ಮಡಿಕೇರಿ, ಸೆ. 27: ಭಾರತದಲ್ಲಿ ಯುವ ಜನತೆಯ ತಂಡ ಹೆಚ್ಚಿನ ಪ್ರಮಾಣದಲ್ಲಿದೆ. ಯುವ ಶಕ್ತಿಯನ್ನು ಸರಿಮಾರ್ಗದಲ್ಲಿ ಕೊಂಡ್ಯೋಯ್ದರೆ, ಜ್ಞಾನದೊಂದಿಗೆ ವಿಜ್ಞಾನವನ್ನೂ ಬೆಸೆದರೆ ವಿದ್ಯಾಕ್ಷೇತ್ರ ಸಬಲವಾಗಲು ಸಾಧ್ಯ ಎಂದು ಮಂಗಳ ಗಂಗೋತ್ರಿಯ ರಿಜಿಸ್ಟ್ರಾರ್ ಪ್ರೊ. ಕೋಡೀರ ಎಂ. ಲೋಕೇಶ್ ಹೇಳಿದರು.
ವೀರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು ಭಾರತದಲ್ಲಿ ವಿದ್ಯಾಕ್ಷೇತ್ರಕ್ಕೆ ಹರಿಸುತ್ತಿರುವ ಹಣಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲವೆಂದರು. ಕೃಷಿ ಆಧಾರಿತ ಕೊಡಗಿನಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ವಿದ್ಯಾಕ್ಷೇತ್ರ ನಿಗದಿತ ಪ್ರಮಾಣದಲ್ಲಿ ಬೆಳೆದಿಲ್ಲ ಎಂದು ವಿಷಾದಿಸಿದ ಅವರು ವಿದ್ಯಾರ್ಜನೆ ಸಂದರ್ಭ ವಿದ್ಯಾರ್ಥಿ ಗಳು ಜಾತಿ - ಮತ, ಸಂಘಟನೆಗಳನ್ನು ಮೀರಿ, ಮಾನವೀಯ ಮೌಲ್ಯಗಳನ್ನು ಹೊಂದಿ ಬೆಳೆಯುವಂತಾಗಬೇಕು ಎಂದರು.
ಸಮತೋಲನವಿರಲಿ
ಗುರಿ ಅರಸಿ ಸಾಗುವ ವಿದ್ಯಾರ್ಥಿ ಗಳಲ್ಲಿ ಬಿಸಿರಕ್ತದ ಹುರುಪಿನೊಂದಿಗೆ ಸಮತೋಲನವೂ ಅವಶ್ಯವೆಂದು ಮುಖ್ಯ ಅತಿಥಿ, ‘ಶಕ್ತಿ’ ಸಂಪಾದಕ ಬಿ.ಜಿ. ಅನಂತ ಶಯನ ಹೇಳಿದರು. ಯಶಸ್ಸಿನ ಹಾದಿಯಲ್ಲಿ ದಿಢೀರ್ ಫಲಿತಾಂಶ ಹಿಂದೆ ಬೀಳದೆ ಮತ್ತೊಬ್ಬ ರನ್ನು ಮಾದರಿಯಾಗಿ ಅನುಕರಿಸುವ ಬದಲು, ತಾವೇ ಮಾದರಿಯಾಗುವತ್ತ ವಿಶಿಷ್ಟ ಹೆಜ್ಜೆ ಇರಿಸಬೇಕೆಂದರು. ಪೋಷಕರು, ಗುರು ಹಿರಿಯರಿಗೆ ಗೌರವ ನೀಡುವದರಿಂದ ವಿದ್ಯಾರ್ಥಿ ಗಳ ವ್ಯಕ್ತಿತ್ವ ಹೆಚ್ಚುತ್ತದೆಂದರು. ಗೌರವ ಅತಿಥಿ ಬಿ.ಎಂ. ಜೆಫ್ರಿ ಚೆಂಗಪ್ಪ ಮಾತನಾಡಿ, ಎಲ್ಲರಲ್ಲೂ ಪ್ರತಿಭೆಗಳು ಹುದುಗಿದ್ದು, ಅದನ್ನು ಹೊರಗೆಡಹಲು ಅವಕಾಶ ಅವಶ್ಯ ಎಂದರು. ತಮ್ಮ ಹಾಡುಗಳೊಂದಿಗೆ ವಿದ್ಯಾರ್ಥಿಗಳನ್ನು ರಂಜಿಸಿದರು.
ಕಾವೇರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಎ.ಸಿ. ಗಣಪತಿ ಅವರು ಮಾತನಾಡಿ, ಸಧ್ಯದಲ್ಲೇ ವಿದ್ಯಾರ್ಥಿ ಗಳಿಗೆ ಐಎಎಸ್, ಕೆಎಎಸ್ ಇತ್ಯಾದಿ ತರಬೇತಿ ನೀಡುವ ಯೋಜನೆ ರೂಪಿಸಲಾಗುತ್ತಿದೆ ಎಂದರು. ವಿದ್ಯಾರ್ಥಿಗಳಲ್ಲಿ ಗರ್ವ ಹಾಗೂ ಉದ್ಧಟತನ ಬೇಡ ಎಂದು ಕಿವಿ ಮಾತು ಹೇಳಿದ ಅವರು ಯಾರನ್ನೂ ಸೋಲಿಸಲು ಹವಣಿಸದೆ, ಅವರನ್ನು ಗೆಲ್ಲಲು ಮುಂದಾಗಬೇಕೆಂದರು.
ಈ ಸಂದರ್ಭ ಕೆ.ಎಂ. ಶಿವಕುಮಾರ್ ಉಪಾಧ್ಯಕ್ಷರಾಗಿ ಹಾಗೂ ಇತರರನ್ನು ವಿವಿಧ ಸಮಿತಿಗಳಿಗೆ ಪ್ರಮಾಣ ವಚನದ ಮೂಲಕ ಹೆಸರು ಘೋಷಿಸಲಾಯಿತು.
ಸಭೆಯಲ್ಲಿ ಪುಸ್ತಕ ಪ್ರಕಟಿಸಿರುವ ಉಪನ್ಯಾಸಕಿ ರೇವತಿ ಹಾಗೂ ಡಾಕ್ಟರೇಟ್ ಗಳಿಸಿದ ಆನಂದ ಕಾರ್ಲ ಅವರನ್ನು ಸನ್ಮಾನಿಸಲಾಯಿತು. ಹೇಮಂತ್ ಮತ್ತು ತಂಡದಿಂದ ಪ್ರಾರ್ಥನೆ, ಪ್ರಾಂಶುಪಾಲ ಪ್ರೊ. ಸಿ.ಎಂ. ನಾಚಪ್ಪ ಅವರಿಂದ ಸ್ವಾಗತ, ಉಪನ್ಯಾಸಕ ಎನ್.ಎಂ. ನಾಣಯ್ಯ ಅವರಿಂದ ವಂದನಾರ್ಪಣೆ ನೆರವೇರಿತು.