ಮಡಿಕೇರಿ, ಜ. 27: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇಂದು ಅಕಾಲಿಕ ಮಳೆಯಾದ ಬಗ್ಗೆ ವರದಿಯಾಗಿದೆ.ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದು ಜಿಲ್ಲೆಯ ವಿವಿಧೆಡೆಗಳಲ್ಲಿ ಮಧ್ಯಾಹ್ನದ ವೇಳೆಗೆ ಮಳೆ ಸುರಿದ ಬಗ್ಗೆ ವರದಿಯಾಗಿದೆ.ಮಡಿಕೇರಿ ನಗರ, ಚೇರಂಬಾಣೆ, ಭಾಗಮಂಡಲ, ಸುಂಟಿಕೊಪ್ಪ, ದಕ್ಷಿಣ ಕೊಡಗಿನ ಕೆಲವೆಡೆ ಮಳೆಯಾಗಿದೆ.ಭಾಗಮಂಡಲ ಸುತ್ತಮುತ್ತ ಹೆಚ್ಚು ಮಳೆಯಾದ ಬಗ್ಗೆ ವರದಿಯಾಗಿದೆ. ಅಕಾಲಿಕ ಮಳೆಯಿಂದ ಕಾಫಿ ಕುಯ್ಲು ಕೆಲಸ ನಡೆಯುತ್ತಿರುವದರಿಂದ ಕಾಫಿ ಬೆಳೆಗೆ ಹಾನಿಯಾಗುವ ಸಾಧ್ಯತೆ ಕಂಡುಬಂದಿದೆ. ಕೃಷಿಕರು ಹಾಗೂ ರೈತರು ಆತಂಕದಲ್ಲಿದ್ದರೆ, ಇತ್ತ ಮಡಿಕೇರಿ ಜನತೆ ಮಾತ್ರ ಕೊಂಚ ನಿರಾಳರಾಗಿದ್ದಾರೆ. ಒಳಚರಂಡಿ ವ್ಯವಸ್ಥೆಯಿಂದಾಗಿ ಧೂಳಿನಿಂದ ಮುಚ್ಚಿ ಹೋಗಿದ್ದ ರಸ್ತೆ, ಕಟ್ಟಡಗಳಿಗೆ ಮಜ್ಜಣವಾದಂತಾಗಿದೆ. ಆದರೆ ರಸ್ತೆಗಿಂತ ಎತ್ತರದಲ್ಲಿ ಚರಂಡಿಗಳು ಇರುವದರಿಂದ ಮಳೆ ನೀರೆಲ್ಲ ರಸ್ತೆಯಲ್ಲೇ ಹರಿದು ರಸ್ತೆ ಮತ್ತೆ ಅಧೋಗತಿಗಿಳಿದಿದೆ.
ಸಣ್ಣ ಹೊಂಡಗಳಾಗಿದ್ದ ರಸ್ತೆಯಲ್ಲಿ ಒಳಚರಂಡಿಯವರ ಕೃಪೆಯಿಂದಾಗಿ ದೊಡ್ಡ ಕೆರೆಗಳಂತಾಗಿ ನಡೆದಾಡಲು ದ್ವಿಚಕ್ರವಾಹನಗಳಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಯಿತು.
ಸಂಜೆ ವೇಳೆಗೆ ಮಳೆ ಸುರಿದದ್ದರಿಂದ ಶಾಲಾ ಮಕ್ಕಳು ಸಂಪೂರ್ಣ ಒದ್ದೆಯಾಗಿ ಮನೆ ಸೇರುವಂತಾಯಿತು.
ಸೋಮವಾರಪೇಟೆ: ತಾಲೂಕಿನ ಹಲವೆಡೆ ಕಾಫಿ ಕೊಯ್ಲು ಕೆಲಸ ಪ್ರಗತಿಯಲ್ಲಿರುವಾಗಲೇ ಇಂದು ದಿಡೀರ್ ಮಳೆ ಸುರಿದಿದ್ದರಿಂದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕ ಬೇಕಾಗಿದೆ. ಈಗಾಗಲೇ ಕೊಯ್ಲು ಮಾಡಿರುವ ಕಾಫಿಯನ್ನು ಪಲ್ಪಿಂಗ್ ಮಾಡಿ ಒಣಗಲು ಹಾಕಲಾಗಿದ್ದು, ದಿಡೀರ್ ಮಳೆಯಿಂದ ಕಾಫಿ ಒದ್ದೆಯಾಗಿದೆ.
ಕಳೆದ ಕೆಲ ದಿನಗಳಿಂದ ಮೋಡ ಮುಸುಕಿದ ವಾತಾವರಣವಿದ್ದು, ಇಂದು ಮಧ್ಯಾಹ್ನ ಗರ್ವಾಲೆ, ಸೂರ್ಲಬ್ಬಿ, ತಾಕೇರಿ, ಕಿರಗಂದೂರು, ಹಾನಗಲ್ಲು, ಮಾದಾಪುರ ಸೇರಿದಂತೆ ಇತರೆಡೆಗಳಲ್ಲಿ ಮಳೆ ಸುರಿಯಿತು. ಪರಿಣಾಮ ಕಾಫಿ ಕುಯ್ಲು ಕೆಲಸವನ್ನು ಅರ್ಧ ದಿನಕ್ಕೆ ಸ್ಥಗಿತಗೊಳಿಸಲಾಯಿತು.
ಕಾಫಿ ತೋಟಗಳಲ್ಲಿ ಕಾಫಿ ಕುಯ್ಲು ಮಾಡಲು ಇನ್ನೂ ಬಾಕಿಯಿದ್ದು, ಅಕಾಲಿಕ ಮಳೆಯಿಂದ ಕಾಫಿ ಉದುರುವ ಆತಂಕ ಬೆಳೆಗಾರ ವರ್ಗವನ್ನು ಕಾಡುತ್ತಿದೆ. ಇದರೊಂದಿಗೆ
(ಮೊದಲ ಪುಟದಿಂದ) ಅಲ್ಪ ಮಳೆಯಾಗಿರುವದರಿಂದ ಕಾಫಿ ಗಿಡಗಳಲ್ಲಿ ಹೂವು ಅರಳುವ ಆತಂಕವೂ ಇದ್ದು, ಈ ಸಮಯದಲ್ಲಿ ಕಾಫಿ ಹಣ್ಣಿನ ಕುಯ್ಲು ಕಷ್ಟಸಾಧ್ಯ.
ಒಂದು ವೇಳೆ ಮೋಡ ಕವಿದ ವಾತಾವರಣ ಮುಂದುವರೆದು, ಆಗಾಗ್ಗೆ ಮಳೆಯಾದರೆ ಕಾಫಿ ಕುಯ್ಲು ಸೇರಿದಂತೆ ಕಾಫಿ ಬೀಜಗಳನ್ನು ಒಣಗಿಸಲು ತೊಂದರೆಯಾಗಲಿದ್ದು, ಅರೇಬಿಕಾ ಕಾಫಿಗೆ ಉತ್ತಮ ಬೆಲೆಯಿದ್ದರೂ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗುವದಿಲ್ಲ. ಪರಿಣಾಮ ಕಾಫಿ ಬೆಳೆಗಾರರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಬೆಳೆಗಾರ ಮುದ್ದಪ್ಪ ಅಭಿಪ್ರಾಯಿಸಿದ್ದಾರೆ.
ವೀರಾಜಪೇಟೆ: ವೀರಾಜಪೇಟೆ ವಿಭಾಗಕ್ಕೆ ಇಂದು ಅಪರಾಹ್ನ 3ಗಂಟೆಯಿಂದ ರಾತ್ರಿ 7ರವರೆಗೂ ಮಳೆ ಸುರಿಯಿತು.
ಗುಡುಗು, ಭಾರೀ ಗಾಳಿಯಿಂದ ಸುರಿದ ಮಳೆಯಿಂದ ಬಿಸಿಲಿನ ಬೇಗೆಗೆ ತಂಪು ವಾತಾವರಣ ತಂದಿತು.ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟ, ಮೆಮನಕೊಲ್ಲಿ, ವಾಟೆಕೊಲ್ಲಿ, ಪೆರುಂಬಾಡಿಯಲ್ಲಿಯೂ ಭಾರೀ ಗಾಳಿ, ಗುಡುಗಿನಿಂದ ಮಳೆ ಸುರಿದಿದೆ. ಗಡಿ ಭಾಗದಲ್ಲಿ ಒಂದು ಇಂಚು ಮಳೆ ಸುರಿದಿರಬಹುದು ಎಂದು ಅಂದಾಜು ಮಾಡಲಾಗಿದೆ.
ನಾಪೋಕ್ಲು: ಹೋಬಳಿ ವ್ಯಾಪ್ತಿಯ ವಿವಿಧೆಡೆ ಅಕಾಲಿಕ ಮಳೆ ಸುರಿಯಿತು. ಸಮೀಪದ ಬಲ್ಲಮಾವಟಿ, ನೆಲಜಿ, ಎಮ್ಮೆಮಾಡು ವ್ಯಾಪ್ತಿಗಳಲ್ಲಿ ಮಧ್ಯಾಹ್ನ ಮಳೆ ಅರ್ಧ ಗಂಟೆಗಳ ಕಾಲ ಸುರಿಯಿತು. ಈ ಭಾಗದಲ್ಲಿ ಸುಮಾರು ಅರ್ಧ ಇಂಚಿಗೂ ಅಧಿಕ ಮಳೆ ಸುರಿದಿದೆ. ಮಳೆಯಿಂದ ಕಾಫಿಯ ತೋಟಗಳಿಗೆ ತಂಪೆರೆದಂತಾಗಿದೆ. ನಾಪೋಕ್ಲು ಪಟ್ಟಣದಲ್ಲಿ ಸಂಜೆ ನಾಲ್ಕು ಗಂಟೆಯ ವೇಳೆಗೆ ಮಳೆ ಸುರಿಯಿತು.
ಕುಶಾಲನಗರ : ಕುಶಾಲನಗರ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ವೇಳೆ ದಿಢೀರ್ ಮಳೆ ಸುರಿದಿದೆ. ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಕಂಡುಬಂದು ಸಂಜೆ ಸಾಧಾರಣ ಮಳೆ ನಿರಂತರವಾಗಿ ಸುರಿದ ಹಿನ್ನೆಲೆಯಲ್ಲಿ ಜನಜೀವನ ಏರುಪೇರಾದ ದೃಶ್ಯ ಗೋಚರಿಸಿತು.