ವೀರಾಜಪೇಟೆ, ಡಿ. 11: ಮುಂದಿನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಾತ್ಯತೀತ ಜನತಾದಳ ಪಕ್ಷವನ್ನು ಎಲ್ಲಾ ರೀತಿಯಿಂದ ಬಲಿಷ್ಠಗೊಳಿಸಲು ಪಕ್ಷದ ಜಿಲ್ಲಾ ಹಾಗೂ ತಾಲೂಕು ಸಮಿತಿ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕತೆ ಹಾಗೂ ಮುಕ್ತವಾಗಿ ದುಡಿಯಬೇಕು ಎಂದು ಪಕ್ಷದ ತಾಲೂಕು ಸಮಿತಿ ಅಧ್ಯಕ್ಷ ಮನೆಯಪಂಡ ಬೆಳ್ಳಿಯಪ್ಪ ಹೇಳಿದರು.

ಇಲ್ಲಿನ ಡಿ.ಎಚ್.ಎಸ್. ಕಟ್ಟಡದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಕ್ಷದ ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬಲಿಷ್ಠ ಸಂಘಟನೆಯತ್ತ ಸಾಗಬೇಕಾಗಿದೆ. ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳು ಈ ಬಾರಿ ಜೆಡಿಎಸ್ ಪಾಲಾಗಲಿದೆ ಎಂದರು.

ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ ಕುರಿತಂತೆ ರೂಪುರೇಷೆ ಗಳನ್ನು ತಯಾರಿಸಿ ಮತದಾರರ ಮುಂದೆ ಹೋಗಬೇಕು. ಪಕ್ಷದ ಮುಖಂಡರು, ಕಾರ್ಯಕರ್ತರ ಸಲಹೆ ಸೂಚನೆಗಳನ್ನು ಪಡೆಯಬೇಕು. ವೀರಾಜಪೇಟೆ ಕ್ಷೇತ್ರದಲ್ಲಿ ಪಕ್ಷ ಜನಮನ್ನಣೆಗೆ ಪಾತ್ರವಾಗುವಲ್ಲಿ ಯಶಸ್ಸಿನ ಹೆಜ್ಜೆ ಇಟ್ಟಿದೆ. ಮತದಾರರ ಮಧ್ಯೆ ಪಕ್ಷಕ್ಕೆ ಉತ್ತಮ ಅಭಿಪ್ರಾಯಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಜನರ ಆ ಭಾವನೆಗಳನ್ನು ಮತವನ್ನಾಗಿ ಜವಾಬ್ದಾರಿ ಕೆಲಸವಾಗಬೇಕಾಗಿದೆ ಎಂದರು. ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಸಮಿತಿ ಅಧ್ಯಕ್ಷ ಮನ್ಸೂರ್ ಆಲಿ ಮಾತನಾಡಿ ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರಿಗೆ ರಾಷ್ಟ್ರೀಯ ಪಕ್ಷಗಳಲ್ಲಿ ಸುರಕ್ಷತೆಯ ಕೊರತೆ ಇರುವದರಿಂದ ಅಲ್ಪ ಸಂಖ್ಯಾತರು ಪ್ರಾದೇಶಿಕ ಪಕ್ಷ ಜೆಡಿಎಸ್ ನತ್ತ ಒಲವು ತೋರುತ್ತಿ ದ್ದಾರೆ. ಪಕ್ಷದ ಸಂಘಟನೆ, ಬೆಳವಣಿಗೆಗೆ ಇದೊಂದು ಮೈಲಿಗಲ್ಲು ಎಂದು ಹೇಳಿದರು.

ಜಿಲ್ಲಾ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್ ಮಾತನಾಡಿ ರಾಜ್ಯದಲ್ಲಿ ಪಕ್ಷದ 20 ತಿಂಗಳ ಆಡಳಿತದಲ್ಲಿ ಕಂಡ ಯಶಸ್ಸಿನ ಹಾದಿಯ ಅರಿವನ್ನು ಮತದಾರರಿಗೆ ಮೂಡಿಸಬೇಕಾಗಿದೆ ಎಂದು ಹೇಳಿದರು.

ಪಕ್ಷದ ಹಿರಿಯ ಮುಖಂಡ ತೀತೀರ ಮಂದಣ್ಣ ಮಾತನಾಡಿ ಈಗಾಗಲೇ ರಚಿಸಿರುವ ಮತಗಟ್ಟೆ ಸಮಿತಿಯ ಕಾರ್ಯವನ್ನು ಮುಂದುವರೆಸುವಂತೆ ಸಲಹೆ ನೀಡಿದರು. ಸಭೆಯನ್ನು ಉದ್ದೇಶಿಸಿ ಎಸ್.ಹೆಚ್. ಮತೀನ್, ಗಫೂರ್, ಪಾರೆ ಮಜಲು ಕುಸುಮಾ ಕಾರ್ಯಪ್ಪ ಮಾತನಾಡಿದರು.

ಸಭೆಯಲ್ಲಿ ಪಕ್ಷದ ಪ್ರಮುಖರಾದ ಸಿ.ಎ. ನಾಸಿರ್, ಎಂ.ಎ. ಅಶ್ರಫ್ ಆಲಿ, ಕೆ.ಟಿ. ಅಕ್ತರ್, ಮನ್ಸೂರ್ ಅಹಮ್ಮದ್, ದೇವರಾಜ್, ಎಂ.ಎ. ಫಾಹಿಮ್ ಅಹಮ್ಮದ್, ಇಬ್ರಾಹಿಂ, ಎಂ.ಜಿ. ಆಯಾಜ್, ವಸಂತ, ರೆನ್ನಿ, ಖಾಸಿಂ, ಎಚ್.ಕೆ. ಗೋಪಾಲ್, ಪ್ರಥ್ಯು ಮತ್ತಿತರರು ಹಾಜರಿದ್ದರು.