ಕುಶಾಲನಗರ, ನ. 4: ಟಿಪ್ಪು ಜಯಂತಿ ಹೆಸರಿನಲ್ಲಿ ಹೋರಾಟಗಾರ ರನ್ನು ಹತ್ತಿಕ್ಕುವ ಸರಕಾರದ ಕಾರ್ಯಕ್ರಮದ ಬಗ್ಗೆ ಕುಶಾಲನಗರ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಖಂಡಿಸಿದೆ. ಕುಶಾಲನಗರದಲ್ಲಿ ಸಮಿತಿಯ ಅಧ್ಯಕ್ಷ ಕೆ.ಜಿ.ಮನು, ಸಂಚಾಲಕ ಅನೀಶ್ ಕುಮಾರ್ ಮಾತನಾಡಿ, ಅನಗತ್ಯವಾದ ಹಾಗೂ ಬಹುಜನರಿಂದ ವಿರೋಧ ಕ್ಕೀಡಾದ ಟಿಪ್ಪು ಜಯಂತಿ ಆಚರಣೆಗೆ ಸರಕಾರ ಮುಂದಾಗಿದ್ದು ಈ ಮೂಲಕ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಜಾತಿಯ ವಿಷಬೀಜ ಬಿತ್ತಲು ಹೊರಟಿರುವದು ವಿಷಾದನೀಯ ಎಂದಿದ್ದಾರೆ.

ಕೇವಲ ಕೆಲವೇ ಜನರ ಓಲೈಕೆಯ ದುರುದ್ದೇಶ ಹೊತ್ತಿರುವ ರಾಜ್ಯ ಸರಕಾರ ಶಾಂತಿಯುತವಾಗಿ ಹೋರಾಟ ನಡೆಸುವವರನ್ನು ಪೊಲೀಸರ ಮೂಲಕ ದಮನ ಗೊಳಿಸಲು ಹೊರಟಿರುವದು ಸರಿಯಲ್ಲ ಎಂದು ತಿಳಿಸಿರುವ ಕೆ.ಜಿ.ಮನು, ಜಯಂತಿ ಹೆಸರಿನಲ್ಲಿ ಸಾಮಾಜಿಕ ಹೋರಾಟಗಾರರನ್ನು ದಮನ ಮಾಡುವ ಕೆಲಸ ನಡೆಯುತ್ತಿದೆ. ಸೆಕ್ಷನ್ 107 ರ ಹೆಸರಿನಲ್ಲಿ ಹೋರಾಟಗಾರರಿಗೆ ನೋಟೀಸ್ ನೀಡುವ ಮೂಲಕ ತಂತ್ರಗಾರಿಕೆ ನಡೆಸುತ್ತಿದೆ. ಇಂತಹ ಕೆಲಸಗಳನ್ನು ಸರಕಾರ ಕೈಬಿಟ್ಟು ಅನಗತ್ಯವಾದ ಟಿಪ್ಪು ಜಯಂತಿಯನ್ನು ತಕ್ಷಣ ಹಿಂತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತೀವ್ರ ಬರಗಾಲಕ್ಕೆ ಈಡಾಗಿರುವ ರಾಜ್ಯದ ಸಮಸ್ಯೆಯ ಬಗ್ಗೆ ಚಿಂತನೆ ಹರಿಸದಿರುವ ಸರಕಾರ ವೋಟ್ ಬ್ಯಾಂಕ್ ರಾಜಕಾರಣ ನಡೆಸುತ್ತಿದೆ. ಕಳೆದ ಸಾಲಿನಲ್ಲಿ ಟಿಪ್ಪು ಜಯಂತಿ ಹೆಸರಿನಲ್ಲಿ ಹತ್ಯೆ ನಡೆದಿದ್ದು ಅನಾವಶ್ಯಕವಾಗಿ ಹಲವರು ನ್ಯಾಯಾಲಯಕ್ಕೆ ತಿರುಗಾಡುವ ಪರಿಸ್ಥಿತಿ ಉಂಟು ಮಾಡಿದ್ದಾರೆ. ಸರಕಾರಿ ಸುತ್ತೋಲೆ ಹೊರತಾಗಿ ಕೆಲವು ಸಂಘಟನೆಗಳು ಟಿಪ್ಪು ಜಯಂತಿ ಹೆಸರಿನಲ್ಲಿ ಅಶಾಂತಿ ಮೂಡಿಸುವದು ಕಂಡುಬರುತ್ತಿದ್ದು, ಈ ಬಗ್ಗೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿರುವ ಮನು, ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡುತ್ತಿರುವ ಜನರ ಮೇಲೆ ಅನಾವಶ್ಯಕ ಪೊಲೀಸ್ ದೌರ್ಜನ್ಯ ನಿಲ್ಲಬೇಕಾಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭ ಸಮಿತಿಯ ಸಹ ಸಂಚಾಲಕರಾದ ಭಾಸ್ಕರ್ ನಾಯಕ್, ದಿನೇಶ್ ನಿಡ್ಯಮಲೆ, ಶಿವಸ್ವಾಮಿ ಇದ್ದರು.