ಮಡಿಕೇರಿ, ಸೆ. 14: ಮಲಯಾಳಿ ಸಮುದಾಯದ ಪ್ರಮುಖ ಹಬ್ಬಗಳಲ್ಲೊಂದಾದ ಓಣಂ ಹಬ್ಬವನ್ನು ಜಿಲ್ಲೆಯಾದ್ಯಂತ ಮಲಯಾಳಿ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.

ಮನೆ ಮನೆಗಳಲ್ಲಿ ಓಣಂನ ಪ್ರಮುಖ ಆಕರ್ಷಣೆಯಾದ ‘ಪೂಕಳಂ’ ರಚಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಓಣಂ ಹಬ್ಬದ ವಿಶೇಷ ಅಡುಗೆ (ಓಣ ಸದ್ಯ) ಮಾಡಿ ಕುಟುಂಬ ಸಹಿತ ಸವಿದು ಸಂಭ್ರಮಿಸಿದರು.

ಶನಿವಾರಸಂತೆ : ಇಲ್ಲಿಗೆ ಸಮೀಪದ ಬಸವನಹಳ್ಳಿ, ಮುಳ್ಳೂರು, ಮಾಲಂಬಿ, ನಿಡ್ತ ಗ್ರಾಮಗಳಲ್ಲೂ ಓಣಂ ಹಬ್ಬ ಆಚರಿಸಲಾಯಿತು.

ಹಬ್ಬದ 10 ದಿನ ಮೊದಲೇ ಹಸ್ತ ನಕ್ಷತ್ರದಿಂದ ಆರಂಭಿಸಿ ಮೊದಲ ದಿನ ಒಂದು ವಿಧದ ಹೂವು ಅಂದರೆ ತುಂಬೆ ಹೂವಿನಿಂದ ಹೂವಿನ ರಂಗೋಲಿ ಬಿಡಿಸಿ ಆರಂಭಿಸಿದರೆ, ಪ್ರತಿದಿನವೂ ಒಂದೊಂದು ವಿಧದ ಹೂಗಳಿಂದ ರಂಗೋಲಿ ಬಿಡಿಸುತ್ತಾರೆ. 10 ದಿನ ಹೀಗೆ ಮಾಡಿ ಬಿಡಿಸಲಾದ ರಂಗೋಲಿ ‘ಪೂಕಳಂ’ ಎಂದು ಕರೆಯಲ್ಪಡುತ್ತದೆ.

ಹೊಸಬಟ್ಟೆ ಧರಿಸಿ ಹೂವಿನ ರಂಗೋಲಿ ಮಧ್ಯೆ ದೀಪ ಬೆಳಗಿಸಿ ಪ್ರಾರ್ಥಿಸಿದರು. ಮನೆಯಲ್ಲಿ ತರಕಾರಿಗಳಿಂದ ವಿವಿಧ ಅಡುಗೆ ಹಾಗೂ ಸಿಹಿ ತಿಂಡಿಗಳನ್ನು ಮಾಡಿ ಭೋಜನ ಸವಿದು ಓಣಂ ಹಬ್ಬವನ್ನು ಆಚರಿಸಿದರು.

ಮೂರ್ನಾಡು : ಓಣಂ ಹಬ್ಬದ ಪ್ರಯುಕ್ತ ಪಟ್ಟಣದ ಶ್ರೀ ಕೃಷ್ಣ ಹೊಟೇಲ್‍ನಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಯಿತು.

ಹೊಟೇಲ್ ಮಾಲೀಕ ಗೋವಿಂದನ್ ಅವರು ಕಳೆದ ಐದು ವರ್ಷಗಳಿಂದ ಓಣಂ ದಿನದಂದು ಓಣಂ ಸದ್ಯವನ್ನು ತಯಾರಿಸಿ ಮಧ್ಯಾಹ್ನ ಸಾರ್ವಜನಿಕರಿಗೆ ನೀಡುತ್ತಿದ್ದಾರೆ. 18 ವಿಧದಲ್ಲಿ ಕೇರಳ ಶೈಲಿಯಲ್ಲಿ ಓಣಂ ಸದ್ಯವನ್ನು ತಯಾರಿಸಿ ಓಣಂ ಹಬ್ಬದಂದು ಸಾರ್ವಜನಿಕರಿಗೆ ನೀಡಿ ಉಪಚರಿಸುತ್ತಿರುವದು ನಿಜಕ್ಕೂ ತೃಪ್ತಿ ತಂದಿದೆ ಎಂದು ಮಾಲೀಕ ಗೋವಿಂದನ್ ಅನಿಸಿಕೆ ವ್ಯಕ್ತಪಡಿಸುತ್ತಾರೆ.

ಪಟ್ಟಣದಲ್ಲಿ ಶ್ರೀ ಕೃಷ್ಣ ಹೊಟೇಲ್‍ನಲ್ಲಿ ಓಣಂ ಹಬ್ಬದ ಪ್ರಯುಕ್ತ ರಚಿಸಲಾದ ಪೂಕಳಂ (ಹೂವಿನ ರಂಗೋಲಿ) ಸಾರ್ವಜನಿಕರ ಗಮನ ಸೆಳೆಯಿತು.

ಕುಶಾಲನಗರ: ಕುಶಾಲನಗರದ ವಿವಿಧೆಡೆ ಓಣಂ ಹಬ್ಬದ ಅಂಗವಾಗಿ ಮನೆಮನೆಗಳಲ್ಲಿ ಪೂಕಳಂ ರಚಿಸುವದರೊಂದಿಗೆ ಹಬ್ಬವನ್ನು ಆಚರಿಸಿದರು. ಸ್ಥಳೀಯ ಇಂದಿರಾ ಬಡಾವಣೆ, ಗುಮ್ಮನಕೊಲ್ಲಿ ಮುಂತಾದ ಕಡೆಗಳಲ್ಲಿ ಸಾಂಪ್ರದಾಯಿಕ ಆಚರಣೆಗಳು ಕಂಡುಬಂದವು.ಸೋಮವಾರಪೇಟೆ : ಮಲೆಯಾಳಿ ಬಾಂಧವರ ಪ್ರಮುಖ ಹಬ್ಬವಾದ ಓಣಂ ಹಬ್ಬವನ್ನು ತಾಲೂಕಿನಾದ್ಯಂತ ಬುಧವಾರ ಸಂಭ್ರಮ-ಸಡಗರದೊಂದಿಗೆ ಆಚರಿಸಿದರು.

ಬಲಿಚಕ್ರವರ್ತಿಯನ್ನು ನೆನಪಿಸುವ ಓಣಂ ಹಬ್ಬದ ವಿಶೇಷತೆಯಾಗಿ ಕಳೆದ ಒಂದು ವಾರಗಳಿಂದ ಮನೆ ಮುಂದೆ ಹೂವಿನ ರಂಗೋಲಿ ಹಾಕುವದು ವಾಡಿಕೆ. ಅದರಂತೆ ಓಣಂ ಹಬ್ಬದ ದಿನ ಮನೆ ಮುಂದೆ ದೊಡ್ಡದೊಡ್ಡ ಗಾತ್ರದಲ್ಲಿ ಹೂವಿನ ರಂಗೋಲಿ(ಪೂಕಳಂ) ಹಾಕಿ ಅದರ ಮಧ್ಯೆ ಹಾಗೂ ಸುತ್ತ ದೀಪಗಳನ್ನು ಹಚ್ಚಿಟ್ಟು ಹಬ್ಬವನ್ನು ಬರಮಾಡಿಕೊಳ್ಳುವ ಕುಟುಂಬ ವಿಶೇಷ ಖಾದ್ಯಗಳನ್ನು ಮಾಡಿ, ಬಂಧು-ಮಿತ್ರರಿಗೆ ಉಣ ಬಡಿಸುವ ಮೂಲಕ ಸಂಭ್ರಮದಿಂದ ಆಚರಿಸಿದರು. ಸೋಮವಾರಪೇಟೆ ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ವಿವಿಧೆಡೆಗಳಲ್ಲಿ ನೆಲೆಸಿರುವ ಮಲೆಯಾಳಿ ಬಾಂಧವರು ಓಣಂ ಹಬ್ಬವನ್ನು ಆಚರಿಸಿದರು.