ಗೋಣಿಕೊಪ್ಪಲು, ನ. 6: ಅರಣ್ಯ ಹಕ್ಕು ಕಾಯ್ದೆ ಜಾರಿಗೊಂಡ ನಂತರ ಹಲವು ಮೂಲನಿವಾಸಿ ಗಿರಿಜನರರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತಿದ್ದರೂ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಇತರೆ ಮೀಸಲು ಅರಣ್ಯ ಪ್ರದೇಶದಲ್ಲಿ ವಸತಿ ನಿರ್ಮಾಣಕ್ಕೆ ಅರಣ್ಯ ಇಲಾಖಾಧಿಕಾರಿಗಳು ಅಡ್ಡಿ ಆತಂಕ ಒಡ್ಡುತ್ತಿದ್ದಾರೆ. ಹಲವು ಜೇನುಕುರುಬ, ಬೆಟ್ಟಕುರುಬ, ಯರವ ಇತ್ಯಾದಿ ಕಾಡಿನ ಮಕ್ಕಳಿಗೆ ಹಕ್ಕು ಪತ್ರವನ್ನು ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಕೊಡಗು ಜಿಲ್ಲೆಯ ಗಿರಿಜನರಿಗೆ ಹೊರ ಜಿಲ್ಲೆಯಲ್ಲಿ ಪುನರ್ವಸತಿ ಕಲ್ಪಿಸುವದು ಬೇಡ. ಇಲ್ಲಿಯೇ ಅರಣ್ಯದಂಚಿನಲ್ಲಿ ಅರಣ್ಯ ಪೈಸಾರಿ ಅಥವಾ ಕಂದಾಯ ಇಲಾಖೆಗೆ ಸೇರಿದ ಪೈಸಾರಿ ಜಾಗದಲ್ಲಿ ಪುನರ್ವಸತಿ ಕಲ್ಪಿಸುವಂತಾಗಬೇಕು ಎಂದು ಹಲವು ಆದಿವಾಸಿ ಜನಾಂಗದ ಪ್ರಮುಖರು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಅವರನ್ನು ತಿತಿಮತಿಯಲ್ಲಿ ಒತ್ತಾಯಿಸಿದರು.

ತಿತಿಮತಿ ನಿರೀಕ್ಷಣಾ ಮಂದಿರದ ಮುಂಭಾಗ ಅರಣ್ಯವಾಸಿ ಗಿರಿಜನರ ಪುನರ್ವಸತಿ ಸಮಸ್ಯೆ, ಹಕ್ಕುಪತ್ರ ನೀಡಿಕೆ, ಮೂಲಭೂತ ಸೌಕರ್ಯಗಳ ಅನುಷ್ಟಾನ ಹಾಗೂ ಚೆನ್ನಂಗೊಲ್ಲಿ ಹಾಗೂ ದೇವರಪುರ ದೇವರಕಾಡುವಿನ ಗಿರಿಜನರಿಗೆ ಪ್ರಭಾವಿಗಳು ಅಡ್ಡಿ ಆತಂಕ ಒಡ್ಡುತ್ತಿರುವ ಕುರಿತು ಯೋಜನೆ ಮತ್ತು ಸಾಂಖಿಕ, ವಿಜ್ಞಾನ-ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಮ್ ಅವರ ಸಮ್ಮುಖದಲ್ಲಿ ಅಧಿಕಾರಿಗಳು, ಆದಿವಾಸಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಆರೋಪ-ಪ್ರತ್ಯಾರೋಪ ಹಾಗೂ ಪುನರ್ವಸತಿ ಅನುಷ್ಟಾನದ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ಐಟಿಡಿಪಿ ಅಧಿಕಾರಿ ಮಾಯಾ ಗಲಗಲಿ, ಉಪವಿಭಾಗಾಧಿ ಕಾರಿ ನಂಜುಂಡೇ ಗೌಡ, ತಿತಿಮತಿ ಎಸಿಎಫ್ ಸೂರ್ಯಸೇನ್, ನಾಗರಹೊಳೆ ಎಸಿಎಫ್ ಪ್ರಸನ್ನ, ವಿವಿಧ ಕಂದಾಯ, ಅರಣ್ಯ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಉಸ್ತುವಾರಿ ಸಚಿವರು ಮುಂದಿನ ಎರಡು ತಿಂಗಳಿನಲ್ಲಿ ವೀರಾಜಪೇಟೆ ತಾಲೂಕಿನಲ್ಲಿ ಪುನರ್ವಸತಿಗೆ ಲಭ್ಯ ಇರುವ ಜಾಗ, ಪುನರ್ವಸತಿಗೆ ಅರ್ಹರಾಗಿರುವ ಫಲಾನುಭವಿಗಳ ಪಟ್ಟಿಯನ್ನು ಹೊಂದಿಕೊಂಡು ಮೂಲಭೂತ ಸೌಲಭ್ಯವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಾಕಿಕೊಳ್ಳಲಾಗುವದು ಎಂದರು.

ಕಾರ್ಯಕ್ರಮದ ಅನುಷ್ಟಾನ ನಿಟ್ಟಿನಲ್ಲಿ ಮುಂಬರುವ ಜನವರಿ ಅಂತ್ಯದ ವೇಳೆಗೆ ಮತ್ತೊಂದು ಸಭೆ ನಡೆಸಿ ಚರ್ಚಿಸಲಾಗುವದು. ಸ್ವಯಂಪ್ರೇರಿತರಾಗಿ ಹುಣಸೂರು ತಾಲೂಕು, ಗುರುಪುರ ಒಳಗೊಂಡಂತೆ ಹೆಚ್.ಡಿ.ಕೋಟೆ ತಾಲೂಕಿಗೆ ಪುನರ್ವಸತಿಗೊಳ್ಳುವವರನ್ನು ತಡೆಯುವದು ಅಸಾಧ್ಯ. ಅರ್ಹ ಫಲಾನುಭವಿಗಳು ಹಾಗೂ ಲಭ್ಯವಿರುವ ಜಾಗವನ್ನು ಗುರುತಿಸಿ ಹಂಚಿಕೆ ಮಾಡಲಾಗುವದು.