ಮಡಿಕೇರಿ, ನ. 2: ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ವಿವಿಧ ಸಮಾಜ, ಸಂಘ - ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿವೆ.
ಬಾಳೆಲೆ ಕೊಡವ ಸಮಾಜ
ದೇವಟ್‍ಪರಂಬಿನಲ್ಲಿ ಸಾವಿರಾರು ಕೊಡವರ ನರಮೇಧ ಮಾಡಿದ ಮತ್ತು ಪವಿತ್ರ ಕಾವೇರಿ ಕ್ಷೇತ್ರಕ್ಕೆ ಧಾಳಿ ಮಾಡಿದ ಟಿಪ್ಪು ಜಯಂತಿಯನ್ನು ಕೊಡಗಿನಲ್ಲಿ ಆಚರಿಸುವದಕ್ಕೆ ಬಾಳೆಲೆ ಕೊಡವ ಸಮಾಜ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಪತ್ರಿಕೆಗೆ ಲಿಖಿತ ಹೇಳಿಕೆ ನೀಡಿರುವ ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲಚೀರ ಸಿ. ಬೋಸ್ ಹಾಗೂ ಆಡಳಿತ ಮಂಡಳಿ ಮತ್ತು ಸದಸ್ಯರು ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ಕಳೆದ ವರ್ಷ ಟಿಪ್ಪು ಜಯಂತಿ ವೇಳೆ, ದೇವಪಂಡ ಕುಟ್ಟಪ್ಪ ಅವರು ಬಲಿಯಾಗಿದ್ದಕ್ಕೆ ವಿಷಾದಿಸಿದರು. ಸರ್ಕಾರ ಮತ್ತೊಮ್ಮೆ ಟಿಪ್ಪು ಜಯಂತಿಯನ್ನು ಆಚರಿಸಿ, ಅಹಿತಕರ ಘಟನೆಗಳು ಸಂಭವಿಸಿದರೆ, ಜಿಲ್ಲಾಡಳಿತ ಹಾಗೂ ಸರ್ಕಾರ ನೇರ ಹೊಣೆಯಾಗಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ದೇವಟ್‍ಪರಂಬಿನ ನರಮೇಧದ ಕರಾಳ ಅಧ್ಯಾಯವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಆದುದರಿಂದ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಸರ್ಕಾರ ಅವಕಾಶ ನೀಡಬಾರದೆಂದು ತಿಳಿಸಿದ್ದಾರೆ.
ಜಿಲ್ಲಾಡಳಿತ ಈ ಬಾರಿ ಟಿಪ್ಪು ಜಯಂತಿ ಆಚರಿಸಲು ಮುಂದಾದರೆ, ಎಲ್ಲಾ ಕೊಡವ ಸಮಾಜಗಳನ್ನು ಸೇರಿಸಿಕೊಂಡು ಅಖಿಲ ಕೊಡವ ಸಮಾಜ ಮತ್ತು ಫೆಡರೇಶನ್ ಆಫ್ ಕೊಡವ ಸಮಾಜ ಪ್ರತಿಭಟನೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ವಿವಿಧ ಗ್ರಾಮಸ್ಥರ ಆಕ್ಷೇಪ
ನಾಪೆÇೀಕ್ಲು: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಜಿ, ಪೇರೂರು, ದೊಡ್ಡ ಪುಲಿಕೋಟು ಗ್ರಾಮಸ್ಥರು ಟಿಪ್ಪು ಜಯಂತಿ ಆಚರಣೆಯನ್ನು ಕೂಡಲೇ ಕೈಬಿಡಬೇಕೆಂದು ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಬಲ್ಲಮಾವಟಿಯಲ್ಲಿ ನಡೆದ ಟಿಪ್ಪು ಜಯಂತಿ ವಿರೋಧಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡಿರುವ ಅವರು ಟಿಪ್ಪು ಒಬ್ಬ ಮತಾಂಧನಾಗಿದ್ದು, ಹೋರಾಟಗಾರ ಎನ್ನಲು ಯಾವದೇ ಆಧಾರಗಳಿಲ್ಲ. ಟಿಪ್ಪು ಮತಾಂಧ ಎನ್ನಲು ಕೊಡಗಿನಲ್ಲಿರುವ ಮಾಪಿಳ್ಳೆಗಳೇ ಸಾಕ್ಷಿ. ಸ್ವಾತಂತ್ರ್ಯ ಹೋರಾಟ ಆರಂಭವಾದದ್ದು 1875ರಲ್ಲಿ. ಟಿಪ್ಪು 1799ರಲ್ಲಿಯೇ ಸಾವನ್ನಪ್ಪಿದ್ದಾನೆ. ಹೀಗಿರುವಾಗಿ ಟಿಪ್ಪು ಹೇಗೆ ಸ್ವಾತಂತ್ರ್ಯ ಹೋರಾಟಗಾರ ಆಗಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಟಿಪ್ಪು ಜಯಂತಿ ಆಚರಣೆಯಿಂದ ಕೊಡಗಿನಲ್ಲಿ ಕೋಮು ಗಲಭೆ ಸೃಷ್ಟಿಯಾಗಿದೆ. ಸೌಹಾರ್ದತೆಗೆ ಧಕ್ಕೆ ಉಂಟಾಗಿದೆ. ಕಳೆದ ವರ್ಷದ ಆಚರಣೆಯಲ್ಲಿ ಕೊಡಗಿನ ಜನತೆ ಕರಾಳ ಅನುಭವವನ್ನು ಅನುಭವಿಸಿದ್ದಾರೆ. ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಶಾಶ್ವತವಾಗಿ ರದ್ದುಗೊಳಿಸಬೇಕು. ಯಾವದೇ ಮೆರವಣಿಗೆ, ಘೋಷಣೆಗೆ ಅವಕಾಶ ನೀಡಬಾರದು. ಒಂದು ವೇಳೆ ನೀಡಿದ್ದಲ್ಲಿ ಕಳೆದ ವರ್ಷದ ಟಿಪ್ಪು ಜಯಂತಿ ಗಲಭೆಯಲ್ಲಿ ಪ್ರಾಣತೆತ್ತ ದೇಶ ಭಕ್ತ ದೇವಪಂಡ ಕುಟ್ಟಪ್ಪ ಅವರ ಹುತಾತ್ಮ ದಿನವನ್ನು ಇದೇ ತಾ. 10ರಂದು ಕೊಡಗಿನ ಎಲ್ಲಾ ಮೂಲ ನಿವಾಸಿಗಳೊಂದಿಗೆ ಬಹಿರಂಗವಾಗಿ ಆಚರಿಸಲಾಗುವದು ಎಂದು ಎಚ್ಚರಿಸಿದ್ದಾರೆ.
ಸಭೆಯಲ್ಲಿ ಸಮಿತಿಯ ಮಾಳೆಯಂಡ ಅಯ್ಯಪ್ಪ, ಕರವಂಡ ಲವ ನಾಣಯ್ಯ, ಚಂಗೇಟಿರ ಕುಮಾರ್ ಸೋಮಣ್ಣ, ಮುಕ್ಕಾಟಿರ ವಿನಯ್, ಬದ್ದಂಜೆಟ್ಟಿರ ದೇವಯ್ಯ, ಬೈರುಡ ಮುತ್ತಪ್ಪ, ಚೀಯಕಪೂವಂಡ ಅಪ್ಪಚ್ಚು, ಅಪ್ಪುಮಣಿಯಂಡ ಸೋಮಣ್ಣ, ಎನ್.ಪಿ.ಚಿಂಗಪ್ಪ, ಚೋಕಿರ ಬಾಬಿ, ಅಪ್ಪಚ್ಚಿರ ತಿಮ್ಮಯ್ಯ, ಮಾಳೆಯಂಡ ಅಪ್ಪಚ್ಚ ಮತ್ತಿತರರು ಮಾತನಾಡಿದರು.
ಬಿಟ್ಟಂಗಾಲ ಕೊಡವ ಫ್ಯಾಮಿಲಿ ಕ್ಲಬ್
*ಗೋಣಿಕೊಪ್ಪಲು: ಜನ ವಿರೋಧದ ನಡುವೆಯೂ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವದು ಖಂಡನೀಯ ಎಂದು ಬಿಟ್ಟಂಗಾಲ ಕೊಡವ ಫ್ಯಾಮಿಲಿ ಕ್ಲಬ್ ಅಧ್ಯಕ್ಷ ಚೇಂದ್ರಿಮಾಡ ಕಾವೇರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಟಿಪ್ಪು ಜಿಲ್ಲೆಯಲ್ಲಿ ಕೊಡವರ ಧಮನ ಮಾಡಿದ್ದಾನೆ. ಈತ ಸ್ವತಂತ್ರ್ಯ ಹೋರಾಟಗಾರನಲ್ಲ. ಕೊಡವರನ್ನು ನಾಶ ಮಾಡಲು ಹೊರಟ ಹೇಡಿಯ ಜಯಂತಿಯಾಗಿ ಆಚರಿಸುತ್ತಿರುವದು ವಿಷಾಧನೀಯ. ಟಿಪ್ಪು ಜಯಂತಿಯನ್ನು ಸರಕಾರ ಹಿಂಪಡೆದು ಕೊಡವ ಸಂಸ್ಕøತಿ ಆಚಾರ-ವಿಚಾರಕ್ಕೆ ಒತ್ತು ನೀಡಬೇಕೆಂದು ತಿಳಿಸಿದರು
ಸಂದರ್ಭ ಕಾರ್ಯದರ್ಶಿ ಮುರುವಂಡ ಅಣ್ಣಯ್ಯ, ಖಜಾಂಚಿ ಮುಕ್ಕಾಟಿರ ಬೋಪಯ್ಯ, ಕ್ರೀಡಾ ಕಾರ್ಯದರ್ಶಿ ಕುಪ್ಪಂಡ ದಿಲನ್ ಬೋಪಣ್ಣ ಹಾಜರಿದ್ದರು.
ಬಿಜೆಪಿ ಯುವ ಮೋರ್ಚಾ
ಸುಂಟಿಕೊಪ್ಪ: ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ಆಚರಿಸದಂತೆ ಸುಂಟಿಕೊಪ್ಪ ನಗರ ಬಿಜೆಪಿ ಮತ್ತು ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಕಳೆದ ವರ್ಷ ಅಹಿತಕರ ಘಟನೆ ನಡೆದಿದ್ದು ಜನಮಾನಸದಲ್ಲಿ ಕಹಿಘಟನೆಯ ನೆನಪು ಮಾಸುವ ಮುನ್ನವೇ ಮತ್ತೊಮ್ಮೆ ಈ ದಿನಾಚರಣೆಯನ್ನು ಆಚರಿಸುವದಕ್ಕೆ ರಾಜ್ಯ ಸರ್ಕಾರ ಮುಂದಾಗಿರುವದು ದುರದೃಷ್ಟಕರ. ಮತ್ತೊಮ್ಮೆ ಕೊಡಗಿನಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿರುವದನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಬಿಜೆಪಿ ನಗರಾಧ್ಯಕ್ಷ ಪಿ.ಆರ್.ಸುನೀಲ್ ಹೇಳಿದರು.
ಟಿಪ್ಪು ಜಯಂತಿಯನ್ನು ಆಚರಿಸಲೇಬೇಕು ಎನ್ನುವ ಯಾವ ಒತ್ತಡಗಳು ಇಲ್ಲದಿದ್ದರೂ ರಾಜ್ಯ ಸರ್ಕಾರ ತನ್ನ ಮತ ಬ್ಯಾಂಕಿಗಾಗಿ ಇಂತಹ ಕೀಳು ರಾಜಕೀಯ ಮಾಡುವದು ಸರಿಯಲ್ಲ ಎಂದು ಬಿಜೆಪಿ ಯುವ ಮೋರ್ಚಾ ರಂಜಿತ್ ಟೀಕಿಸಿದ್ದಾರೆ.
ಬಿಜೆಪಿ ಮಾಜಿ ನಗರಾಧ್ಯಕ್ಷ ಬಿ.ಕೆ.ಮೋಹನ್, ಸಂದೀಪ್ ಎಸ್.ಪಿ., ಬಿಜೆಪಿ ನಗರ ಪ್ರದಾನ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್(ಕೋಕ),ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಹರೀಶ್ ಯು, ಶಶಿಧರ್. ಹೆಚ್.ಎಸ್., ಅನಿಪ್ರಕಾಶ್, ಶಿವಕುಮಾರ್ ಯು. ಇದ್ದರು.
ಏಕದಂತ ಯುವಕ ಸಂಘ
ಕರ್ನಾಟಕ ಸರ್ಕಾರವು ತಾ. 10 ರಂದು ಟಿಪ್ಪು ಜಯಂತಿ ಆಚರಿಸುವದನ್ನು ಮಕ್ಕಂದೂರಿನ ಏಕದಂತ ಯುವಕ ಸಂಘ ವಿರೋಧಿಸಿದೆ. ಮತಾಂಧ ದುರುಳನನ್ನು ಸರ್ಕಾರ ಆದರ್ಶ ವ್ಯಕ್ತಿಯನ್ನಾಗಿಸುವದು ನಾಚಿಕೆಗೇಡಿನ ಸಂಗತಿ. ಬಹುಸಂಖ್ಯಾತ ಕೊಡಗಿನ ಹಿಂದೂಗಳಿಗೆ ಬೆಲೆ ಕೊಟ್ಟು ಕರ್ನಾಟಕ ಸರ್ಕಾರ ಕೂಡಲೇ ಜಿಲ್ಲೆಯ ಮಟ್ಟಿಗೆ ಟಿಪ್ಪು ಜಯಂತಿಯನ್ನು ವಾಪಾಸ್ ಪಡೆಯಬೇಕು. ಇಲ್ಲದಿದ್ದರೆ ಟಿಪ್ಪು ಜಯಂತಿ ವಿರೋಧ ಹೋರಾಟ ಸಮಿತಿಯ ಎಲ್ಲಾ ರೀತಿಯ ಪ್ರತಿಭಟನೆ ಬೆಂಬಲ ವ್ಯಕ್ತಪಡಿಸುವದಾಗಿ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಮಹಾಗಣಪತಿ ಸೇವಾ ಸಮಿತಿ
ಸರ್ಕಾರವು ತಾ. 10 ರಂದು ಟಿಪ್ಪು ಜಯಂತಿ ಆಚರಿಸುವದನ್ನು ವಿರೋಧಿಸುವದಾಗಿ ಮಡಿಕೇರಿಯ ಕಾನ್ವೆಂಟ್‍ಜಂಕ್ಷನ್‍ನ ಶ್ರೀ ಮಹಾಗಣಪತಿ ಸೇವಾ ಸಮಿತಿ ವಿರೋಧಿಸಿದೆ.
ಇತಿಹಾಸದ ದಿನಗಳಲ್ಲಿ ತನ್ನ ಸಾಮ್ರಾಜ್ಯ ರಕ್ಷಣೆಯ ಏಕ ಮಾತ್ರ ಕಾರಣದಿಂದ ಸ್ವಾರ್ಥಕ್ಕಾಗಿ ಫ್ರೆಂಚರೊಂದಿಗೆ ಸೇರಿ ಸಾವಿರಾರು ಹಿಂದೂಗಳನ್ನು ಅದರಲ್ಲೂ ಕೊಡಗಿನ ಮೂಲನಿವಾಸಿ ಪಂಗಡಗಳನ್ನು ಹತ್ಯೆ, ಮತಾಂತರ, ಬಲತ್ಕಾರ ಮಾಡಿರುವ ದುರಾಡಳಿತಶಾಹಿ ಟಿಪ್ಪು ಜಯಂತಿ ಆಚರಿಸಬಾರದು. ಕೊಡಗಿನ ಮೂಲನಿವಾಸಿಗಳೊಂದಿಗೆ ಕೈ ಜೋಡಿಸುತ್ತಾ ನಮ್ಮ ಸಮಿತಿಯು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುವದಾಗಿ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಪಿಎಫ್‍ಐ ಹಾಗೂ ಎಸ್‍ಡಿಪಿಐ ಬಾಯಿ ಚಪಲಕ್ಕಾಗಿ ಟಿಪ್ಪು ಜಯಂತಿಗೆ ಬೆಂಬಲದ ಹೇಳಿಕೆ ನೀಡುತ್ತಿದೆ. ಅದಕ್ಕೆ ತಕ್ಕ ಉತ್ತರ ಕೊಡಲು ಕೊಡಗಿನ ಜನತೆ ಸಿದ್ದರಿದ್ದೇವೆ ಎಂದಿರುವ ಅವರು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಗೆ ಸಂಪೂರ್ಣ ಬೆಂಬಲ ನೀಡುವದಾಗಿ ತಿಳಿಸಿದ್ದಾರೆ.