ಮಡಿಕೇರಿ, ನ. 8: ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಇದೇ ಸಂದರ್ಭ ತಾ. 10 ರಂದು ಕರಾಳ ದಿನಾಚರಣೆ ಕೈಗೊಳ್ಳುವಂತೆ ಕರೆ ನೀಡಲಾಯಿತು.ಟಿಪ್ಪು ಇತಿಹಾಸದಲ್ಲಿ ದಾಖಲು ಆಗಿರುವಂತೆ ಕ್ರೂರಿ, ಕನ್ನಡ ವಿರೋಧಿ, ಧರ್ಮ ವಿರೋಧಿ ಎಂಬದು ಇತಿಹಾಸಗಳಲ್ಲಿ ದಾಖಲಾಗಿದೆ. ಕೊಡಗಿನ ಬಗ್ಗೆ ಇಲ್ಲಿಯ ಜನರ ಸಂಸ್ಕøತಿಯ ಬಗ್ಗೆ ವಿಕೃತ ಮನೋಭಾವ ಹೊಂದಿದವ ನಾಗಿರುತ್ತಾನೆ. ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ದುರುದ್ದೇಶದಿಂದ ಕೊಡಗನ್ನು ಆಕ್ರಮಣ ಮಾಡಿ ಕೊಡಗಿನ ಮೂಲನಿವಾಸಿಗಳನ್ನು ಮತಾಂತರ ಮಾಡಿರುವದೂ ಅಲ್ಲದೇ ಕೊಲೆ, ಅತ್ಯಾಚಾರ, ಸುಲಿಗೆ ಮಾಡಿರುವದು ಇತಿಹಾಸದಲ್ಲಿ ದಾಖಲಾಗಿರುತ್ತದೆ.

ಕೊಡಗು ಜಿಲ್ಲೆಯಲ್ಲಿ ಸುಮಾರು 310ಕ್ಕೂ ಹೆಚ್ಚು ಹಿಂದೂ ದೇವಾಲಯ ಗಳನ್ನು ಭಗ್ನಗೊಳಿಸಿ ಲೂಟಿ ಮಾಡಿರುತ್ತಾನೆ. ವೀರಾಜಪೇಟೆಯ ಸಂತ ಅನ್ನಮ್ಮ ಚರ್ಚ್‍ನ್ನು ಧ್ವಂಸ ಗೊಳಿಸಿರುತ್ತಾನೆ. ಭಾಗಮಂಡಲದ ಭಗಂಡೇಶ್ವರ ದೇವಾಲಯವನ್ನು ತನ್ನ ಸ್ವಾಧೀನಕ್ಕೆ ಪಡೆದು ಅದರೊಳಗೆ ತನ್ನ ಸೈನಿಕರನ್ನು ಬಿಟ್ಟು ದೇವಾಲಯವನ್ನು ನಾಶಪಡಿಸುವ ಪ್ರಯತ್ನವನ್ನು ಮಾಡಿದ್ದಾನೆ. ಇದಕ್ಕೆ ಕುರುಹು ಎಂಬಂತೆ ಭಗಂಡೇಶ್ವರ ದೇವಸ್ಥಾನದ ಎದುರುಗಡೆ ಇರುವ ಸೊಂಡಿಲು ಮುರಿದ ಆನೆಗಳ ವಿಗ್ರಹಗಳೇ ಸಾಕ್ಷಿ. ಅಲ್ಲದೇ ಭಾಗಮಂಡಲಕ್ಕೆ ಫರಿದಾ ಬಾದ್ ಎಂಬ ಹೆಸರನ್ನು ಇಟ್ಟಿದ್ದನು. ಹೀಗೆ ಅನೇಕ ಪ್ರಮುಖ ಸ್ಥಳಗಳ ಹೆಸರನ್ನು ಬದಲಾಯಿಸಿದ್ದಾನೆ. ಇಷ್ಟು ಅಲ್ಲದೇ ಪುಣ್ಯ ಕ್ಷೇತ್ರ ತಲಕಾವೇರಿಗೆ ಹೋಗಿ ದೇವಸ್ಥಾನವನ್ನು ನಾಶ ಮಾಡುವ ಪ್ರಯತ್ನ ಮಾಡಿರುತ್ತಾನೆ. ಆದರೆ ಅಲ್ಲಿಗೆ ತೆರಳಲು ಸಾಧ್ಯವಾಗದೇ ವಾಪಾಸು ಬಂದಿರುತ್ತಾನೆ. ಇದಕ್ಕೆ ಸಾಕ್ಷಿ ಎಂಬಂತೆ ಈಗಲೂ ತಲಕಾವೇರಿಗೆ ನಡೆದು ಹೋಗುವ ಕಾಲುದಾರಿಯಲ್ಲಿ ಸಲಾಮ್ ಕಲ್ಲು ಎಂಬದು ಇಂದಿಗೂ ಸಾಕ್ಷಿಯಾಗಿದೆ.

ಕೊಡಗಿನ ಮೂಲನಿವಾಸಿಗಳಲ್ಲಿ ಬಲತ್ಕಾರವಾಗಿ ಹತ್ಯೆ, ಕೊಲೆ, ಸುಲಿಗೆ, ಮತಾಂತರಕ್ಕೆ ಒಪ್ಪದವರನ್ನು ಸಾಮೂಹಿಕವಾಗಿ ಹತ್ಯೆ ಮಾಡಿದವನ ಜಯಂತಿ ಆಚರಿಸುವದು ಅವಮಾನ ವಾಗಿದೆ.