ಮಡಿಕೇರಿ, ಸೆ. 13: ಈದುಲ್ ಅಝ್‍ಹಾ ಎಂಬ ಬಕ್ರೀದ್ ಹಬ್ಬವನ್ನು ಜಿಲ್ಲೆಯ ಮುಸ್ಲಿಂ ಬಾಂಧವರು ಸಂಪ್ರದಾಯಕ್ಕನುಗುಣವಾಗಿ ಶ್ರದ್ಧಾಭಕ್ತಿಯೊಂದಿಗೆ ಸಂಭ್ರಮದಿಂದ ಎರಡು ದಿನ ಆಚರಿಸಿದರು. ಜಿಲ್ಲೆಯ ಶಾಫಿ ಮುಸ್ಲಿಮರು ಸೋಮವಾರ ಹಬ್ಬ ಆಚರಿಸಿದರೆ ಹನಫಿ ವಿಭಾಗದವರು ಮಂಗಳವಾರ ಬಕ್ರೀದ್ ಆಚರಿಸಿದರು.ಮಡಿಕೇರಿ ಸೇರಿದಂತೆ ಎಲ್ಲೆಡೆಯ ಮಸೀದಿಗಳಲ್ಲಿ ಹಾಗೂ ಈದ್ಗಾ ಮೈದಾನಗಳಲ್ಲಿ ಹಬ್ಬದ ವಿಶೇಷ ನಮಾಝ್ ನಡೆಯಿತು. ನಗರದ ಬದ್ರಿಯಾ, ಎಂ.ಎಂ. ಹಾಗೂ ಭಟ್ಕಳ್ ಮಸೀದಿಗಳಲ್ಲಿ ನಿನ್ನೆ ನಡೆದ ಹಬ್ಬದ ವಿಶೇಷ ಪ್ರಾರ್ಥನೆಯ ನೇತೃತ್ವವನ್ನು ಕ್ರಮವಾಗಿ ಇಬ್ರಾಹಿಂ ಸಅದಿ, ಹಮೀದ್ ಮದನಿ ಹಾಗೂ ಮುಹಮ್ಮದಲಿ ಲತೀಫ್ ವಹಿಸಿದ್ದರು.

ಇಂದು ಮಡಿಕೇರಿ ಜಾಮಿಯಾ ಮಸೀದಿಯ ಇಮಾಂಮೌಲಾನ ಅಸ್ಲಾಂ ಮಿಸ್ಬಾಹಿ ಅವರ ನೇತೃತ್ವದಲ್ಲಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಹಾಗೂ ಪ್ರವಚನ ನಡೆಯಿತು. ನಗರದ ಮಕ್ಕಾ ಮಸೀದಿಯಲ್ಲಿ ಮೌಲಾನ ಅಬ್ದುಲ್ ಹಕೀಂ ಅವರು ವಿಶೇಷ ಪ್ರಾರ್ಥನೆಗೆ ನೇತೃತ್ವ ವಹಿಸಿದರೆ, ಮದೀನಾ ಮಸೀದಿಯಲ್ಲಿ ಮೌಲಾನ ಅಬ್ದುಲ್ ಕಯ್ಯೂಂ ಹಾಗೂ ಲಷ್ಕರ್ ಮಸೀದಿಯಲ್ಲಿ ಅಬ್ದುಲ್ ಹನ್ನಾನ್ ಇವರುಗಳು ನಮಾಝ್‍ನ ನೇತೃತ್ವ ವಹಿಸಿದರು. ಹಬ್ಬದ ದಿನ ಈದ್ಗಾ ಮೈದಾನಕ್ಕೆ ತೆರಳಿದ ಮುಸ್ಲಿಂ ಬಾಂಧವರು ಅಗಲಿದ ಬಂಧುಗಳ ಆತ್ಮ ಶಾಂತಿಗಾಗಿ ಸಮಾದಿ ಬಳಿ ಪ್ರಾರ್ಥನೆ ನಡೆಸಿದರು.

ಕುರ್ಬಾನಿ ಕೊಡುಗೆ: ನಾಲ್ಕು ಸಾವಿರ ವರ್ಷಗಳ ಹಿಂದೆ ದೈವಭಕ್ತ ಪ್ರವಾದಿ ಇಬ್ರಾಹೀಂ ಅವರು ಭಗವಂತನಿಗೆ ತನ್ನ ಕರುಳ ಕುಡಿಯನ್ನು ಬಲಿ ಅರ್ಪಿಸಲು ಮುಂದಾದುದರ ಕುರುಹಾಗಿ ಅನೇಕ ಮುಸ್ಲಿಮರು ಆಡನ್ನು ಕುಯ್ಯುವ ಮೂಲಕ ಮಾಂಸದಾನದಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಮಡಿಕೇರಿಯ ಏಕೈಕ ಸಲಫಿ ಮಸೀದಿಯಲ್ಲೂ ಅಹ್ಮದಿಯ ಮಸೀದಿಗಳಲ್ಲೂ ಹಬ್ಬದ ವಿಶೇಷ ಪ್ರಾರ್ಥನೆಗಳು ಜರುಗಿದವು. ಎಲ್ಲೆಡೆ ‘ಅಲ್ಲಾಹು ಅಕ್ಬರ್’ ಎಂಬ ದೈವಕೀರ್ತನೆ ಮುಗಿಲು ಮುಟ್ಟಿದವು. ಜನಾಂಗ ಬಾಂಧವರು ತಮ್ಮ ಬಂಧುಮಿತ್ರರ ಮನೆಗಳಿಗೆ ತೆರಳಿ ಪರಸ್ಪರ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರು.

ಕುಶಾಲನಗರ : ಮುಸಲ್ಮಾನರ ಪವಿತ್ರ ಆಚರಣೆಯಾದ ಬಕ್ರಿದ್ ಹಬ್ಬವನ್ನು ಮಂಗಳವಾರ ಕುಶಾಲನಗರದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.