ಮಡಿಕೇರಿ, ಅ. 4: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ಅಡಿಯಲ್ಲಿ ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿ ಇವರ ಅಶ್ರಯದಲ್ಲಿ ಜೇನು ಕೃಷಿ ತರಬೇತಿ ಕಾರ್ಯಕ್ರಮವನ್ನು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲ್ಲಿ ಹಮ್ಮಿಕೊಳ್ಳಲಾಗಿತ್ತು.

ತರಬೇತಿ ಕಾರ್ಯಕ್ರಮದಲ್ಲಿ ಬೇಗೂರು ಗ್ರಾಮದ ಈಶ್ವರ ಸ್ವಸಹಾಯ ಸಂಘದ ರೈತರು ಭಾಗವಹಿಸಿದ್ದರು. ಎನ್.ಎಂ. ಪೂಣಚ್ಚ, ಮುಖ್ಯಸ್ಥರು, ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿ ಇವರು ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಮಗ್ರ ಬೇಸಾಯ ಪದ್ಧತಿಯಲ್ಲಿ ಜೇನು ಕೃಷಿಯ ಮಹತ್ವದ ಬಗ್ಗೆ ತಿಳಿಸಿದರು. ರೈತರು ಈ ತರಬೇತಿಯ ಪ್ರಯೋಜನ ಪಡೆದುಕೊಂಡು ಜೇನು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಅರಣ್ಯ ಮಹಾವಿದ್ಯಾಲಯದ ಕೀಟ ಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಾಪಕ ಡಾ. ಆರ್.ಎನ್. ಕೆಂಚರೆಡ್ಡಿ ಅವರು ಜೇನು ಕೃಷಿಯ ಮಹತ್ವ, ಜೇನು ಕುಟುಂಬಗಳ ನಿರ್ವಹಣೆ ಮತ್ತು ಅವುಗಳನ್ನು ವಿಂಗಡಿಸಿ ಜೇನು ಕುಟುಂಬಗಳ ವರ್ಧನೆ, ಜೇನು ಸಾಕಾಣಿಕೆಯಲ್ಲಿ ಬಳಸಬಹುದಾದ ಸಲಕರಣೆಗಳು ಹಾಗೂ ಅವುಗಳನ್ನು ಉಪಯೋಗಿಸುವ ಕ್ರಮಗಳು, ರಾಣಿ ಜೇನು ಗೂಡು ತೊರೆದು ಹೋಗದಂತೆ ಕೈಗೊಳ್ಳಬೇಕಾದ ಕ್ರಮಗಳು, ಜೇನಿನ ಜೀವನ ಕ್ರಮ, ಜೇನುತುಪ್ಪ ತೆಗೆಯುವ ವಿಧಾನಗಳು ಹಾಗೂ ಜೇನಿನ ಇನ್ನಿತರ ಸ್ವ್ವಾರಸ್ಯಕರ ವಿಷಯಗಳ ಬಗ್ಗೆ ತಿಳಿಸಿಕೊಟ್ಟರು. ಪ್ರಾತ್ಯಕ್ಷಿಕವಾಗಿ ಅರಣ್ಯ ಮಹಾವಿದ್ಯಾಲಯದ ಮಧುವನದಲ್ಲಿ ಜೇನು ನಿರ್ವಹಣೆ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಿದರು.

ಈಶ್ವರ ಸ್ವಸಹಾಯ ಸಂಘದ ಅಧ್ಯಕ್ಷ ಎಂ. ರಾಜಾ ಮುತ್ತಪ್ಪ ಅವರು ಜೇನು ನೊಣಗಳಿಗೆ ಉಪಯುಕ್ತವಾಗುವಂತಹ ಸಸಿಗಳನ್ನು ಸಾಂಕೇತಿಕವಾಗಿ ವಿತರಿಸುವ ಮೂಲಕ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತರಬೇತಿ ಕಾರ್ಯಕ್ರಮದಲ್ಲಿ ಬೇಗೂರು ಗ್ರಾಮದ ರಘು ಮತ್ತು ಹಿರಿಯರಾದ ಕೆ.ಎನ್. ಚೆಂಗಪ್ಪ ಹಾಗೂ ಸುಮಾರು 25 ರೈತರು ಜೇನು ಕೃಷಿಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತರಬೇತಿ ಕಾರ್ಯಕ್ರಮನ್ನು ವಿಸ್ತರಣಾ ಶಿಕ್ಷಣ ಘಟಕದ ಸಹಾಯಕ ಪ್ರಾಧ್ಯಾಪಕ ರಾಜಶೇಖರ ಬಾರಕೇರ ಅವರು ಸ್ವ್ವಾಗತಿಸಿ, ಕಾರ್ಯಕ್ರಮ ನಡೆಸಿಕೊಟ್ಟರು.