ಮಡಿಕೇರಿ, ಜು.19:ರಾಜ್ಯದಲ್ಲಿ ಅತ್ಯಧಿಕ ಮಳೆಯಾಗುವ ಕೊಡಗು ಜಿಲ್ಲೆಯಲ್ಲಿಯೂ ಅದೇಕೋ ವರುಣ ಮುನಿಸಿಕೊಂಡಿದ್ದಾನೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮೊಡ ಕವಿದ ವಾತಾವರಣವಿದ್ದು, ಮಡಿಕೇರಿ, ಭಾಗಮಂಡಲ, ತಲಕಾವೇರಿ ಸೇರಿದಂತೆ ಪ್ರದೇಶಗಳಲ್ಲಿ ತುಂತುರು ಮಳೆ ಹೊರತು ಪಡಿಸಿದರೆ ಈ ಹಿಂದಿನ ವರ್ಷಗಳಲ್ಲಿ ಕಂಡುಬರುತ್ತಿದ್ದ ಮಳೆ ಅಬ್ಬರ ಮಾಯವಾಗಿದೆ.

ಜಿಲ್ಲೆಯಲ್ಲಿ ಈವರೆಗಿನ ವಾಡಿಕೆ ಮಳೆ 65.74 ಇಂಚು ಗಳಾಗಿದ್ದರೆ ಈ ವರ್ಷ ಇಲ್ಲಿಯವರೆಗೆ ಸುರಿದಿರುವದು 41.93 ಇಂಚು ಮಾತ್ರ. ಜನವರಿಯಿಂದ ಜೂನ್ ವರೆಗೆ ವಾಡಿಕೆ ಮಳೆ 28.80 ಇಂಚು ಗಳಾಗಿದ್ದರೆ, ಈ ವರ್ಷ ಜೂನ್ ಅಂತ್ಯದವರೆಗೆ 26.04 ಇಂಚು ಮಳೆಯಾಗಿದೆ. ಆದರೆ ಜುಲೈ ಮಾಹೆಯಲ್ಲಿ ವಾಡಿಕೆ ಮಳೆ 36.94 ಇಂಚು ಆಗಿದ್ದು, ಈ ವರ್ಷ ಜುಲೈ ಮಾಹೆಯಲ್ಲಿ ಇಂದಿನವರೆಗೆ ಕೇವಲ 15.89 ಇಂಚು ಮಳೆಯಾಗಿದೆ. ಅಂದರೆ ಸುಮಾರು 21.04 ಇಂಚು ಮಳೆ ಕಡಿಮೆಯಾಗಿರುವದು ಮುಂಗಾರು ದುರ್ಬಲವಾಗಿರುವದನ್ನು ಸೂಚಿಸುತ್ತದೆ.

ತಾಲೂಕುವಾರು ಮಳೆ ಪ್ರಮಾಣವನ್ನು ಗಮನಿಸಿದಾಗ ಮಡಿಕೇರಿ ತಾಲೂಕಿನಲ್ಲಿ ಕಳೆದ ವರ್ಷ ಜನವರಿಯಿಂದ ಜುಲೈ, 19 ರವರೆಗೆ 78.21 ಇಂಚು ಮಳೆಯಾಗಿತ್ತು, ಈ ವರ್ಷ ಜುಲೈ, 19 ರವರೆಗೆ 62.24 ಇಂಚು ಮಳೆಯಾಗಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 15.96 ಇಂಚು ಮಳೆ ಕಡಿಮೆಯಾಗಿದೆ.

ವೀರಾಜಪೇಟೆ ತಾಲೂಕಿನಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 47.45 ಇಂಚು ಮಳೆಯಾಗಿದ್ದರೆ, ಈ ವರ್ಷ ಇದರ

] ಪ್ರಮಾಣ 31.05 ಇಂಚು ಮಾತ್ರ ಮಳೆಯಾಗಿದೆ. ಅಂದರೆ ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 16.39 ಇಂಚು ಮಳೆ ಕಡಿಮೆಯಾಗಿದೆ. ಹಾಗೆಯೇ ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 38.20 ಇಂಚು ಮಳೆಯಾಗಿದ್ದರೆ, ಈ ವರ್ಷ ಇದರ ಪ್ರಮಾಣ 32.51 ಇಂಚು ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 5.68 ಮಳೆ ಕಡಿಮೆಯಾಗಿರುವದು ತಿಳಿದು ಬರುತ್ತದೆ.

ಮಡಿಕೇರಿ, ನಾಪೋಕ್ಲು, ಸಂಪಾಜೆ, ಭಾಗಮಂಡಲ, ವೀರಾಜಪೇಟೆ, ಪೊನ್ನಂಪೇಟೆ, ಅಮ್ಮತ್ತಿ ಮತ್ತಿತರ ಕಡೆಗಳಲ್ಲಿ ತುಂತುರು ಮಳೆಯಾಗುತ್ತಿರುವದು ಹೊರತುಪಡಿಸಿದರೆ ಉಳಿದ ಕಡೆಗಳಲ್ಲಿ ಹೇಳಿಕೊಳ್ಳುವ ಮಳೆಯಾಗುತ್ತಿಲ್ಲ. ಸೋಮವಾರಪೇಟೆ ತಾಲೂಕಿನ ಬಹುತೇಕ ಪ್ರದೇಶದಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಸದ್ಯ ಕಳೆದ ಮೂರು ನಾಲ್ಕು ದಿನಗಳಿಂದ ಮಳೆ ಬಿಡುವು ನೀಡಿರುವದರಿಂದ ಭತ್ತ ನಾಟಿ ಕಾರ್ಯ ಚುರುಕುಗೊಂಡಿದ್ದು, ಮತ್ತೆ ಮಳೆ ಆರಂಭವಾಗಲಿ ಎಂದು ಜಿಲ್ಲೆಯ ರೈತರು ಆಶಿಸುತ್ತಿದ್ದಾರೆ.

ಹವಾಮಾನ ಇಲಾಖೆ ಮೂಲಗಳ ಪ್ರಕಾರ ಜುಲೈ ಕೊನೆ ಹಾಗೂ ಆಗಸ್ಟ್ ಮೊದಲ ವಾರದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಕಳೆದ ವರ್ಷ ಸಾಧಾರಣ ಮಳೆಯಾಗಿಯೇ ಬರ ಪರಿಸ್ಥಿತಿ ಉಂಟಾಗಿತ್ತು, ಈ ಬಾರಿ ಇನ್ನೂ ಮಳೆ ಕಡಿಮೆಯಾದರೆ ಕುಡಿಯುವ ನೀರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ನಾಡಿನ ಜೀವನದಿ ಕಾವೇರಿಯಲ್ಲಿ ನೀರಿನ ಒಳಹರಿವು ಕಡಿಮೆಯಾಗಿ ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಬೆಂಗಳೂರು ಜನತೆಗೆ ಕುಡಿಯುವ ನೀರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಹಿಂದೆ ಆಷಾಡ ಮಾಸವೆಂದರೆ ತುಂತುರು, ಜಿಟಿಜಿಟಿ ಮಳೆಯಿಂದಾಗಿ ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ 2013ರಲ್ಲಿ ಜೂನ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ರಾಜ್ಯ ಹೆದ್ದಾರಿ ಬಿ.ಎಂ.ರಸ್ತೆ ಮಾರ್ಗದ ಮಡಿಕೇರಿ ಬಳಿಯ ಸಿಂಕೋನ, ಕೊಯನಾಡು ಬಳಿ ರಸ್ತೆಗಳು ಕುಸಿದಿದ್ದನ್ನು ಸ್ಮರಿಸಬಹುದಾಗಿದೆ. ಅದರ ನಂತರ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕ್ರಮೇಣ ಇಳಿಮುಖವಾಗಿದೆ.