಪ್ರತ್ಯೇಕ ರಾಜ್ಯದ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವ ದೆಂದು ರೋಜಿó ಚಿಣ್ಣಪ್ಪ ತಿಳಿಸಿದರು.

ಕೊಡಗು ಪ್ರತ್ಯೇಕ ರಾಜ್ಯವಾದಾಗ ಮಾತ್ರ ಕಡೆಗಣಿಸಲ್ಪಟ್ಟಿರುವ ಕೊಡಗಿನ ಮಾಜಿ ಸೈನಿಕರಿಗೆ ಪೈಸಾರಿ ಜಾಗವನ್ನು ವಿತರಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಟಿಪ್ಪುವಿನಿಂದ ಜಿಲ್ಲೆಗೆ ಹಾಗೂ ಜಿಲ್ಲೆಯ ಜನರಿಗೆ ಆಗಿರುವ ಅನ್ಯಾಯವನ್ನು ಜಿಲ್ಲೆಯಲ್ಲಿ ವಾಸಿಸುತ್ತಿರುವ ಮುಸಲ್ಮಾನರು ಅರಿತುಕೊಂಡು ಟಿಪ್ಪು ಜಯಂತಿಯನ್ನು ಬಹಿಷ್ಕರಿಸುವ ಮೂಲಕ ಶಾಂತಿ, ಸಹಬಾಳ್ವೆಗೆ ಮುಂದಾಗಬೇಕೆಂದು ರೋಜಿó ಚಿಣ್ಣಪ್ಪ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಸುರೇಶ್ ಉತ್ತಪ್ಪ, ರಘು ಸುಬ್ರಮಣಿ ಹಾಗೂ ಮುತ್ತಪ್ಪ ಉಪಸ್ಥಿತರಿದ್ದರು.