ಶ್ರೀಮಂಗಲ, ಅ. 25: ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ಆಚರಣೆ ಮಾಡಬಾರದು ಎಂದು ಉಚ್ಚನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ನ್ಯಾಯಾಲಯವು ರಿಟ್ ಅರ್ಜಿಯನ್ನು ದಾಖಲಿಸಿಕೊಂಡು, ರಿಟ್ ಅರ್ಜಿ ನಂ. 55353/2016 ರ ವಿಚಾರಣೆಯನ್ನು ತಾ. 26ರಂದು (ಇಂದು) ಕೈಗೆತ್ತಿಕೊಳ್ಳಲಿದ್ದು, ಮುಖ್ಯ ನ್ಯಾಯಮೂರ್ತಿಗಳಾದ ಜ. ಎ.ಎಸ್. ಬೋಪಣ್ಣ ಅವರ ಏಕ ಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರಲಿದೆ. ರಿಟ್ ಅರ್ಜಿಯನ್ನು ಸಮಾಜ ಸೇವಕ ಹೈಸೊಡ್ಲೂರು ಗ್ರಾಮದ ಕೊಕ್ಕಲೆಮಾಡ ಮಂಜು ಅವರು ವಕೀಲ ಪಾವನ ಚಂದ್ರ ಶೆಟ್ಟಿ ಅವರ ಮೂಲಕ ದಾಖಲಿಸಿದ್ದಾರೆ.

ಕೊಕ್ಕಲೆಮಾಡ ಮಂಜು ಅವರು ಈ ಮೊದಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಗೃಹ ಕಾರ್ಯದರ್ಶಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿ, ಟಿಪ್ಪು ಜಯಂತಿಯನ್ನು ಕೊಡಗಿನ ಮಟ್ಟಿಗೆ ನಿಷೇಧಿಸುವಂತೆ ಕೇಳಿಕೊಂಡಿದ್ದರು. ಇದಕ್ಕೆ ಸರ್ಕಾರದಿಂದ ಯಾವದೇ ಸ್ಪಂದನ ಸಿಗದಿದ್ದ ಕಾರಣ ಇದೀಗ ನ್ಯಾಯಾಲಯದ ಮೊರೆ ಹೋಗಿರುವದಾಗಿ ತಿಳಿಸಿದ್ದಾರೆ.