ಶ್ರೀಮಂಗಲ, ಡಿ. 5 : ಕೊಡಗು ಜಿಲ್ಲೆ ಸತತವಾಗಿ 2ನೇ ವರ್ಷ ಬರಗಾಲಕ್ಕೆ ತುತ್ತಾಗಿದ್ದರೂ, ಕಾಫಿ ಮಂಡಳಿ ವತಿಯಿಂದ ಸರಕಾರಕ್ಕೆ ಸಲ್ಲಿಸಿರುವ ಕಾಫಿ ನಷ್ಟ ಸಮೀಕ್ಷೆಯ ವರದಿಯಲ್ಲಿ ಶೇ 30 ಫಸಲು ಮಾತ್ರ ನಷ್ಟವೆಂದು ನಮೂದಿಸಿರುವ ಕ್ರಮ ವಾಸ್ತವಾಂಶವನ್ನು ಮರೆಮಾಚಿ ಬೆಳೆಗಾರರಿಗೆ ಅನ್ಯಾಯ ಮಾಡಲಾಗಿದೆ. ಮರು ಸಮೀಕ್ಷೆ ನಡೆಸಬೇಕೆಂದು ಜಿಲ್ಲಾ ಬೆಳೆಗಾರರ ಒಕ್ಕೂಟದ ಆಶ್ರಯದಲ್ಲಿ ಬೆಳೆಗಾರರು ಶ್ರೀಮಂಗಲ ಕಾಫಿ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಈ ಸಂದರ್ಭ ಕಾಫಿ ಮಂಡಳಿಯ ಉಪನಿರ್ದೇಶಕ ಸತೀಶ್ ಚಂದ್ರ ಅವರು ನೀಡಿದ ಸಮಜಾಯಿಷಿಕೆ ಬೆಳೆಗಾರರನ್ನು ತೀವ್ರವಾಗಿ ಕೆರಳಿಸಿತು. ನಿಮಗೆ ಸ್ವಲ್ಪ ಜಾಸ್ತಿ ಮಳೆಯಾದರೂ ಅರ್ಜಿ ತೆಗೆದುಕೊಂಡು ಬರುತ್ತೀರಾ, ಮಳೆ ಕಡಿಮೆಯಾದರೂ ಪರಿಹಾರ ಬೇಕೆಂದು ಪ್ರತಿಭಟನೆ ಮಾಡುತ್ತೀರಾ ಸಮೀಕ್ಷೆಯನ್ನು ಜಿಲ್ಲಾಧಿಕಾರಿಗಳು ಒಂದು ವಾರದ ಒಳಗೆ ಬೇಕು ಎಂದು ಹೇಳಿರುವದರಿಂದ ತರಾತುರಿಯಲ್ಲಿ ಮಾಡಲಾಯಿತು. ಈಗಾಗಲೇ ಸಮೀಕ್ಷೆ ವರದಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಮತ್ತೆ ಮರು ಸಮೀಕ್ಷೆ ಮಾಡಲು ಆದೇಶ ಮಾಡಿದರೆ ಮಾತ್ರ ಮತ್ತೆ ಸಮೀಕ್ಷೆ ನಡೆಸಲು ಸಾಧ್ಯ.
(ಮೊದಲ ಪುಟದಿಂದ) ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಫಿ ಮಾರುಕಟ್ಟೆ ಕುಸಿಯದಂತೆ ತಡೆಯಲು ಉತ್ಪಾದನೆ ಜಾಸ್ತಿ ತೋರಿಸುತ್ತೇವೆ ಎಂದು ಹೇಳಿದರು.
ಇದಕ್ಕೆ ಕೆರಳಿದ ಬೆಳೆಗಾರರು ಉಪನಿರ್ದೇಶಕರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಕಾಫಿ ಬೆಳೆಗಾರರಿಗಾಗಿ ಕಾಫಿ ಮಂಡಳಿ ಸ್ಥಾಪನೆಯಾಗಿದೆಯೇ ಹೊರತು, ಕಾಫಿ ಮಂಡಳಿಗಾಗಿ ಬೆಳೆಗಾರರು ಇಲ್ಲ. ಕಾಫಿ ಮಂಡಳಿ ಬೆಳೆಗಾರರ ಹಿತ ಕಾಪಾಡುವ ಬದಲು ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಮಾತಿನಿಂದ ನೋವಾಗಿದ್ದರೆ ತಮ್ಮ ಮಾತನ್ನು ವಾಪಸ್ಸು ಪಡೆಯುವದಾಗಿ ಉಪನಿರ್ದೇಶಕರು ವಿಷಾದ ವ್ಯಕ್ತ ಪಡಿಸಿದರು.
ಬಯಲಾದ ನಕಲಿ ಸಮೀಕ್ಷೆ: ಕಚೇರಿಯಲ್ಲಿಯೇ ಕೂತು ಬೆಳೆಗಾರರ ತೋಟಗಳಿಗೆ ತೆರಳದೆ ನಷ್ಟ ಸಮೀಕ್ಷೆ ಕೈಗೊಳ್ಳಲಾಗಿದೆ. ಸಮೀಕ್ಷೆ ಮಾಡಿದ ದಾಖಲೆಗಳನ್ನು ಪರಿಶೀಲಿಸುವಂತೆ ಬೆಳೆಗಾರರು ಒತ್ತಾಯಿಸಿದರು. ಈ ಸಂದರ್ಭ ಕಾಫಿ ನಷ್ಟ ಸಮೀಕ್ಷೆ ಅರ್ಜಿಯನ್ನು ಅಧಿಕಾರಿಗಳೇ ಭರ್ತಿ ಮಾಡಿಕೊಂಡು ನಕಲಿ ಸಹಿ ಮಾಡಿರುವದು ಬೆಳಕಿಗೆ ಬಂತು. ಕುರ್ಚಿ ಗ್ರಾಮದ ಎ.ಎಸ್. ಪೂವಯ್ಯ, ಬಿರುಗ ಗ್ರಾಮದ ಎ.ಎಸ್. ಗೋಪಾಲ್ ಅವರು ತಮ್ಮ ತೋಟಗಳಿಗೆ ಅಧಿಕಾರಿಗಳು ಭೇಟಿ ನೀಡಿಲ್ಲ. ತಮ್ಮ ಹೆಸರಿನಲ್ಲಿರುವ ಅರ್ಜಿಗಳಿಗೆ ತಾವು ರುಜು ಮಾಡಿಲ್ಲ ಎಂದು ಪ್ರತ್ಯಕ್ಷವಾಗಿ ಹೇಳಿದರು. ಸಬೂಬು ಹೇಳಿದ ಅಧಿಕಾರಿಗಳನ್ನು ತೀವ್ರವಾಗಿ ಬೆಳೆಗಾರರು ತರಾಟೆಗೆ ತೆಗೆದುಕೊಂಡರು.
1500 ಮೀ.ಮೀ ಮಳೆ : ಕಾಫಿಗೆ 1500 ಮೀ.ಮೀ. ಮಳೆ ಸಾಕು. 1500 ಮೀ.ಮೀ.ಗಿಂತ ಹೆಚ್ಚಿನ ಮಳೆ ಆಗಿದೆ ಎಂದು ಉಪನಿರ್ದೇಶಕರು ಹೇಳಿದ ಮಾತು ಮತ್ತೆ ಬೆಳೆಗಾರರು ಕಿಡಿಕಾರುವಂತೆ ಮಾಡಿತು. 1500 ಮೀ.ಮೀ ಮಳೆ ಒಂದೇ ದಿನ ಹೊಡೆದರೆ ಸಾಕೆ, ಎಂದು ಕಿಡಿಕಾರಿದ ಬೆಳೆಗಾರರು, 2015 ಸೆಪ್ಟೆಂಬರ್‍ನಿಂದ 2016 ಮೇ ತಿಂಗಳವರೆಗೆ ಉತ್ತಮ ಮಳೆ ಬಂದಿಲ್ಲ. ಈ ಅವಧಿಯಲ್ಲಿ ಕಾಫಿಗೆ ಬೇಕಾದ ಹೂ ಮಳೆ ನಂತರ ಬ್ಯಾಕಿಂಗ್ ಮಳೆ ಬಂದಿಲ್ಲ. ಶೇ. 60 ರಷ್ಟು ಬೆಳೆಗಾರರು ಮಳೆಯನ್ನೇ ಆಶ್ರಯಿಸಿದ್ದು, ಶೇ 40ರಷ್ಟು ಮಾತ್ರ ಕೃತಕ ನೀರಾವರಿ ಸೌಲಭ್ಯ ಹೊಂದಿದ್ದಾರೆ. ಕೃತಕ ನೀರಾವರಿ ಸೌಲಭ್ಯ ಹೊಂದಿದವರಿಗೂ ಸಹ ಬರಗಾಲದ ಛಾಯೆಯಿಂದ ಅಗತ್ಯವಾದ ನೀರು ನೀಡಲು ಸಾಧ್ಯವಾಗಿಲ್ಲ. ಮಳೆ ಆಶ್ರಯಿತ ಶೇ 60ರಷ್ಟು ಬೆಳೆಗಾರರ ಶೇ 90ರಷ್ಟು ಕಾಫಿ ನಷ್ಟವಾಗಿದೆ. ಕೃತಕ ನೀರಾವರಿ ಸೌಲಭ್ಯ ನೀಡಿದ ಶೇ 40ರಷ್ಟು ಬೆಳೆಗಾರರಲ್ಲಿ ಸರಾಸರಿ ಶೇ 50ರಷ್ಟು ಕಾಫಿ ನಷ್ಟವಾಗಿದೆ. ಹೀಗಿರುವಾಗ ಶೇ. 70ರಷ್ಟು ಕಾಫಿ ಫಸಲು ಲಭ್ಯವಿದೆ ಎನ್ನುವ ವರದಿ ಅವೈಜ್ಞಾನಿಕ ಹಾಗೂ ವಾಸ್ತವಾಂಶವನ್ನು ಮರೆಮಾಚಿದ ವರದಿ ಎಂದು ಬೆಳೆಗಾರ ಒಕ್ಕೂಟದ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ದೂರು : ಕಾಫಿ ನಷ್ಟ ಸಮೀಕ್ಷೆ ಸಂದರ್ಭ ಬೆಳೆಗಾರರ ತೋಟಗಳಿಗೆ ತೆರಳದೆ, ಬೆಳೆಗಾರರ ಹೆಸರಿನಲ್ಲಿರುವ ಅರ್ಜಿಗಳನ್ನು ತಾವೇ ಭರ್ತಿ ಮಾಡಿ, ಬೆಳೆಗಾರರ ನಕಲಿ ಸಹಿ ಮಾಡಿರುವ ಕಾಫಿ ಮಂಡಳಿ ವೀರಾಜಪೇಟೆ ಉಪನಿರ್ದೇಶಕ, ಶ್ರೀಮಂಗಲ ಕಾಫಿ ಮಂಡಳಿ ಕಿರಿಯ ಸಂಪರ್ಕ ಅಧಿಕಾರಿ ಹಾಗೂ ಶ್ರೀಮಂಗಲ ಕಂದಾಯ ಪರಿವೀಕ್ಷಕÀರ ಮೇಲೆ ಬೆಳೆಗಾರರನ್ನು ವಂಚಿಸಿರುವ ಹಾಗೂ ನಕಲಿ ಸಹಿ ಬಳಸಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಬೆಳೆಗಾರರ ಒಕ್ಕೂಟದಿಂದ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಲಾಯಿತು. ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಅವರು, ಬೆಳೆಗಾರರ ಪರವಾಗಿ ಸ್ಥಳದಲ್ಲಿದ್ದ ಕುಟ್ಟ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ಅವರಿಗೆ ದೂರು ನೀಡಿದರು.
ಕೆ.ಡಿ.ಪಿ. ಸಭೆಯಲ್ಲಿ ಪ್ರಸ್ತಾಪ : ತಾ. 7ರಂದು ಜಿ.ಪಂ. ಕೆ.ಡಿ.ಪಿ. ಸಭೆಯಲ್ಲಿ ಕಾಫಿ ಸೇರಿದಂತೆ ಇತರ ಎಲ್ಲಾ ಬೆಳೆಗಳ ಮರು ಸಮೀಕ್ಷೆಗೆ ಪ್ರಸ್ತಾಪಿಸಲಾಗುವದೆಂದು ಪ್ರತಿಭಟನೆ ಸಂದರ್ಭ ಆಗಮಿಸಿ ಅಹವಾಲು ಕೇಳಿದ ಜಿ.ಪಂ. ಸದಸ್ಯ ಶಿವು ಮಾದಪ್ಪ ಭರವಸೆ ನೀಡಿದರು.
ಶಾಸಕರಿಂದ ಭರವಸೆ : ಪ್ರತಿಭಟನೆ ಸಂದÀರ್ಭ ಶಾಸಕ ಕೆ.ಜಿ. ಬೋಪಯ್ಯ ಆಗಮಿಸಿ ಕಾಫಿ ಮಂಡಳಿ ಅಧಿಕಾರಿಗಳ ಸಮೀಕ್ಷೆ ಸರಿಯಿಲ್ಲ. ಸತತವಾಗಿ 2ನೇ ವರ್ಷ ಬರಗಾಲಕ್ಕೆ ತುತ್ತಾಗಿ ನೀರಾವರಿ ಸೌಲಭ್ಯ ನೀಡಲು ಸಾಧ್ಯವಾಗದ ಸಣ್ಣ ಹಾಗೂ ಮಧ್ಯಮ ಕಾಫಿ ಬೆಳೆಗಾರರ, ಕಾಫಿ ಫಸಲು ಶೇ 70ರಷ್ಟು ನಷ್ಟಗೊಂಡಿದೆ. ಬರಗಾಲಕ್ಕೆ ತುತ್ತಾದರೂ ಕಾಫಿ ಫಸಲು ನಷ್ಟಗೊಂಡಿಲ್ಲ ಎನ್ನುವ ಕಾಫಿ ಮಂಡಳಿಯ ವರದಿ ತಪ್ಪು ಮಾಹಿತಿಯನ್ನು ನೀಡಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಹಾಗೂ ಕಾಫಿ ಮಂಡಳಿಯ ಜಂಟಿ ನಿರ್ದೇಶಕ (ಹಾಸನ) ಹೇಮಂತ್ ಕುಮಾರ್ ಹಾಗೂ ಸಂಸದೆ ಶೋಭಾ ಕರದ್ಲಾಜೆ ಅವರೊಂದಿಗೆ ಮಾತನಾಡಿ, ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಗಮನ ಸೆಳೆದು ಮರು ಸಮೀಕ್ಷೆಗೆ ಮನವಿ ಮಾಡಿದರು. ಜಂಟಿ ನಿರ್ದೇಶಕರೊಂದಿಗೆ ಮಾತನಾಡಿ ಮರು ಸಮೀಕ್ಷೆಗೆ ಒತ್ತಾಯಿಸಲಾಗುವದೆಂದು ಸಂಸದೆ ಶೋಭಾ ಕರದ್ಲಾಜೆ ಭರವಸೆ ನೀಡಿದ್ದಾರೆ ಎಂದು ಕೆ.ಜಿ.ಬೋಪಯ್ಯ ತಿಳಿಸಿದರು.
ಸಂಸದರ ಭರವಸೆ: ಕಾಫಿ ಮಂಡಳಿಯ ಸಮೀಕ್ಷೆ ವಾಸ್ತವಾಂಶವನ್ನು ಮರೆಮಾಚಿ ಬೆಳೆಗಾರರ ನೈಜ ಸಮಸ್ಯೆಯನ್ನು ತಿರುಚಿ ಸಲ್ಲಿಸಿರುವ ವರದಿಯಾಗಿದ್ದು, ಈ ವರದಿಯಿಂದ ಸರಕಾರಕ್ಕೆ ಕಾಫಿ ಬೆಳೆಗಾರರ ಸಂಕಷ್ಟ ಅರ್ಥವಾಗುವದಿಲ್ಲ ಎಂದು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಂಕರು ನಾಚಪ್ಪ ಅವರು, ಸಂಸದ ಪ್ರತಾಪ್ ಸಿಂಹ ಅವರ ಗಮನ ಸೆಳೆದರು. ಕಾಫಿ ಮಂಡಳಿ ಶೀಘ್ರದಲ್ಲೆ ಮರು ಸಮೀಕ್ಷೆ ನಡೆಸಬೇಕು. ಇಲ್ಲದಿದ್ದರೆ ಕಾಫಿ ಮಂಡಳಿಯಿಂದ ಬೆಳೆಗಾರರಿಗೆ ಉಂಟಾಗಿರುವ ವಂಚನೆಯ ಬಗ್ಗೆ ಕೇಂದ್ರ ವಾಣಿಜ್ಯ ಸಚಿವರ ಗಮನ ಸೆಳೆಯಲಾಗುವದು ಎಂದು ಸಂಸದ ಪ್ರತಾಪ್ ಸಿಂಹ ಒಕ್ಕೂಟಕ್ಕೆ ಭರವಸೆ ನೀಡಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಶಂಕರು ನಾಚಪ್ಪ ತಿಳಿಸಿದರು. ಪ್ರತಿಭಟನಾಕಾರರು ಎ.ಡಿ.ಸಿ. ಸತೀಶ್ ಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕಾಫಿ ಮಂಡಳಿ ವಿರುದ್ಧ ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ಶ್ರೀಮಂಗಲ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಬೆಳೆಗಾರರಾದ ಅಪ್ಪಚ್ಚಂಗಡ ಮೋಟಯ್ಯ, ಅಜ್ಜಮಾಡ ಚಂಗಪ್ಪ, ತಾ.ಪಂ. ಸದಸ್ಯ ಪಲ್ವೀನ್ ಪೂಣಚ್ಚ, ಟಿ.ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್, ಗ್ರಾ.ಪಂ. ಸದಸ್ಯರಾದ ಚೊಟ್ಟೆಯಂಡಮಾಡ ಉದಯ, ಚೋಕೀರ ಕಲ್ಪನ, ಬಲ್ಯಮೀದೇರಿರ ಶರಣ್ ಚಂಗಪ್ಪ, ಮೋಹನ್ ಕುಮಾರ್, ಮೀದೇರಿರ ಬಿ.ಸುರೇಶ್, ಮೀದೇರಿರ ಕೇಸು ಕುಟ್ಟಪ್ಪ, ಕುಂಞಂಗಡ ನಟೇಶ್, ಕಟ್ಟೇರ ಈಶ್ವರ, ಅಯ್ಯಮಾಡ ಪೂವಯ್ಯ, ಉಳುವಂಗಡ ಉದಯ, ಅಜ್ಜಮಾಡ ಬೋಪಣ್ಣ, ಕೋಟ್ರಮಾಡ ಪ್ರಭು, ಉಳುವಂಗಡ ಉದಯ, ಕುಂಞಂಗಡ ಕೇಸು, ಐಪುಮಾಡ ಶಂಭು ಸೇರಿದಂತೆ ಬೆಳೆಗಾರರು ಪಾಲ್ಗೊಂಡಿದ್ದರು. ಶಾಸಕರೊಂದಿಗೆ ಸ್ಥಳಕ್ಕೆ ಜಿ.ಪಂ. ಶಿಕ್ಷಕ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ, ವೀರಾಜಪೇಟೆ ಕ್ಷೇತ್ರ ಬಿ.ಜೆ.ಪಿ. ಅಧ್ಯಕ್ಷ ಅರುಣ್ ಭೀಮಯ್ಯ ಮತ್ತಿತರರು ಆಗಮಿಸಿದ್ದರು. ಕುಟ್ಟ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್, ಶ್ರೀಮಂಗಲ ಠಾಣಾಧಿಕಾರಿ ಶ್ರೀಧರ್, ಕುಟ್ಟ ಠಾಣಾಧಿಕಾರ ರವಿಕಿರಣ್ ಸಿಬ್ಬಂದಿಗಳೊಂದಿಗೆ ಬಂದೋಬಸ್ತ್ ಕಲ್ಪಿಸಿದರು.