ಗೋಣಿಕೊಪ್ಪಲು, ಜು. 21: ವೀರಾಜಪೇಟೆ ತಾಲೂಕು ಜೆಡಿಎಸ್ ಪಕ್ಷ ಒಳಗೊಂಡಂತೆ, ಜಿಲ್ಲಾ ಜಾತ್ಯತೀತ ಜನತಾದಳದಲ್ಲಿಯೂ ಭಿನ್ನಮತ ಮೂಡಿದ್ದು, ಕೂಡಲೇ ಜಿಲ್ಲಾ ಮಟ್ಟದ ಜೆಡಿಎಸ್ ಸಮಾವೇಶ ಕರೆಯಲು ವೀರಾಜಪೇಟೆ ತಾಲೂಕಿನ ಜೆಡಿಎಸ್ ಪ್ರಮುಖರು ಒತ್ತಾಯಿಸಿದ್ದಾರೆ.

ಗೋಣಿಕೊಪ್ಪಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಜೆಡಿಎಸ್‍ನ ಪ್ರಮುಖರಾದ ವಕೀಲ, ನೋಟರಿ ಮಚ್ಚಾಮಾಡ ಟಿ. ಕಾರ್ಯಪ್ಪ, ಪಿ.ಎಸ್. ಮುತ್ತ, ಮಾಜಿ ತಾ.ಪಂ. ಸದಸ್ಯ ಕೋಳೇರ ದಯಾ ಚಂಗಪ್ಪ, ತೀತಿರ ಮಂದಣ್ಣ, ಮಚ್ಚಾಮಾಡ ಮಾಚಯ್ಯ ಹಾಗೂ ಎಂ.ಸಿ. ದೇವಯ್ಯ ಅವರುಗಳು ಜಿಲ್ಲೆಯಲ್ಲಿ ವಿ.ಪಿ. ಶಶಿಧರ್ ಅವರಿಂದ ತೆರವಾದ ಸ್ಥಾನದಲ್ಲಿ ಸೋಮವಾರಪೇಟೆ ತಾಲೂಕಿನ ಭರತ್ ಅವರನ್ನು ರಾಜ್ಯ ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಅವರು ಆಯ್ಕೆ ಮಾಡಿದ್ದರು. ಆದರೆ, ಜಿಲ್ಲಾಧ್ಯಕ್ಷರಿಗೇ ಮಾಹಿತಿ ಇಲ್ಲದಂತೆ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಪಕ್ಷದ ಹಿರಿಯರು, ಕಾರ್ಯಕರ್ತರು, ಪ್ರಮುಖರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಭಿನ್ನಮತ, ಸಂಶಯ ಶಮನಕ್ಕಾಗಿ ಜಿಲ್ಲಾ ಮಟ್ಟದ ಸಮಾವೇಶ ಕರೆಯುವಂತೆ ಒತ್ತಾಯಿಸಿದ್ದಾರೆ. ಇತ್ತೀಚೆಗೆ ವೀರಾಜಪೇಟೆ ತಾಲೂಕಿನ ಮೂವರು ವ್ಯಕ್ತಿಗಳು ಪಕ್ಷವನ್ನು ನಿಯಂತ್ರಿಸಲು ಹೊರಟಿದ್ದು, ಜಿಲ್ಲಾಧ್ಯಕ್ಷರ ಗಮನಕ್ಕೆ ಬಾರದಂತೆ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಧ್ಯಕ್ಷರನ್ನು ನೇಮಕ ಮಾಡಿರುವದು ಸರಿಯಲ್ಲ. ಇದರಿಂದಾಗಿ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಳ್ಳಲು ಕಾರಣವಾಗಿದೆ.

ಕೆಲವರು ಪಕ್ಷದ ಹೆಸರನ್ನು ಪ್ರಚಾರಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿದ್ದು, ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ಕೊಡಗಿನ ಜಿಲ್ಲಾ ಮಟ್ಟದ ಜೆಡಿಎಸ್ ನಾಯಕರ ತೀರ್ಮಾನ ಪಡೆಯದೆ ಯಾವದೇ ಪದಾಧಿಕಾರಿಗಳ ಆಯ್ಕೆ ಸಿಂಧುವಾಗುವದಿಲ್ಲ. ಈ ನಿಟ್ಟಿನಲ್ಲಿ ಪಕ್ಷದ ಬಲವರ್ಧನೆಗೆ ಮೂರು ತಾಲೂಕಿನಲ್ಲಿಯೂ ನೂತನ, ಉತ್ಸಾಹಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ನಿಯೋಗ ತೆರಳಿ ಮಾತುಕತೆ ನಡೆಸಲಾಗುವದು ಎಂದು ಎಂ.ಟಿ. ಕಾರ್ಯಪ್ಪ ತಿಳಿಸಿದ್ದಾರೆ.

ಜಿಲ್ಲಾಧ್ಯಕ್ಷ ಭರತ್ ಅಭಿಪ್ರಾಯ

ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗೂ ತಾವು ನಿಕಟ ಸಂಪರ್ಕದಲ್ಲಿದ್ದು, ಮೊದಲಿಗೆ ಸೋಮವಾರಪೇಟೆ ತಾಲೂಕು ಜೆಡಿಎಸ್ ಸಭೆ ಏರ್ಪಡಿಸಲಾಗುವದು. ನಂತರ ವೀರಾಜಪೇಟೆ ಹಾಗೂ ಮಡಿಕೇರಿ ತಾಲೂಕು ಮಟ್ಟದ ಜೆಡಿಎಸ್ ಸಭೆ ಕರೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವದು. ಇತ್ತೀಚೆಗೆ ವೀರಾಜಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷರೂ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಿರುವ ವಿಚಾರ ತನಗೆ ತಿಳಿಯದು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಭರತ್ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.