ಮಡಿಕೇರಿ, ನ. 7: ಟಿಪ್ಪು ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ವಿರೋಧಿ ಸಮಿತಿಯ ಹೋರಾಟಗಾರರನ್ನು ಹತ್ತಿಕ್ಕುವ ಯತ್ನವನ್ನು ಜಿಲ್ಲಾಡಳಿತ ಮಾಡುತ್ತಿದೆ ಎಂದು ಆರೋಪಿಸಿರುವ ಟಿಪ್ಪು ಜಯಂತಿ ಆಚರಣಾ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರನ್ನು ಭೇಟಿ ಮಾಡಿ ಆಕ್ಷೇಪ ವ್ಯಕ್ತಪಡಿಸಿದರು.
ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಕೊಡಗು ಜಿಲ್ಲೆಯಲ್ಲಿ ಶೇ. 90ರಷ್ಟು ಜನತೆ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದರೂ, ಜಿಲ್ಲೆಯ ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳದ ಸರ್ಕಾರ ಉದ್ದಟತನದಿಂದ ಆಚರಣೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿ ಆಚರಣಾ ವಿರೋಧಿ ಹೋರಾಟ ಸಮಿತಿ ಹಾಗೂ ಜಿಲ್ಲೆಯ ಜನತೆ ಶಾಂತಿಯುತ ಹೋರಾಟಕ್ಕೆ ಮುಂದಾಗಿದ್ದಾರೆ. ಆದರೆ ಜಿಲ್ಲಾಡಳಿತ ಹೋರಾಟಗಾರರನ್ನು ಹತ್ತಿಕ್ಕುವ ಯತ್ನ ಮಾಡುತ್ತಿದೆ. ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪ್ರಮುಖರ ವಿರುದ್ಧ ತಾಲೂಕು ದಂಡಾಧಿಕಾರಿಗಳು 107ರ ಸೆಕ್ಷನ್ನಡಿ ಸ್ವಯಂ ಮೊಕದ್ದಮೆ ದಾಖಲಿಸಿಕೊಂಡು ವಿನಾಃ ಕಾರಣ ಕಿರುಕುಳ ನೀಡುತ್ತಿದ್ದಾರೆ. ಶಾಂತಿಯುತ ಹೋರಾಟವನ್ನು ಹತ್ತಿಕ್ಕುವ ಯತ್ನ ಇದಾಗಿದೆ. ಜಿಲ್ಲಾಡಳಿತದ ಈ ಕ್ರಮ ಸರಿಯಲ್ಲ. ಕೊಡಗಿನ ಜನತೆಯ ಭಾವನೆಗಳಿಗೆ ಘಾಸಿಯನ್ನುಂಟು ಮಾಡಿ ಜಯಂತಿಯನ್ನು ಆಚರಿಸುವ ಔಚಿತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು. ಜಿಲ್ಲೆಯ ಜನರ ಭಾವನೆಗಳನ್ನು ಜಿಲ್ಲಾ ದಂಡಾಧಿಕಾರಿಗಳಾಗಿ ತಾವು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕೇರಳ ರಾಜ್ಯದ ನೋಂದಣಿ ಇರುವ ವಾಹನಗಳು ಅಧಿಕ ಸಂಚರಿಸುತ್ತಿವೆ. ಅಪರಿಚಿತ ವ್ಯಕ್ತಿಗಳು ಕೆಲವೆಡೆಗಳಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಂಡು ತನಿಖೆಗೊಳಪಡಿಸ ಬೇಕು ಎಂದು ಟಿಪ್ಪು ಜಯಂತಿ ಆಚರಣಾ ವಿರೋಧಿಸ ಹೋರಾಟ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದರು.
ಸಮಿತಿಯ ಜಿಲ್ಲಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿ, ತಾನು ಟಿಪ್ಪು ಜಯಂತಿಯನ್ನು ವಿರೋಧಿ ಪತ್ರಿಕಾ ಹೇಳಿಕೆ ನೀಡಿದೆನೆಂಬ ಕಾರಣ ಒಡ್ಡಿ ತನ್ನ ವಿರುದ್ಧ 107ರ ಸೆಕ್ಷನ್ನಡಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ತನ್ನ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ವಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿಗಳು ಮಾತನಾಡಿ ಜಿಲ್ಲೆಯ ಜನರ ವಿರೋಧವನ್ನು ಸರ್ಕಾರಕ್ಕೆ ಮನವರಿಕೆ ಮಾಡಲಾಗಿದೆ. ಸರ್ಕಾರದ ಆದೇಶವನ್ನು ಪಾಲಿಸಬೇಕಾಗಿದೆ. ಟಿಪ್ಪು ಜಯಂತಿಯನ್ನು ಶಾಂತಿಯುತವಾಗಿ ಆಚರಿಸಲು ಎಲ್ಲರೂ ಸಹಕರಿಸಬೇಕು. ಹೋರಾಟವನ್ನು ಹತ್ತಿಕ್ಕುವ ಯತ್ನ ಜಿಲ್ಲಾಡಳಿತದಿಂದ ಆಗುತ್ತಿಲ್ಲ. ಮೊಕದ್ದಮೆಯ ಬಗ್ಗೆ ತನಗೆ ಮಾಹಿತಿ ಇಲ್ಲ. ಅಧಿಕಾರಿಗಳೊಂದಿಗೆ ಸಭೆ ಇದೆ. ಮಾಹಿತಿ ಪಡೆಯಲಾಗುವದು ಜಯಂತಿ ಆಚರಣೆಗೆ ಎಲ್ಲರ ಸಹಕಾರ ಅಗತ್ಯವೆಂದರು.
ಈ ಸಂದರ್ಭ ಟಿಪ್ಪು ಜಯಂತಿ ಆಚರಣಾ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಎಂ.ಎಂ. ರವೀಂದ್ರ, ಶಾಂತೆಯಂಡ ರವಿ ಕುಶಾಲಪ್ಪ, ಡಿ. ನರಸಿಂಹ, ಟಾಟಾ ಬೋಪಯ್ಯ, ಪಾಡಿಯಮ್ಮಂಡ ಮುರುಳಿ, ಐನಂಡ ಜಪ್ಪು ಅಚ್ಚಪ್ಪ, ಚಕ್ಕೇರ ಮನು, ಅರುಣ್ ಶೆಟ್ಟಿ, ಸಿ.ಪಿ. ಗೋಪಾಲ್ ಹಾಗೂ ಇನ್ನಿತರರು ಇದ್ದರು.