ಮಡಿಕೇರಿ, ಸೆ. 28: ಬೆಳಗಾವಿ ಕರ್ನಾಟಕ ಲಿಂಗಾಯಿತ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಕೆ.ಎಲ್.ಇ. ಸಂಸ್ಥೆಯ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯನ್ನು ಆಯೋಜಿಸಿದೆ.
ಮೊದಲ ಹಂತದಲ್ಲಿ ತಾ. 30 ರಂದು ಬೆಳಿಗ್ಗೆ 10 ಗಂಟೆಗೆ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಗೆ ಶಾಲೆಯ ಮಾರ್ಗದರ್ಶಿ ಶಿಕ್ಷಕರು ತಂಡದ ಇಬ್ಬರು ವಿದ್ಯಾರ್ಥಿಗಳೊಂದಿಗೆ ಹಾಜರಾಗಲು ಕೋರಿದೆ. ಜಿಲ್ಲಾಮಟ್ಟದಲ್ಲಿ ಆಯ್ಕೆಯಾಗುವ ತಂಡಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಗುವದು. ರಾಜ್ಯಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ (ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು ಹಾಗೂ ಕಾಲೇಜು ವಿಭಾಗ) ಪ್ರಥಮ ಸ್ಥಾನ ರೂ. 25 ಸಾವಿರ, ದ್ವಿತೀಯ ರೂ. 15 ಸಾವಿರ ಹಾಗೂ ತೃತೀಯ ರೂ. 10 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಗುವದು ಎಂದು ರಾಜ್ಯ ವಿಜ್ಞಾನ ಪರಿಷತ್‍ನ ಜಿಲ್ಲಾ ಸಮಿತಿ ಅಧ್ಯಕ್ಷ ಡಾ. ಜೆ. ಸೋಮಣ್ಣ ತಿಳಿಸಿದ್ದಾರೆ.
ಸ್ಪರ್ಧೆಯ ವಿವರ
ಪ್ರಾಥಮಿಕ ಶಾಲಾ ವಿಭಾಗದ ವಿಷಯಗಳು
ಪುನರ್ ಬಳಸಬಹುದಾದ ಶಕ್ತಿಯ ಮೂಲಗಳು. ಮಾಲಿನ್ಯ ನಿಯಂತ್ರಣ.
ಪ್ರೌಢಶಾಲಾ ವಿಭಾಗದ ವಿಷಯಗಳು
ಜೀವ ವೈವಿಧ್ಯ ಸಂರಕ್ಷಣೆ. ಅನ್ವಯಿಕ ಗಣಿತ
ಕಾಲೇಜು ವಿಭಾಗ ( ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ)
ಸ್ಮಾರ್ಟ್ ಸಿಟಿ. ಮಾಹಿತಿ ಸಂವಹನ ಮತ್ತು ಉಪಗ್ರಹಗಳು.
ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ತಂಡದ ಹೆಸರನ್ನು ಟಿ.ಜಿ. ಪ್ರೇಮಕುಮಾರ್, ಜಿಲ್ಲಾ ಸಂಯೋಜಕರು, ಸ.ಪ.ಪೂ. ಕಾಲೇಜು, ಸುಂಟಿಕೊಪ್ಪ (ಮೊ.ನಂ: 9448588352) ಇವರಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.