*ಗೋಣಿಕೊಪ್ಪಲು, ಆ. 19: ಕೊಡಗು ವಾರ್ತೆ ವಾರಪತ್ರಿಕೆಗೆ ಏಳು ವರ್ಷ ತುಂಬಿದ ಸಂಭ್ರಮಾಚರಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಪತ್ರಿಕೆಯ ಸಂಪಾದಕ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ವಾರ್ತೆ ಬಳಗದಿಂದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ 2 ದಿನಗಳ ಕಾಲ ನಡೆಸಲಾಗುವದು. ಗೋಣಿಕೊಪ್ಪ ವ್ಯಾಪ್ತಿಯಲ್ಲಿ ನಡೆಯುವ ಈ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸುಮಾರು 60 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಪಂದ್ಯಾಟದಲ್ಲಿ ವಿಜೇತರಾದ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನವನ್ನು ನೀಡಲಾಗುವದು. ಭಾಗವಹಿಸಿದ ಎಲ್ಲಾ ತಂಡದ ಆಟಗಾರರಿಗೆ ಪ್ರಮಾಣ ಪತ್ರವನ್ನು ನೀಡಲಾಗುವದು ಎಂದು ತಿಳಿಸಿದರು. ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತು ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ಕಬಡ್ಡಿ ಕ್ರೀಡೆಯತ್ತ ಹೆಚ್ಚು ಒಲವು ತೋರುತ್ತಿರುವದನ್ನು ಮನಗಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಪತ್ರಿಕೆಗಳು ಕೇವಲ ಪ್ರಚಾರಕಷ್ಟೇ ಸೀಮಿತಗೊಳ್ಳದೆ ಕ್ರೀಡೆ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವ ಕಾರ್ಯ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡಲು ಕೊಡಗು ವಾರ್ತೆ ಬಳಗ ಮುಂದಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಸಮಾಜ ಸೇವಕರೊಬ್ಬರನ್ನು ಸನ್ಮಾನಿಸಿ, ಗೌರವಿಸಲಾಗುವದು ಎಂದು ಹೇಳಿದರು. ತಾ. 31 ರೊಳಗೆ ತಂಡದ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮತ್ತು ಹೆಚ್ಚಿನ ಮಾಹಿತಿಗೆ 9448790873, 9448976762, 9980000845 ಸಂಪರ್ಕಿಸಬಹುದು. ಖುದ್ದಾಗಿ ಸಂಪರ್ಕಿಸುವ ತಂಡಗಳು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಸಮೀಪದ ರವಿ ಕಿರಣ ಕಾಂಪ್ಲೆಕ್ಸ್ನಲ್ಲಿರುವ ಶಕ್ತಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಚಟ್ಟಂಗಡ ರವಿ ಸುಬ್ಬಯ್ಯ, ಅಣ್ಣೀರ ಹರೀಶ್ ಮಾದಪ್ಪ, ಎನ್.ಎನ್. ದಿನೇಶ್, ಜಗದೀಶ್ ಜೋಡುಬೀಟಿ, ಉಳುವಂಗಡ ಲೋಹಿತ್ ಭೀಮಯ್ಯ, ಶೈಲೇಂದ್ರ ಉಪಸ್ಥಿತರಿದ್ದರು.