ಸೋಮವಾರಪೇಟೆ,ಅ.18: ಕಳೆದ ವರ್ಷವೇ ರಾಜ್ಯಾದ್ಯಂತ ಕೋಲಾಹಲಕ್ಕೆ ಕಾರಣವಾಗಿದ್ದ ವಿವಾದಿತ ಟಿಪ್ಪು ಜಯಂತಿಯನ್ನು ಈ ಬಾರಿ ಯಾವದೇ ಕಾರಣಕ್ಕೂ ಆಚರಣೆ ಮಾಡಬಾರದು. ರಾಜ್ಯಾದ್ಯಂತ ಮಳೆ ಕ್ಷೀಣವಾಗಿದ್ದು ರೈತಾಪಿ ವರ್ಗ ಸಂಕಷ್ಟದಲ್ಲಿದ್ದು, ಇವರ ನೆರವಿಗೆ ಸರ್ಕಾರ ಧಾವಿಸಬೇಕು. ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಮಾಜೀ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದರು.

ತಾಲೂಕಿನ ಕಿರಿಕೊಡ್ಲಿ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ವೀರಶೈವ ಜಿಲ್ಲಾ ಸಮಾವೇಶಕ್ಕೆ ಆಗಮಿಸಿದ ಅವರು ಕೊಡ್ಲಿಪೇಟೆಯಲ್ಲಿ ಮಾಧ್ಯಮದವ ರೊಂದಿಗೆ ಮಾತನಾಡಿದರು.

ವಿವಾದಿತ ಟಿಪ್ಪು ಜಯಂತಿ ಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಸಮಾಜದಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸಿದೆ. ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದ ಟಿಪ್ಪುವಿನ ಜಯಂತಿಯನ್ನು ಆಚರಿಸುವ ಮೂಲಕ ಒಂದು ವರ್ಗದ ತುಷ್ಟೀಕರಣಕ್ಕೆ ಮುಂದಾಗಿದೆ. ಸಮಾಜದಲ್ಲಿ ಕೋಮು ಸಾಮರಸ್ಯವನ್ನು ಹಾಳುಗೆಡಹುವ ಇಂತಹ ಆಚರಣೆಗಳು ರಾಜ್ಯದಲ್ಲಿ ಬೇಡವೇ ಬೇಡ ಎಂದು ಯಡಿಯೂರಪ್ಪ ನುಡಿದರು. ಟಿಪ್ಪು ಜಯಂತಿ ಆಚರಣೆ ಅಕ್ಷಮ್ಯ. ಇದರಿಂದ ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ ಎಂದರು.

ಕಳೆದ ಸಾಲಿನ ಟಿಪ್ಪು ಜಯಂತಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸಾವುನೋವುಗಳು ಸಂಭವಿಸಿದ್ದರೆ, ರಾಜ್ಯಾದ್ಯಂತ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಹೀಗಿದ್ದರೂ ಸರ್ಕಾರ ಮೊಂಡುತನಕ್ಕೆ ಬಲಿಬಿದ್ದು, ಸಾಮಾಜಿಕ ನೆಮ್ಮದಿಯನ್ನು ಕೆಡಿಸಲು ಕಾರಣವಾಗಿತ್ತು. ಈ ವರ್ಷ ಟಿಪ್ಪು ಜಯಂತಿಯನ್ನು ಯಾವದೇ ಕಾರಣಕ್ಕೂ ಆಚರಿಸಬಾರದು. ಒಂದು ವೇಳೆ ಟಿಪ್ಪು ಜಯಂತಿಯನ್ನು ಆಚರಿಸುವ ಹಠಮಾರಿ ಧೋರಣೆ ಕಂಡುಬಂದಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಸಂಘಟಿಸಲಾಗುವದು ಎಂದು ಎಚ್ಚರಿಸಿದರು.

ರಾಜ್ಯಾದ್ಯಂತ ಮಳೆ ಕೈಕೊಟ್ಟಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಅಣೆಕಟ್ಟೆಗಳಲ್ಲಿ ನೀರಿಲ್ಲ. ತುಂಬಿತುಳುಕುತ್ತಿದ್ದ ಅಣೆಕಟ್ಟೆಗಳು ಬರಿದಾಗಿದ್ದು, ರೈತಾಪಿ ವರ್ಗ ಇನ್ನಿಲ್ಲದ ಸಂಕಷ್ಟಕ್ಕೆ ಈಡಾಗಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ರೈತರು ವಿವಿಧ ಸಹಕಾರ ಸಂಘ ಹಾಗೂ ಬ್ಯಾಂಕ್‍ಗಳಲ್ಲಿ ಪಡೆದಿರುವ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಸರ್ಕಾರ ಮುಂದಾಗಬೇಕು. ಇದರೊಂದಿಗೆ ಬರಪರಿಹಾರ ಘೋಷಿಸಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತನ ಹತ್ಯೆ ನಡೆದಿರುವದು ಖಂಡನೀಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬದು ಇಂತಹ ಘಟನೆಗಳಿಂದ ವೇದ್ಯವಾಗುತ್ತಿದೆ. ಇಂತಹ ವಿದ್ರೋಹಿ ಶಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹತ್ಯೆ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ತಾ. 19ರಂದು (ಇಂದು) ರಾಜ್ಯಾದ್ಯಂತ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದರು.

ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಸಂಬಂಧಿತ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಇಂತಹ ಕಾನೂನು ದೇಶಕ್ಕೆ ಅವಶ್ಯವಿದೆ. ಈ ಕಾನೂನಿನಿಂದ ಮಹಿಳೆಯರಿಗೆ ಹೆಚ್ಚಿನ ನೆರವು,ಸಾಮಾಜಿಕ ರಕ್ಷಣೆ ದೊರಕಲಿದೆ. ಇದು ಇನ್ನೂ ಚರ್ಚಾ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಸಂಸತ್ ಚರ್ಚೆಗೆ ಬರಲಿದೆ. ಇಂತಹ ಸಂಹಿತೆ ಜಾರಿಯಿಂದ ದೇಶಕ್ಕೆ ಒಳ್ಳೆಯದಾಗಲಿದೆ ಎಂದು ನುಡಿದರು.

ನಂಜನಗೂಡು ಕೇತ್ರದ ಶಾಸಕ, ಮಾಜೀ ಸಚಿವ ಶ್ರೀನಿವಾಸ್‍ಪ್ರಸಾದ್ ಅವರು ಕಾಂಗ್ರೆಸ್ ತೊರೆದಿದ್ದು, ಬಿಜೆಪಿ ಸೇರ್ಪಡೆ ಸಂಬಂಧ ಚರ್ಚೆಗಳು ನಡೆಯುತ್ತಿವೆ. ತಾನೂ ಸಹ ಈಗಾಗಲೇ 2 ಬಾರಿ ಶ್ರೀನಿವಾಸ್ ಪ್ರಸಾದ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವದು ಎಂದು ತಿಳಿಸಿದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.