ಸೋಮವಾರಪೇಟೆ, ಡಿ.4: ಕಳೆದ ನವೆಂಬರ್ 13 ಮತ್ತು 14ರಂದು ತಾಲೂಕಿನ ಐಗೂರು ಗ್ರಾಮದಲ್ಲಿ ನಡೆದ ಎರಡು ದುಷ್ಕøತ್ಯಗಳ ನಂತರ ಐಗೂರಿನಲ್ಲಿ ಪೊಲೀಸ್ ಕಣ್ಗಾವಲು ಪಹರೆಯಲ್ಲಿದ್ದು, ನಾಕಾಬಂಧಿಗಳೊಂದಿಗೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಎರಡು ಕೋಮುಗಳ ನಡುವೆ ಶಾಂತಿ ಕದಡುವಂತಹ ಘಟನೆಗಳು ನಡೆದು 20 ದಿನಗಳು ಕಳೆದರೂ ಪೊಲೀಸ್ ಇಲಾಖೆ ಆರೋಪಿಗಳ ಬಂಧನ ಮಾಡದೇ ಇರುವದು, ಜಿಲ್ಲೆಯಾದ್ಯಂತ ಪ್ರತಿಭಟನೆ, ವಿರೋಧಿ ಹೇಳಿಕೆಗಳಿಗೆ ವೇದಿಕೆ ಒದಗಿಸುತ್ತಲೇ ಇದೆ. ಸಂಘಟನೆಗಳು ಪೊಲೀಸ್ ಇಲಾಖೆಗೆ ನೀಡಿದ ಗಡುವು ಮುಕ್ತಾಯಗೊಂಡಿದ್ದು, ಪೊಲೀಸ ರಂತೂ ಹಗಲೂ ರಾತ್ರಿಯೆನ್ನದೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.ದುಷ್ಕರ್ಮಿಗಳ ಖಂಡನೀಯ ಕೃತ್ಯಕ್ಕೆ ಒಳಗಾದ ಐಗೂರಿನ ಮಸೀದಿ ಬಳಿ ಮೀಸಲು ಪಡೆಯ ಪೊಲೀಸರು ಮೊಕ್ಕಾಂ ಹೂಡಿದ್ದರೆ, ಕಿಡಿಗೇಡಿಗಳ ದುಷ್ಕøತ್ಯಕ್ಕೆ ಒಳಗಾದ ಪದ್ಮನಾಭ್ ಅವರ ಮನೆಯ ಮುಂಭಾಗ ಪೊಲೀಸರು ನಾಕಾಬಂಧಿ ಹಾಕಿದ್ದಾರೆ. ಐಗೂರಿನಲ್ಲಿ ದಿನಂಪ್ರತಿ 7 ಮಂದಿ ಪೊಲೀಸ್ ಸಿಬ್ಬಂದಿಗಳು ಹಾಗೂ ಓರ್ವ ಗೃಹ ರಕ್ಷಕ ದಳದವರು ಪಹರೆಯಲ್ಲಿದ್ದಾರೆ.
ಹೆಂಚು ತೆಗೆದು ಐಗೂರಿನ ಮಸೀದಿಯೊಳಗೆ ನುಗ್ಗಿರುವ ಕಿಡಿಗೇಡಿಗಳು ಮುಸ್ಲಿಂ ಸಮುದಾಯದ ಪವಿತ್ರ ಗ್ರಂಥ ಕುರಾನ್ಗೆ ಬೆಂಕಿ ಹಚ್ಚಿದ್ದ ಘಟನೆ ಕಳೆದ ನವೆಂಬರ್ 13ರಂದು ಬೆಳಕಿಗೆ ಬಂದಿತ್ತು. ಈ ಸುದ್ದಿ ಜಿಲ್ಲೆಯಾದ್ಯಂತ ಹರಡಿ ಎಲ್ಲೆಡೆ ಮುಸ್ಲಿಂ ಸಮುದಾಯದಿಂದ ಖಂಡನೆ, ಆಕ್ರೋಶ ವ್ಯಕ್ತವಾಗಿತ್ತು. ಘಟನೆ ಬೆಳಕಿಗೆ ಬಂದ ರಾತ್ರಿಯೇ ಐಗೂರಿನ ಆರ್ಎಸ್ಎಸ್ ಮುಖಂಡ, ವಕೀಲ ಕೆ.ಎಸ್. ಪದ್ಮನಾಭ್ ಅವರ ವ್ಯಾಗನಾರ್ ಕಾರಿನ ಹಿಂಬದಿ ಗಾಜು ಒಡೆದು ಬೆಂಕಿ ಹಚ್ಚಲಾಗಿತ್ತು. ಎರಡೂ ಘಟನೆಗಳಿಂದ ಐಗೂರು ಗ್ರಾಮ ಜಿಲ್ಲೆಯಾದ್ಯಂತ ಸುದ್ದಿಯಾಗಿ ಎರಡೂ ಘಟನೆಗಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದರೂ ಪೊಲೀಸ್ ಇಲಾಖೆ ಇದುವರೆಗೂ ಆರೋಪಿಗಳ ಬಂಧನ ಮಾಡಿಲ್ಲ.
ಪೊಲೀಸ್ ತನಿಖಾ ತಂಡ ಎಲ್ಲಾ ಆಯಾಮಗಳಲ್ಲೂ ವ್ಯಾಪಕ ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದೆ. ಎರಡೂ ಪ್ರಕರಣಗಳಲ್ಲಿ ಭಾಗಿಯಾದವರನ್ನು ಒಮ್ಮೆಗೆ ಬಂಧಿಸುವ ಅನಿವಾರ್ಯತೆಯೂ ಇಲಾಖೆಯ ಮುಂದಿದೆ. ಕೇವಲ ಒಂದು ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದೇ ಆದಲ್ಲಿ ಮತ್ತೊಂದು
(ಮೊದಲ ಪುಟದಿಂದ) ಘಟನೆಯನ್ನು ಇಟ್ಟುಕೊಂಡು ಪ್ರತಿಭಟಿಸುವದನ್ನೂ ಅಲ್ಲಗೆಳೆಯುವಂತಿಲ್ಲ. ಈ ಹಿನ್ನೆಲೆ ಎರಡೂ ಪ್ರಕರಣಗಳ ಆರೋಪಿಗಳನ್ನು ಏಕಕಾಲದಲ್ಲಿ ಬಂಧಿಸುವ ಸಂದಿಗ್ಧತೆಗೆ ಇಲಾಖೆ ಸಿಲುಕಿದೆ. ಕುರಾನ್ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳ ಬಂಧನಕ್ಕೆ ಈಗಾಗಲೇ ಮುಸ್ಲಿಂ ಸಮುದಾಯದಿಂದ ವ್ಯಾಪಕ ಒತ್ತಡ, ಆಕ್ರೋಶ ಹೊರಹೊಮ್ಮಿದೆ. ಜಿಲ್ಲೆಯಾದ್ಯಂತ ಪ್ರತಿಭಟನೆಗಳೂ ನಡೆದಿವೆ. ಇದರೊಂದಿಗೆ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದ ಬಗ್ಗೆಯೂ ವ್ಯಾಪಕ ಖಂಡನೆ ವ್ಯಕ್ತಗೊಳ್ಳುತ್ತಿದ್ದು, ಹಿಂದೂಪರ ಸಂಘಟನೆಗಳಿಂದಲೂ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಆರೋಪಿಗಳ ಪತ್ತೆಗೆ ತನಿಖಾ ತಂಡ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರೆಸಿದ್ದು, ತನಿಖೆಯ ವಿವರಗಳನ್ನು ಈಗಲೇ ಬಹಿರಂಗಪಡಿಸುವದಿಲ್ಲ ಎಂದು ಡಿವೈಎಸ್ಪಿ ಸಂಪತ್ಕುಮಾರ್ ಅವರು ತಿಳಿಸಿದ್ದಾರೆ.
ಘಟನೆಗಳ ಸುತ್ತಾ ಇರುವದೇನು?
ಅಸಲಿಗೆ ಐಗೂರು ಮಸೀದಿಯೊಳಗೆ ನುಗ್ಗಿ ಬೆಂಕಿ ಹಚ್ಚಿರುವ ಘಟನೆ ಯಾವ ದಿನಾಂಕದಂದು ನಡೆದಿದೆ ಎಂಬದು ನಿಖರವಾಗಿ ತಿಳಿದಿಲ್ಲ ಎನ್ನಲಾಗಿದೆ. ಟಿಪ್ಪು ಜಯಂತಿ ಹಿನ್ನೆಲೆ ಕರೆ ನೀಡಿದ್ದ ಕೊಡಗು ಬಂದ್ಗೆ ಬೆಂಬಲ ನೀಡುವಂತೆ ಐಗೂರು ಬಿಜೆಪಿ ಸ್ಥಾನೀಯ ಸಮಿತಿಯವರು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಹೊಸತೋಟಕ್ಕೆ ತೆರಳಿ ಬಂದ್ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ನ.10ರಂದು ಬಂದ್ ಯಶಸ್ವಿಯಾಗಿತ್ತಲ್ಲದೆ, ಯಾವದೇ ಸಣ್ಣಪುಟ್ಟ ಅಹಿತಕರ ಘಟನೆ ನಡೆದಿರಲಿಲ್ಲ. ಇದರಿಂದ ಸ್ಥಳೀಯರು ಸೇರಿದಂತೆ ಪೊಲೀಸರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.
ಇದಾಗಿ ಎರಡು ದಿನ ಕಳೆದಂತೆ ತಾ. 13ರಂದು ಸಂಜೆ ವೇಳೆಗೆ ಐಗೂರು ಪ್ರಾರ್ಥನಾ ಮಂದಿರದ ಹೆಂಚುತೆಗೆದು ಕುರಾನ್ಗೆ ಬೆಂಕಿ ಹಚ್ಚಿರುವದು ಕಂಡುಬಂದಿದೆ. ಟಿಪ್ಪು ಜಯಂತಿಯಂದು ಶಾಂತಿ ನೆಲೆಸಿದ್ದುದನ್ನು ಸಹಿಸದ ದುಷ್ಟಶಕ್ತಿಗಳು ಇಂತಹ ನೀಚ ಕೃತ್ಯಕ್ಕೆ ಕೈಹಾಕಿರಬಹುದು ಎನ್ನಲಾಗಿದೆ. ಹಿಂದೂಪರ ಸಂಘಟನೆಯ ಸ್ಥಳೀಯ ಪ್ರಮುಖರು ತಮ್ಮವರು ಯಾರೂ ಇಂತಹ ಕೃತ್ಯಕ್ಕೆ ಕೈಹಾಕಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರೆ, ಇದೇ ಅರ್ಥದ ಹೇಳಿಕೆಯನ್ನು ಸಂಸದೆ ಶೋಭಾ ನೀಡಿದ್ದಾರೆ.
ಈ ಮಧ್ಯೆ ಪೊಲೀಸ್ ತನಿಖೆ ಚುರುಕುಗೊಂಡಿದ್ದು, ಗ್ರಾಮದ ಯುವಕರ ಚಲನ ವಲನದ ಮೇಲೆ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ದುಷ್ಕøತ್ಯ ಎಸಗಿದ್ದ ಕಿಡಿಗೇಡಿಗಳು ಊರು ಬಿಡುವ ಸೂಚನೆ ಇರುವದರಿಂದ ಆ ಬಗ್ಗೆಯೂ ಕಣ್ಗಾವಲು ಇಟ್ಟಿತ್ತು. ಆದರೆ ಘಟನೆ ನಡೆದ ದಿನದಿಂದಲೂ ಯಾರೂ ಸಹ ಊರು ಬಿಡದೇ ಇರುವದೂ ಸಹ ಪೊಲೀಸರಿಗೆ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ. ಇನ್ನು ಪದ್ಮನಾಭ್ ಅವರ ಕಾರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳ ಬಂಧನವೂ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಈ ಘಟನೆ ನಡೆಯುವ ಕೆಲ ದಿನಗಳ ಹಿಂದೆ ಇಲ್ಲಿನ ನ್ಯಾಯಾಲಯಕ್ಕೆ ಕುಶಾಲನಗರದ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣದ ಆರೋಪಿಗಳನ್ನು ವಿಚಾರಣೆಗೆ ಕರೆತರಲಾಗಿತ್ತು. ಈ ಸಂದರ್ಭ ಆರೋಪಿಗಳು ನ್ಯಾಯಾಲಯದ ಆವರಣದೊಳಗೆ ಮಧ್ಯಾಹ್ನದ ಪ್ರಾರ್ಥನೆ ನಡೆಸುತ್ತಿದ್ದರು. ಇದನ್ನು ವಕೀಲ ಪದ್ಮನಾಭ್ ಸೇರಿದಂತೆ ಇತರ ಕೆಲ ವಕೀಲರು ನ್ಯಾಯಾಧೀಶರೆದುರು ಪ್ರಶ್ನಿಸಿದ್ದರು. ಈ ಬಗ್ಗೆ ನ್ಯಾಯಾಧೀಶರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಘಟನೆಗಳು ನಡೆಯುತ್ತಿದ್ದ ಸಂದರ್ಭ ಇನ್ನೂ ಕೆಲವರು ನ್ಯಾಯಾಲಯದ ಆವರಣದೊಳಗೆ ಇದ್ದರು. ಈ ವಿಚಾರವನ್ನು ಐಗೂರಿನ ಘಟನೆಗಳ ಬಗ್ಗೆ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎನ್ನಲಾಗಿದೆ.
ಇಷ್ಟೆಲ್ಲಾ ಘಟನೆಗಳು ನಡೆದ ಬೆನ್ನಲ್ಲೇ ಡಿ. 1ರಂದು ಹೊಸತೋಟದ ಅಂಗಡಿಯ ಮುಂಭಾಗ ಮುಸ್ಲಿಂ ಹಾಗೂ ಮಲೆಯಾಳಿ ಸಮುದಾಯವನ್ನು ಕೀಳುಮಟ್ಟದ ಪದಗಳಿಂದ ತೆಗಳಿರುವ ಭಿತ್ತಿಗಳು ಕಂಡುಬಂದು, ಇದೇ ಘಟನೆಗೆ ಸಂಬಂಧಿಸಿದಂತೆ ಘರ್ಷಣೆ ಏರ್ಪಟ್ಟು ಈರ್ವರು ಆಸ್ಪತ್ರೆಗೆ ದಾಖಲಾಗಿ ಪರಸ್ಪರ ದೂರು ನೀಡಿರುವ ವಿದ್ಯಮಾನ ನಡೆದಿದೆ.
ಒಟ್ಟಾರೆ ಕೋಮು ಸೂಕ್ಷ್ಮವಾಗಿರುವ ಐಗೂರು ಮತ್ತು ಹೊಸತೋಟದಲ್ಲಿ ಆಗಿಂದಾಗ್ಗೆ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಪರಸ್ಪರ ಸಂಶಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುರಾನ್ ಹಾಗೂ ಕಾರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳೊಂದಿಗೆ ಎರಡು ಸಮುದಾಯಗಳನ್ನು ನಿಂದಿಸಿ ಭಿತ್ತಿಪತ್ರ ಅಂಟಿಸುವ ಮೂಲಕ ಸಮಾಜದಲ್ಲಿ ವರ್ಗಗಳ ನಡುವೆ ‘ಬೆಂಕಿ’ ಹಚ್ಚಲು ಯತ್ನಿಸಿದ ಸಮಾಜಘಾತುಕರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮಕ್ಕೆ ಒಪ್ಪಿಸುವ ಕಾರ್ಯ ಆಗಬೇಕಿದೆ. ಮುಂದಿನ ದಿನಗಳಲ್ಲಿ ಇಂತಹ ದುಷ್ಕøತ್ಯ ಘಟಿಸದಂತೆ ಇಲಾಖೆಯೂ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. - ವಿಜಯ್