ಮಡಿಕೇರಿ, ಅ. 24: ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಿಸದಂತೆ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಜಿಲ್ಲಾಡಳಿತ ಮೂಲಕ ಸರ್ಕಾರವನ್ನು ಆಗ್ರಹಿಸಿ ಮನವಿ ಸಲ್ಲಿಸಿದೆ.
ಕೊಡಗು ಜಿಲ್ಲೆ ಈ ಹಿಂದಿನಿಂದಲೂ ಶಾಂತಿ, ಸೌಹಾರ್ದತೆಗೆ ಮಾದರಿಯಾಗಿದ್ದು, ಇಲ್ಲಿನ ಎಲ್ಲಾ ಜನಾಂಗದವರು ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಸಮಾಜಘಾತುಕ ಶಕ್ತಿಗಳು ಕೊಡಗಿನಲ್ಲಿ ಕೋಮುಭಾವನೆ ಕೆರಳಿಸಿ, ಜನರಲ್ಲಿ ಬಿರುಕು ಮೂಡಿಸುವ ಕೆಲಸ ಮಾಡುತ್ತಿದೆ.
ಕೊಡಗಿನ ಇತಿಹಾಸದಲ್ಲಿ ಮೈಸೂರು ಸಂಸ್ಥಾನವನ್ನು ಆಳಿದ ಟಿಪ್ಪು ಕೊಡಗಿನ ಹಲವಾರು ಹಿಂದೂ ದೇವಸ್ಥಾನಗಳನ್ನು ನಾಶಮಾಡಿ, ಸಾವಿರಾರು ಜನರನ್ನು ಹತ್ಯೆಮಾಡಿ, ಬಲಾತ್ಕಾರ, ಅತ್ಯಾಚಾರ ಮುಖೇನ ಹಿಂದೂಗಳನ್ನು ಅದರಲ್ಲೂ ಮೂಲನಿವಾಸಿ 18 ಪಂಗಡಗಳನ್ನು ಮುಸ್ಲಿಂ ಧರ್ಮಕ್ಕೆ ಬಲವಂತದ ಮತಾಂತರ ಮಾಡಿದ್ದಾಗಿಯೂ ದೇವಟುಪರಂಬು ಸ್ಥಳದಲ್ಲಿ ಕುತಂತ್ರದಿಂದ ಸಾವಿರಾರು ಹಿಂದೂಗಳ ಮಾರಣಹೋಮ ನಡೆಸಿರುವದು ಸಾಬೀತಾಗಿದೆ. ಇಂತಹ ಒಬ್ಬ ಮತಾಂಧನನ್ನು ಮೂಲವಾಗಿರಿಸಿಕೊಂಡು ಕರ್ನಾಟಕ ಸರ್ಕಾರವು ಟಿಪ್ಪು ಜಯಂತಿಯನ್ನು ಆಚರಿಸುವದನ್ನು ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ಸಂಘಟನೆ ತೀವ್ರವಾಗಿ ವಿರೋಧಿಸುತ್ತದೆ. ಕೊಡಗಿನ ಬಹುಪಾಲು ಮಂದಿ ಹಾಗೂ ಸಂಘಟನೆಗಳು ಈ ಬಾರಿಯ ಟಿಪ್ಪು ಜಯಂತಿ ಆಚರಣೆಗೆ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದು, ಹಿಂದಿನ ಬಾರಿ ಟಿಪ್ಪು ಜಯಂತಿಯಂದು ಕೊಡಗಿನಲ್ಲಿ ಕಾನೂನು ಸುವ್ಯವಸ್ಥೆಗೆ ಭಾರೀ ಪೆಟ್ಟು ಬಿದ್ದಿದಲ್ಲದೆ, ಹಿರಿಯ ಮುಖಂಡ ಕುಟ್ಟಪ್ಪ ಅವರ ಜೀವಹಾನಿಯಾಗಿತ್ತು. ಕೊಡಗಿನ ಜನರ ಭಾವನೆಗೆ ಬೆಲೆ ನೀಡಿ ಈ ಬಾರಿ ಟಿಪ್ಪು ಜಯಂತಿಯನ್ನು ಆಚರಿಸದಂತೆ ತಡೆಹಿಡಿಯಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭ ಐ.ಎಂ. ಅಪ್ಪಯ್ಯ, ಡಿ. ನರಸಿಂಹ, ಎಂ.ಎಂ. ಟಾಟಾ ಬೋಪಯ್ಯ, ಎನ್.ಕೆ. ಅಜಿತ್‍ಕುಮಾರ್, ಕೆ.ಹೆಚ್. ಚೇತನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.