ಮಡಿಕೇರಿ, ಸೆ. 2: ಯಶಸ್ವಿನಿ ಯೋಜನೆಯಡಿ ಆರೋಗ್ಯ ಸೇವೆ ಪಡೆಯುವಂತಾಗಲು ಪ್ರತಿಯೊಂದು ಕುಟುಂಬವು ಹೆಸರು ನೋಂದಾಯಿಸುವಂತೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮನವಿ ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಯಶಸ್ವಿನಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಮತ್ತು ನಗರದ ಎಲ್ಲಾ ಜನರು ಯಶಸ್ವಿನಿ ಯೋಜನೆಯಡಿ ಹೆಸರು ನೋಂದಾಯಿಸಬಹುದಾಗಿದ್ದು, ಆರೋಗ್ಯ ಸೇವೆ ಪಡೆಯಲು ಯಶಸ್ವಿನಿ ಯೋಜನೆ ಸಹಕಾರಿ ಯಾಗಲಿದೆ. ಆ ನಿಟ್ಟಿನಲ್ಲಿ ಅರಿವು ಮೂಡಿಸಲು ಕ್ರಮವಹಿಸುವಂತೆ ಸಹಕಾರ ಇಲಾಖೆ ಉಪ ನಿಬಂಧಕರಿಗೆ ಸಲಹೆ ಮಾಡಿದರು. ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಕುಟುಂಬಗಳು ಯಶಸ್ವಿನಿ ಯೋಜನೆಯಡಿ ಹೆಸರು ನೋಂದಣಿಗೆ ಬಾಕಿ ಇದ್ದು, ಹೆಸರು ನೋಂದಣಿ ಮಾಡಿಸದಿರುವ ಕುಟುಂಬಗಳು ಹೆಸರು ನೋಂದಣಿಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸಹಕಾರ ಇಲಾಖೆಯ ಉಪ ನಿಬಂಧಕ ವಿಜಯಕುಮಾರ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ 2016-17ನೇ ಸಾಲಿಗೆ ಒಟ್ಟು ಗ್ರಾಮೀಣ ಯೋಜನೆಯಡಿ ಒಂದು ಲಕ್ಷ ಜನರನ್ನು ನೋಂದಾಯಿಸಲು, ನಗರ ಯೋಜನೆಯಡಿ ಹತ್ತು ಸಾವಿರ ಸದಸ್ಯರನ್ನು ನೋಂದಾಯಿಸಲು ಗುರಿ ಹಂಚಿಕೆ ಮಾಡಲಾಗಿದೆ. ಒಂದೇ ಕುಟುಂಬದ 5 ಮತ್ತು ಅದಕ್ಕಿಂತ ಹೆಚ್ಚು ಸದಸ್ಯರು ನೋಂದಣಿ/ನವೀಕರಿಸಿದ್ದಲ್ಲಿ ಶೇ. 15 ರ ರಿಯಾಯಿತಿ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.

ಗ್ರಾಮೀಣ ಯೋಜನೆಯಡಿ ಗ್ರಾಮಾಂತರ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆದು ಮೂರು ತಿಂಗಳು ಪೂರೈಸಿದ ಮುಖ್ಯ ಸದಸ್ಯ ಮತ್ತು ಅವನ ಕುಟುಂಬದ ಅವಲಂಬಿತ ಎಲ್ಲಾ ಸದಸ್ಯರು ಸದಸ್ಯತ್ವ ಹೊಂದಿರುವ ಸಹಕಾರ ಸಂಘಗಳಲ್ಲಿ ನಿಗದಿತ ವಂತಿಗೆ ರೂ. 300 ಗಳನ್ನು ಹಾಗೂ ಪರಿಶಿಷ್ಟ ಜಾತಿ, ಪಂಗಡದ ಸದಸ್ಯರು ರೂ. 50 ಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು. ನವಜಾತ ಶಿಶುವಿನಿಂದ ಪ್ರಾರಂಭಿಸಿ ಜೀವಿತಾವಧಿಯವರೆಗೆ ಒಬ್ಬ ವ್ಯಕ್ತಿ ಸದಸ್ಯರಾಗಲು ಅವಕಾಶವಿದೆ. ನಗರ ಯೋಜನೆಯಡಿ ನಗರ ಭಾಗದ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆದು ಮೂರು ತಿಂಗಳು ಪೂರೈಸಿದ ಮುಖ್ಯ ಸದಸ್ಯ ಮತ್ತು ಅವನ ಕುಟುಂಬದ ಅವಲಂಬಿತ ಎಲ್ಲಾ ಸದಸ್ಯರು ಸದಸ್ಯತ್ವ ಹೊಂದಿರುವ ಸಹಕಾರ ಸಂಘಗಳಲ್ಲಿ ನಿಗದಿತ ವಂತಿಗೆ ರೂ. 710 ಗಳನ್ನು ಹಾಗೂ ಪರಿಶಿಷ್ಟ ಜಾತಿ/ಪಂಗಡದ ಸದಸ್ಯರು ರೂ. 110 ಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಸಹಕಾರ ಇಲಾಖೆಯ ಉಪ ನಿಬಂಧಕರು ತಿಳಿಸಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಅವರು ಯಶಸ್ವಿನಿ ಯೋಜನೆಯಡಿ ಹಲವು ಕುಟುಂಬಗಳು ನೋಂದಾಯಿಸಿದ್ದು, ಸಾಕಷ್ಟು ಕುಟುಂಬಗಳು ಹೆಸರು ನೋಂದಾಯಿಸಲು ಬಾಕಿ ಇವೆ ಎಂದರು. ಜಿಲ್ಲಾ ಆಸ್ಪತ್ರೆಯ ಡಾ. ಅಜೀಜ್ ಯಶಸ್ವಿನಿ ಯೋಜನೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ಯಶಸ್ವಿನಿ ಯೋಜನೆಯ ವ್ಯಾಪ್ತಿಯ ಆಸ್ಪತ್ರೆಯ ಪ್ರತಿನಿಧಿಗಳು ಭಾಗವಹಿಸಿದ್ದರು.