ಭಾಗಮಂಡಲ, ಸೆ. 26: ನೀರು ನಮ್ಮ ಜೀವ ಜಲ, ನೀರಿನ ಜತೆಯಲ್ಲೇ ಈ ಜಗತ್ತು ಸೃಷ್ಟಿಯಾಗಿದೆ ಎಂಬದು ವಿಜ್ಞಾನ ಹಾಗೂ ಧರ್ಮದಲ್ಲೂ ನಾವು ಕಾಣುತ್ತೇವೆ ಎಂದು ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಾಥನಂದ ಸ್ವಾಮೀಜಿ ಹೇಳಿದರು. ತಲಕಾವೇರಿಯಲ್ಲಿಂದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ದೇಶದ ಅಭಿವೃದ್ಧಿಯಲ್ಲಿ ನದಿಗಳ ಪಾತ್ರವೂ ಮಹತ್ವದ್ದಾಗಿದೆ. ಪ್ರತಿವರ್ಷದಂತೆ ಈ ಬಾರಿ ಕೂಡ ತಲಕಾವೇರಿಗೆ ಆಗಮಿಸಿ, ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಗಿದೆ. ನಾಡಿನ ಜನತೆಗೆ ಸುಭೀಕ್ಷೆಯಾಗಲಿ ಎಂಬ ಉದ್ದೇಶದೊಂದಿಗೆ ಪೂಜೆ ಸಲ್ಲಿಸಲಾಗಿದ್ದು, ಪ್ರಸ್ತುತ ಸಕಾಲದಲ್ಲಿ ಮಳೆಯಾಗುತ್ತಿಲ್ಲ. ಅದಕ್ಕೆ ಕಾರಣ ಎಲ್ಲರಿಗೂ ತಿಳಿದಿದೆ. ಪ್ರಾಕೃತಿಕ ಅಸಮತೋಲನದಿಂದ ಮಳೆಯಾಗುತ್ತಿಲ್ಲ. ಸಕಾಲದಲ್ಲಿ ಮಳೆಯಾಗದಿದ್ದರೆ ಕಷ್ಟ- ನಷ್ಟ ಸಂಭವಿಸುತ್ತವೆ. ಈ ನಿಟ್ಟಿನಲ್ಲಿ ಸಕಾಲದಲ್ಲಿ ಮಳೆಯಾಗಲೆಂದು ಪ್ರಾರ್ಥಿಸಲಾಗಿದೆ ಎಂದು ಹೇಳಿದರು. ಎಲ್ಲಾ ಮಠಾಧಿಪತಿಗಳು, ಭಕ್ತರು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪೂಜೆ ನಡೆಸಲಾಗಿದೆ ಎಂದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಎಲ್ಲಾ ಕಡೆಗಳಲ್ಲಿ ಉತ್ತಮ ಮಳೆಯಾಗಿ ರೈತರ ಸಂಕಷ್ಟ ನಿವಾರಣೆಯಾಗಲಿ ಎಂಬ ಉದ್ದೇಶದೊಂದಿಗೆ ಪೂಜೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಮಳೆ ಆಗಬೇಕು. ಮಳೆಯಿಂದ ತೊಂದರೆಯಾದರೂ ಅಡ್ಡಿಯಿಲ್ಲ. ಆದರೆ ಜನತೆಗೆ, ನಾಡಿಗೆ ಸುಭೀಕ್ಷೆಯಾಗಬೇಕೆಂದು ಹೇಳಿದರು. ಈ ಸಂದರ್ಭ ಕನಕಪುರದ ವಿದ್ಯಾಧರನಂದ ಸ್ವಾಮೀಜಿ, ತುಮಕೂರುವಿನ ಸಿರಿಘಟ್ಟ ಚಂದ್ರಶೇಖರ ಸ್ವಾಮೀಜಿ, ಮಂಗಳೂರಿನ ಧರ್ಮಪಾಲನ ನಂದ ಸ್ವಾಮೀಜಿ, ಶೃಂಗೇರಿ ಮಠದ ಗುಣನಾಥನಂದ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ ಸೇರಿದಂತೆ ಇತರ ಸ್ವಾಮಿಗಳು, ಭಾಗಮಂಡಲ ಗೌಡ ಸಮಾಜದ ಅಧ್ಯಕ್ಷ ಕುದುಪಜೆ ಪಳಂಗಪ್ಪ, ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ದಂಬೆಕೋಡಿ ಆನಂದ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಉಪಾಧ್ಯಕ್ಷ ಸೂರ್ತಲೆ ಸೋಮಣ್ಣ, ಆನಂದ್ ಕರಂದ್ಲಾಜೆ, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್, ಪೊನ್ನಚನ ಮೋಹನ್, ಚಿಲ್ಲನ ಗಣೇಶ್, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಇನ್ನಿತರ ಪ್ರಮುಖರು ಇದ್ದರು.