ಬೆಂಗಳೂರು, ಜೂ.12 : ರಾಜ್ಯಸಭೆ ಚುನಾವಣೆ, ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಪಕ್ಷಕ್ಕೆ ಮುಖಭಂಗವಾಗುವಂತೆ ಮಾಡಿದ 8 ಮಂದಿ ಜೆಡಿಎಸ್ ಬಂಡಾಯ ಶಾಸಕರ ವಿರುದ್ಧ ಶಿಸ್ತು ಕ್ರಮವಾಗಿ ಪಕ್ಷದಿಂದ ಅಮಾನತು ಮಾಡುವ ನಿರ್ಣಯ ಕೈಗೊಳ್ಳಲಾಗಿದೆ. ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಪಕ್ಷದ ಎಲ್ಲ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಜೆಡಿಎಸ್‍ನ ಐವರು ಬಂಡಾಯಗಾರರ ಜತೆ ಇನ್ನೂ ಮೂವರು ಸೇರಿ ಒಟ್ಟು ಎಂಟು ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದು, ವಿಧಾನಪರಿಷತ್ ಚುನಾವಣೆ ಬೆನ್ನಲ್ಲೇ ಮತ್ತೊಂದು ದೊಡ್ಡ ಮುಖಭಂಗ ಅನುಭವಿಸುವಂತಾಗಿತ್ತು. ಅಡ್ಡಮತದಾನದಿಂದ ಗೆಲ್ಲುವ ಸಾಧ್ಯತೆಯಿದ್ದ ಜೆಡಿಎಸ್ ಅಭ್ಯರ್ಥಿ ಫಾರೂಕ್ ಅವರು ಸೋಲನ್ನಪ್ಪಿದ್ದರು. ಜಮೀರ್ ಅಹಮದ್, ಇಕ್ಬಾಲ್ ಅನ್ಸಾರಿ, ಚೆಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಅಖಂಡ ಶ್ರೀನಿವಾಸಮೂರ್ತಿ, ಗೋಪಾಲಯ್ಯ, ಭೀಮಾ ನಾಯ್ಕ ಸೇರಿ ಎಂಟು ಶಾಸಕರು ಅಮಾನತಾಗಿದ್ದಾರೆ. ತಾವು ಪಕ್ಷದ ಸೂಚನೆಗೆ ಧಿಕ್ಕರಿಸಿ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸುತ್ತಿದ್ದೇವೆ. ಏನು ಬೇಕಾದರೂ ಮಾಡಿಕೊಳ್ಳಿ ಎಂಬ ಸವಾಲನ್ನು ಬಂಡಾಯ ಶಾಸಕರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ಎಸೆದಿದ್ದರು. ಇದೇ ತಿಂಗಳ 12ರಂದು ಈ ದೇವೇಗೌಡ ಎಂದರೆ ಏನೆಂದು ತೋರಿಸುತ್ತೇನೆ ಎಂದು ಕಳೆದ ವಾರ ಗೌಡರು ಗುಡುಗಿದ್ದರು. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಅವರ ಗೈರು ಇಂದಿನ ಸಭೆಯಲ್ಲಿ ಎದ್ದು ಕಾಣುತ್ತಿತ್ತು. ಅವರು ಭಾನುವಾರ ಬೆಳಗ್ಗೆ ಪುತ್ರ ನಿಖೀಲ್ ಅವರ ಜಾಗ್ವಾರ್ ಚಿತ್ರದ ತಂಡದೊಂದಿಗೆ ವಿದೇಶಕ್ಕೆ ಚಿತ್ರೀಕರಣಕ್ಕೆ ತೆರಳಿರುವದಾಗಿ ಪಕ್ಷದ ಮೂಲಗಳು ತಿಳಿಸಿವೆ.