ಮಡಿಕೇರಿ, ಆ. 14: ಸೆಸ್ಕಾಂನ ಲೈನ್‍ಮ್ಯಾನ್‍ವೊಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಲೈನ್‍ಮ್ಯಾನ್ ಹೆಚ್.ಟಿ. ನಾಗೇಂದ್ರ ಎಂಬವರು ತಾ. 27.12.2010 ರಂದು ಸಹೋದ್ಯೋಗಿ ಜೆ.ಜೆ. ಮಂಜುನಾಥ್ ಎಂಬವ ರೊಂದಿಗೆ ದೊಡ್ಡಮಳ್ತೆ ಗ್ರಾಮದ ವೀರರಾಜೇಂದ್ರ ಎಂಬವರ ಮನೆಗೆ ತೆರಳಿ ಮನೆಯಲಿದ್ದ ವೀರರಾಜೇಂದ್ರ ಅವರ ಸಹೋದರ ಚಂದ್ರಶೇಖರ್ ಅವರಿಗೆ ವಿದ್ಯುತ್ ಕಡಿತಗೊಳಿಸುವ ಬಗ್ಗೆ ತಿಳಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಚಂದ್ರಶೇಖರ್ ನಾಗೇಂದ್ರ ಅವರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದ. ಈ ಹಿನ್ನೆಲೆ ಚಂದ್ರಶೇಖರ್‍ನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಆರ್‍ಜಿಎಂಎಂ ಮಹಾಸ್ವಾಮೀಜಿಯವರು ಶಿಕ್ಷೆ ವಿಧಿಸಿದ್ದಾರೆ.

ಹಲ್ಲೆ ಮಾಡಿ ಗಾಯಗೊಳಿಸಿದ ಅಪರಾಧಕ್ಕಾಗಿ ಒಂದು ವರ್ಷ ಸಾದಾ ಸಜೆ ಮತ್ತು ಒಂದು ಸಾವಿರ ದಂಡ, ಸಾರ್ವಜನಿಕ ಕರ್ತವ್ಯದಲ್ಲಿರುವ ನೌಕರನಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅಪರಾಧಕ್ಕೆ 4 ವರ್ಷಗಳ ಸಾದಾ ಸಜೆ ಮತ್ತು ರೂ. 10 ಸಾವಿರ ದಂಡ, ಜೀವ ಬೆದರಿಕೆ ಒಡ್ಡಿದ ಅಪರಾಧಕ್ಕಾಗಿ 4 ವರ್ಷಗಳ ಸಾದಾ ಸಜೆ ಮತ್ತು ರೂ. 3 ಸಾವಿರ ದಂಡವನ್ನು ವಿಧಿಸಿ ತೀರ್ಪು ನೀಡಲಾಗಿದೆ. ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆಯೂ, ವಸೂಲಾತಿಯಾಗುವ ಒಟ್ಟು ದಂಡದ ಹಣ ರೂ. 14 ಸಾವಿರದಲ್ಲಿ ರೂ. 13 ಸಾವಿರವನ್ನು ಗಾಯಾಳು ನಾಗೇಂದ್ರ ಅವರಿಗೆ ಪರಿಹಾರವಾಗಿ ಪಾವತಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಸರಕಾರದ ಪರ ಸರಕಾರಿ ಅಭಿಯೋಜಕರಾದ ಎ.ಪಿ. ಫಿರೋಜ್ ಖಾನ್ ವಾದಿಸಿದರು.