ಮಡಿಕೇರಿ, ಅ. 22: ಜಾತ್ಯತೀತ ಜನತಾದಳ ಪಕ್ಷದ ಕೊಡಗು ಜಿಲ್ಲಾ ಅಧ್ಯಕ್ಷರಾಗಿ ವೀರಾಜಪೇಟೆಯ ವಕೀಲ ಮೇರಿಯಂಡ ಸಂಕೇತ್ ಪೂವಯ್ಯ ಅವರು ಆಯ್ಕೆಯಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಸಂಕೇತ್ ಅವರನ್ನು ಆಯ್ಕೆ ಮಾಡಿದ್ದು, ಬೆಂಗಳೂರಿನ ಪಕ್ಷದ ಕಚೇರಿಯಲ್ಲಿಂದು ಕುಮಾರಸ್ವಾಮಿ ಅವರು ಆದೇಶದ ಪ್ರತಿಯನ್ನು ಸಂಕೇತ್ ಅವರಿಗೆ ಹಸ್ತಾಂತರಿಸಿದರು.
ಸಂಕೇತ್ ಅವರು ಇದುವರೆಗೆ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಪಕ್ಷ ಸಂಘಟಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದನ್ನು ಪರಿಗಣಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮಡಿಕೇರಿ ಕ್ಷೇತ್ರದಲ್ಲಿ ಅಲ್ಪ ಮತಗಳಿಂದ ಸೋತಿದ್ದು, 2018ರ ಚುನಾವಣೆ ವೇಳೆ ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸಲಾಗುವದು. ಮುಂದಿನ ಚುನಾವಣೆಯಲ್ಲಿ ರೈತರ, ಜನಪರವಾದ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ಕೊಡಗಿನಲ್ಲೂ ಜೆಡಿಎಸ್ ಅಭ್ಯರ್ಥಿಗಳು ಮೇಲುಗೈ ಸಾಧಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಜೆಡಿಎಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡುವದಾಗಿ ಸಂಕೇತ್ ‘ಶಕ್ತಿ’ಗೆ ತಿಳಿಸಿದ್ದಾರೆ.