ಮೂರ್ನಾಡು, ಅ. 10 : ವಿದ್ಯಾರ್ಥಿ ಜೀವನದಲ್ಲಿ ಸ್ಪಷ್ಟವಾದ ಗುರಿ ಇರಿಸಿಕೊಂಡಾಗ ಮಾತ್ರ ಮುಂದೆ ಜೀವನದಲ್ಲಿ ಉತ್ತಮ ಸಾಧನೆಗೈಯಲು ಸಾಧ್ಯ ಎಂದು ಮಡಿಕೇರಿ ತಾಲೂಕು ಪಂಚಾಯಿತಿ ಸಾಮಾಜಿಕ ಲೆಕ್ಕ ಪರಿಶೋಧಕ ನಾಳಿಯಂಡ ಪ್ರೀತಂ ಪೊನ್ನಪ್ಪ ಹೇಳಿದರು.

ಮೂರ್ನಾಡು ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಕುಂಬಳದಾಳು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ವಿಶೇಷ ವಾರ್ಷಿಕ ಶಿಬಿರದಲ್ಲಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ಮಾನವೀಯ ಗುಣ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು.

ಕಷ್ಟದ ಹಾದಿಯಲ್ಲಿ ಸಾಗಲು ಯಾರಿಗೂ ಮನಸ್ಸಿರುವದಿಲ್ಲ, ಎಲ್ಲರೂ ಸುಲಭದ ಹಾದಿ ಬಯಸುತ್ತಾರೆ. ಸುಲಭದ ಹಾದಿ ನಕರಾತ್ಮಕ ಚಿಂತನೆಗೆ ಎಡೆ ಮಾಡಿಕೊಡುತ್ತದೆ. ಗುರಿಯೊಂದಿಗೆ ಕಠಿಣ ಪರಿಶ್ರಮ ಅಗತ್ಯ. ನಿರಂತರ ಪರಿಶ್ರಮದಿಂದ ಒಬ್ಬ ಉತ್ತಮ ಮೌಲ್ಯಗಳನ್ನೊಳಗೊಂಡ ನಾಯಕನಾಗಿ ಪರಿವರ್ತನೆಗೊಳ್ಳಲು ಸಾಧ್ಯ ಎಂದು ತಿಳಿಸಿದರು.

ಮೂರ್ನಾಡು ವಿದ್ಯಾಸಂಸ್ಥೆ ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿವರ್ತನೆಯನ್ನು ಕಂಡುಕೊಳ್ಳಲು ಎನ್‍ಎಸ್‍ಎಸ್ ಶಿಬಿರಗಳು ಸಹಕಾರಿಯಾಗುತ್ತದೆ. ಇಂತಹ ವೇದಿಕೆಗಳನ್ನು ವಿದ್ಯಾರ್ಥಿ ಗಳು ಸದುಪಯೋಗಪಡಿಸಿಕೊಳ್ಳು ವಂತೆ ಕರೆ ನೀಡಿದರು.

ವೇದಿಕೆಯಲ್ಲಿ ನಿವೃತ್ತ ಎ.ಎಸ್.ಐ ಕಡ್ಲೇರ ಮಂದಪ್ಪ, ಸ್ಥಳ ದಾನಿ ಕರ್ಣಯ್ಯನ ಸುರೇಶ್, ಶಾಲಾ ಎಸ್‍ಡಿಎಂಸಿ ಉಪಾಧ್ಯಕ್ಷೆ ಎಂ.ವಿ. ಯಮುನಾ, ಶಿಬಿರಾಧಿಕಾರಿ ಯು.ಸಿ. ಮಾಲತಿ ಉಪಸ್ಥಿತರಿದ್ದರು.