ಬೆಂಗಳೂರು, ಜೂ. 15: ಕಳೆದ ನವೆಂಬರ್ 10 ರಂದು ಮಡಿಕೇರಿಯಲ್ಲಿ ಟಿಪ್ಪು ಜನ್ಮ ದಿನಾಚರಣೆ ಸಂದರ್ಭ ಸಂಭವಿಸಿದ ಗಲಭೆ ಹಾಗೂ ದುರಂತಗಳಿಗೆ ಆಗಿನ ಜಿಲ್ಲಾಡಳಿತವೇ ಹೊಣೆ ಎಂದು ರಾಜ್ಯ ಸರಕಾರ ಘೋಷಿಸಿದೆ. ಈ ಗಲಭೆ ಸಂದರ್ಭ ದುಷ್ಕರ್ಮಿಗಳಿಂದ ಹತ್ಯೆಗೊಂಡರೆಂದು ಹೇಳಲಾಗಿದ್ದ ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್ನ ಮುಖಂಡ ದೇವಪಂಡ ಎಸ್. ಕುಟ್ಟಪ್ಪ ಅವರು ಘಟನೆಯ ದಿನ ಮೇಲಿನಿಂದ ಬಿದ್ದು ಉಂಟಾದ ಆಘಾತದಿಂದ ಸಾವಿಗೀಡಾಗಿರುವ ದಾಗಿಯೂ ಸರಕಾರ ಸ್ಪಷ್ಟಪಡಿಸಿದೆ.
ಇಂದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಮಡಿಕೇರಿಯಲ್ಲಿ ನಡೆದ ಗಲಭೆ ಪ್ರಕರಣದ ಮ್ಯಾಜಿಸ್ಟೀರಿಯಲ್ ತನಿಖೆಗೆ ಈ ಹಿಂದೆ ರಾಜ್ಯ ಸರಕಾರ ಆದೇಶಿಸಿತ್ತು. ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಅವರು ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದರು. ಹಲವು ಬಾರಿ ಅವರು ಮಡಿಕೇರಿಗೆ ಆಗಮಿಸಿದ್ದು ಘಟನಾ ಸ್ಥಳಗಳ ಪರಿಶೀಲನೆ ಯೊಂದಿಗೆ ಜಿಲ್ಲೆಯ ಅಧಿಕಾರಿಗಳು, ಪೊಲೀಸರು, ವೈದ್ಯಾಧಿಕಾರಿಗಳು, ಸಾರ್ವಜನಿಕರು, ಗಲಭೆಗೆ ಸಂಬಂಧಿಸಿದ
ವ್ಯಕ್ತಿಗಳು ಮತ್ತು ಅನೇಕ ಪ್ರತ್ಯಕ್ಷ ದರ್ಶಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು. ಇತ್ತೀಚೆಗೆ ಸಮಗ್ರ ವಿಚಾರಣಾ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದರು. ಇದೀಗ ರಾಜ್ಯ ಸರಕಾರ ಈ ವರದಿಯನ್ನು ಸರಕಾರ ಒಪ್ಪ್ಪಿದ್ದು, ಶಿಖಾ ಅವರು ತನಿಖಾ ವರದಿಯಲ್ಲಿ ಮಾಡಿರುವ ಶಿಫಾರಸುಗಳನ್ನು ಜಾರಿಗೊಳಿಸಲು ಮಂತ್ರಿ ಪರಿಷತ್ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂಬದಾಗಿ ಇಂದು ಇಲ್ಲಿ ರಾಜ್ಯ ಕಾನೂನು, ಉನ್ನತ ಶಿಕ್ಷಣ ಹಾಗೂ ಸಂಸದೀಯ ವ್ಯವಹಾರ ಖಾತೆ ಸಚಿವ ಟಿ.ಬಿ. ಜಯಚಂದ್ರ ಅವರು ಮಾಧ್ಯಮಗಳಿಗೆ ತಿಳಿಸಿದರು.
ಇಬ್ಬರು ಅಧಿಕಾರಿಗಳ ಗೈರು
ದುರ್ಘಟನಾ ಸಂದರ್ಭ ಕೊಡಗು ಜಿಲ್ಲಾಧಿಕಾರಿಯಾಗಿದ್ದ ಮೀರ್ ಅನೀಸ್ ಅಹ್ಮದ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವರ್ತಿಕಾ ಕಟಿಯಾರ್ ಇವರುಗಳು ರಜೆಯಲ್ಲಿ ತೆರಳಿ ಕರ್ತವ್ಯ ಲೋಪ ಎಸಗಿದ್ದಾರೆ. ಇದರಿಂದಾಗಿಯೇ ಜಿಲ್ಲೆಯಲ್ಲಿ ಗಲಭೆ, ದುರಂತಗಳು ನಡೆಯುವಂತಾಯಿತು ಎಂದು ಈ ಮ್ಯಾಜಿಸ್ಟೀರಿಯಲ್ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. (ಟಿಪ್ಪು ಜಯಂತಿಯ ಮುನ್ನಾ ದಿನಗಳಲ್ಲಿ ಮಾತ್ರ ಎಸ್.ಪಿ ವರ್ತಿಕಾ ಕಟಿಯಾರ್ ರಜೆಯಲ್ಲಿದ್ದು ಘಟನೆಯ ದಿನ ಮಡಿಕೇರಿಯಲ್ಲಿಯೇ ಇದ್ದರು ಎಂಬದನ್ನು ಇಲ್ಲಿ ನೆನಪಿಸಿಕೊಳ್ಳ ಬೇಕಿದೆ. ಆದರೆ, ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಟಿಪ್ಪು ಜಯಂತಿ ಸಂದರ್ಭವೇ ರಜೆ ಹಾಕಿ ತೆರಳಿದ್ದರು)
ಈ ಇಬ್ಬರು ಅಧಿಕಾರಿಗಳಿಗೆ ಮುಂದೆ ಯಾವದೇ ಕಾರ್ಯಕಾರಿ ಹುದ್ದೆಗಳನ್ನು ನೀಡಬಾರದು ಎಂದು ಮಂತ್ರಿ ಪರಿಷತ್ ತೀರ್ಮಾನಿಸಿರುವ ದಾಗಿ ಸಚಿವ ಜಯಚಂದ್ರ ಮಾಹಿತಿಯಿತ್ತರು. (ಆದರೆ, ಮೀರ್ ಅನೀಸ್ ಅಹ್ಮದ್ ಅವರು ಈಗಾಗಲೆ ಜಿಲ್ಲಾಧಿಕಾರಿ ಹುದ್ದೆಯಿಂದ ನಿವೃತ್ತರಾಗಿದ್ದು ಅವರಿಗೆ ಇನ್ನು ಮುಂದೆ ಹುದ್ದೆ ನೀಡುವ ಸಾಧ್ಯತೆಯೇ ಇಲ್ಲ ಎಂಬದು ಸರಕಾರದ ಗಮನಕ್ಕೆ ಬಾರದಿರುವದು ವಿಪರ್ಯಾಸಕರ!) ಅಧಿಕಾರಿಗಳಾದ ವರ್ತಿಕಾ ಕಟಿಯಾರ್ ಹಾಗೂ ಮೀರ್ ಅನೀಸ್ ಅಹ್ಮದ್ ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆಯೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ತೀರ್ಮಾನಿಸಿರುವ ದಾಗಿಯೂ ಸಚಿವ ಜಯಚಂದ್ರ ಪ್ರಕಟಿಸಿದರು.
ಅಲ್ಲದೆ, ಘಟನೆಯ ಬಗ್ಗೆ ದಕ್ಷಿಣ ವಲಯದ ಪೊಲೀಸ್ ಮಹಾ ನಿರ್ದೇಶಕರಿಗೂ ಕಾರಣ ಕೇಳಿ ನೋಟೀಸ್ ಜಾರಿಗೊಳಿಸುವಂತೆ ನಿರ್ಧಾರ ಕೈಗೊಂಡಿರುವದಾಗಿಯೂ ಸಚಿವರು ತಿಳಿಸಿದರು.
ಕುಟ್ಟಪ್ಪ ಬಿದ್ದು ಸಾವು
ಟಿಪ್ಪು ಜನ್ಮ ದಿನಾಚರಣೆ ಸಂದರ್ಭ ಸಾವಿಗೀಡಾದ ಕೊಡಗಿನ ವಿಶ್ವ ಹಿಂದೂ ಪರಿಷತ್ ಮುಖಂಡ ದೇವಪಂಡ ಎಸ್.ಕುಟ್ಟಪ್ಪ ಅವರು ಮೇಲಿನಿಂದ ಬಿದ್ದ ಪರಿಣಾಮ ಉಂಟಾದ ಆಘಾತದಿಂದ ಮೃತಪಟ್ಟಿರುವದಾಗಿ ತನಿಖಾ ವರದಿಯಲ್ಲಿ ವಿವರಿಸಲಾಗಿದೆ. ವೈದ್ಯಕೀಯ ಮರಣೋತ್ತರ ಪರೀಕ್ಷೆಯಲ್ಲಿ ಇದು ದೃಢಪಟ್ಟಿರುವದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದಾಗಿ ಕುಟ್ಟಪ್ಪ ಅವರು ಹತ್ಯೆಗೀಡಾದರು ಎಂದು ಜಿಲ್ಲೆಯಲ್ಲಿ ಕೇಳಿದ್ದ ಆರೋಪಕ್ಕೆ ಇದೀಗ ತಿಲಾಂಜಲಿ ನೀಡಲಾಗಿದೆ.
ಅಧಿಕಾರಿಗಳ ಹಾಜರು ಕಡ್ಡಾಯ
ಟಿಪ್ಪು ಜಯಂತಿ ದಿನದ ದುರ್ಘಟನೆಗಳ ಬಳಿಕ ಇದೀಗ ಸರಕಾರ ದೃಢ ನಿರ್ಧಾರವೊಂದನ್ನು ಕೈಗೊಂಡಿದೆ. ಈ ಕುರಿತು ಇಂದಿನ ಮಂತ್ರಿ ಪರಿಷತ್ನಲ್ಲಿ ಚರ್ಚೆ ನಡೆದಿದೆ.ಇನ್ನು ಮುಂದೆ ರಾಜ್ಯದಲ್ಲಿ ಸರಕಾರದ ಪ್ರಮುಖ ಕಾರ್ಯಕ್ರಮಗಳು ನಡೆಯುವ ಸಂದರ್ಭ ಆಯಾ ಜಿಲ್ಲೆಗಳ ಜಿಲ್ಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲೆಯ ಇತರ ಇಲಾಖೆಗಳ ಪ್ರಮುಖ ಅಧಿಕಾರಿಗಳು ಕಡ್ಡಾಯವಾಗಿ ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಇರಬೇಕು ಎಂದು ಮಂತ್ರಿ ಪರಿಷತ್ ಇಂದು ನಿರ್ಧಾರ ಕೈಗೊಂಡಿರುವದಾಗಿ ಸಚಿವರು ಮಾಹಿತಿಯಿತ್ತರು.