ವೀರಾಜಪೇಟೆ, ಸೆ.16: ಜಿಲ್ಲೆಯಲ್ಲಿ ಅಮಾಯಕರು, ಕೂಲಿ ಕಾರ್ಮಿಕರು, ಬಡವರು ಕಾಡಾನೆ ಧಾಳಿಗೆ ಬಲಿಯಾಗುತ್ತಿರುವದರಿಂದ ಸರಕಾರವೇ ಇವರನ್ನು ಕೊಲೆ ಮಾಡುವಂತಾಗಿದ್ದು, ಕಾಡಾನೆ ಧಾಳಿಯನ್ನು ತಡೆಯಲು ಸರಕಾರ ವಿಫಲಗೊಂಡಿರುವದರಿಂದ ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ಜೆಡಿಎಸ್ ಪಕ್ಷದ ವತಿಯಿಂದ ಇಲ್ಲಿನ ಡಿಎಫ್ಒ ಕಚೇರಿ ಮುಂದೆ ಧರಣಿ ಮುಷ್ಕರ ಹೂಡುವದಾಗಿ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.
ಇಲ್ಲಿನ ಪ್ರೆಸ್ಕ್ಲಬ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿದ ಸಂಕೇತ್ ಅವರು, ಕಳೆದ 12 ತಿಂಗಳ ಅವಧಿಯಲ್ಲಿ ಕಾಡಾನೆ ಧಾಳಿಯಿಂದ ಉಂಟಾದ ಸಾವು -ನೋವಿನ ಅಂಕಿ ಅಂಶಗಳನ್ನು ನೀಡಿದರು. ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಸರಕಾರ ವಿಫಲಗೊಂಡಿದೆ. ಇದು ಬಡ ಕಾರ್ಮಿಕರ, ಬಡವರ, ಅರಣ್ಯದ ಅಂಚಿನಲ್ಲಿ ಜೀವನ ಸಾಗಿಸುವವರ ಜೀವದ ಪ್ರಶ್ನೆಯಾಗಿದೆ. ಈ ವಿಷಯದಲ್ಲಿ ಅರಣ್ಯ ಸಚಿವರು ಕರ್ತವ್ಯ ನಿಷ್ಠೆಯಲ್ಲಿ ನಿಷ್ಕ್ರಿಯರಾಗಿದ್ದು, ಇವರ ಖಾತೆ ಬದಲಾವಣೆ ಮಾಡಬೇಕು ಎಂದು ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿದರೂ ರಾಜಕೀಯವಾಗಿ ಇವರನ್ನು ಮುಂದುವರೆಸಿದ್ದಾರೆ. ಮುಖ್ಯಮಂತ್ರಿಗೆ ಕೊಡಗಿನ ಜನತೆಯೊಂದಿಗೆ ಉತ್ತಮ ಬಾಂಧವ್ಯ ಇಲ್ಲ. ಕೊಡಗನ್ನು ಅಸಡ್ಡೆ ಮನೋಭಾವನೆಯಿಂದ ಕಾಣುತ್ತಿದ್ದಾರೆ. ಅರಣ್ಯ ಅಧಿಕಾರಿಗಳು ಸಿಬ್ಬಂದಿಗಳ ಮೇಲೆ ಸರಕಾರಕ್ಕೆ ಹಿಡಿತವಿಲ್ಲ ಎಂದು ದೂರಿದರು.
ಕಳೆದ ಮೂರು ತಿಂಗಳ ಹಿಂದೆ ಪಾಲಂಗಾಲ ಗ್ರಾಮದ ಉದಯ ಎಂಬವರಿಗೆ ಕಾಡಾನೆ ಧಾಳಿಯಿಂದ ಶಾಶ್ವತವಾಗಿ ಅಂಗ ವಿಕಲತೆ ಉಂಟಾಗಿದೆ. ಅರಣ್ಯ ಇಲಾಖೆಂiÀi ಅಧಿಕಾರಿಗಳು ಈ ತನಕ ಅವರನ್ನು ವಿಚಾರಿಸಿಲ್ಲ. ಉದಯ ಅವರು ಈಗಾಗಲೇ ಆಸ್ಪತ್ರೆ ಚಿಕಿತ್ಸೆಗಾಗಿ ಲಕ್ಷಾಂತರ ಹಣ ಖರ್ಚು ಮಾಡಿದ್ದರೂ ಏನೂ ಪ್ರಯೋಜನ ವಾಗಿಲ್ಲ ಎಂದು ಸಂಕೇತ್ ಪೂವಯ್ಯ ಆರೋಪಿಸಿದರು.
ಪಕ್ಷದ ಜಿಲ್ಲಾ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಸುರೇಶ್ ಮಾತನಾಡಿ, ಕಾಡಾನೆ ಧಾಳಿಯಲ್ಲಿ ಬಡ ಕೂಲಿ ಕಾರ್ಮಿಕರು ಬಲಿಯಾಗುತ್ತಿದ್ದಾರೆ.
ಆ ವರ್ಗಕ್ಕೆ ಕಾಡಾನೆ ಧಾಳಿಯಿಂದ ರಕ್ಷಣೆ ಇಲ್ಲದಂತಾಗಿದೆ. ಈ ವಿಷಯದಲ್ಲಿ ಸರಕಾರ ಸಾರ್ವಜನಿಕ ಮನವಿಗೆ ಸ್ಪಂದಿಸದಿರುವದು ಶೋಚನೀಯ. ಇದಕ್ಕೆ ಪ್ರತಿಭಟನೆಯೊಂದೇ ದಾರಿ ಎಂದರು.
ಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯ ಎಸ್.ಎಚ್.ಮತೀನ್, ಕುಟ್ಟ ವಿಭಾಗದ ಪಕ್ಷದ ಪಿ.ವಿ.ರೆನ್ನಿ, ಎಂ.ಕೆ.ವಸಂತ್ ಉಪಸ್ಥಿತರಿದ್ದರು.