ಕುಶಾಲನಗರ, ಜ. 3: ಕುಶಾಲನಗರದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಸಮ್ಮೇಳನ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಪ್ರವಾಸಿ ಮಂದಿರದಲ್ಲಿ ನಡೆಯಿತು. ಮಡಿಕೇರಿ ಕ್ಷೇತ್ರ ಶಾಸಕÀ ಅಪ್ಪಚ್ಚುರಂಜನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮ್ಮೇಳನದ ವಿವಿಧ ಉಪಸಮಿತಿಗಳ ಅಧ್ಯಕ್ಷರು, ಸಂಚಾಲಕರು ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.ಸಭೆಯಲ್ಲಿ ಮೆರವಣಿಗೆ, ಆಹಾರ, ವೇದಿಕೆ, ಸ್ಮರಣ ಸಂಚಿಕೆ, ಪ್ರಚಾರ ಸಮಿತಿಗಳ ಪ್ರಮುಖರು ಸಿದ್ಧತೆಗಳು ಹಾಗೂ ಖರ್ಚು ವೆಚ್ಚಗಳ ವಿವರವನ್ನು ಸಭೆಯ ಗಮನಕ್ಕೆ ತಂದರು.

1 ಸಾವಿರ ಅಡಿ ಉದ್ದದ ಕನ್ನಡ ಧ್ವಜದ ಮೆರವಣಿಗೆಗೆ 700ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗು ವದು. ಉಳಿದಂತೆ ವಿವಿಧ ಸಂಘ ಸಂಸ್ಥೆಗಳ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಮೆರವಣಿಗೆ ಸಮಿತಿ ಅಧ್ಯಕ್ಷÀ ಫಿಲಿಪ್‍ವಾಸ್ ತಿಳಿಸಿದರು. ಕೊಪ್ಪ ಕಾವೇರಿ ಪ್ರತಿಮೆ ಬಳಿಯಿಂದ ತಾ. 10 ರಂದು ಬೆಳಿಗ್ಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಭಾಂಗಣಕ್ಕೆ ಸಾಗಲಿದೆ.

ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಅಂದಾಜು 10 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಆಹಾರ ಪೂರೈಕೆ ಸಿದ್ಧತೆಗಳ ಬಗ್ಗೆ ಸಮಿತಿಯ ನಂಜುಂಡಸ್ವಾಮಿ ಮಾಹಿತಿ ನೀಡಿದರು. ಸಮ್ಮೇಳನದ ಪ್ರಮುಖ ವೇದಿಕೆ, ಅಂಗಡಿ ಮಳಿಗೆ ನಿರ್ಮಾಣಕ್ಕೆ ತಗಲುವ ಶಾಮಿಯಾನ ವೆಚ್ಚದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಈ ಹಿಂದೆ 25 ಲಕ್ಷ ರೂ.ಗಳ ಅಂದಾಜು ಪಟ್ಟಿ ರಚಿಸಲಾಗಿದ್ದು, ಶಾಸಕರು 10 ಲಕ್ಷ ರೂ.ಗಳ ವೆಚ್ಚದಲ್ಲಿ ಯಶಸ್ವಿ ಸಮ್ಮೇಳನ ನಡೆಸುವ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಆಹಾರ ಬಾಪ್ತು 5 ಲಕ್ಷ ರೂ.ಗಳು, ವೇದಿಕೆ ಶಾಮಿಯಾನ 2 ಲಕ್ಷ ರೂ.ಗಳು, ಸ್ಮರಣಿಕೆ 1 ಲಕ್ಷ, ಸ್ಮರಣ ಸಂಚಿಕೆ ಸೇರಿದಂತೆ ಒಟ್ಟು 10 ಲಕ್ಷ ರೂ.ಗಳಲ್ಲಿ ಸಮ್ಮೇಳನ ನಡೆಸುವ ಬಗ್ಗೆ ತಾತ್ಕಾಲಿಕ ಬಜೆಟ್ ರೂಪಿಸಲಾಯಿತು.

ಸಭೆಯಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷÀ ಎಂ.ಎಂ. ಚರಣ್, ಎಸ್.ಎನ್. ನರಸಿಂಹಮೂರ್ತಿ, ವಿ.ಡಿ. ಪುಂಡರೀಕಾಕ್ಷ, ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್, ಎಂ.ಎನ್. ಚಂದ್ರಮೋಹನ್, ಎಸ್.ಎನ್. ರಾಜಾರಾವ್, ಎಂ.ವಿ. ಸತ್ಯನಾರಾಯಣ, ಬಿ.ಆರ್. ನಾಗೇಂದ್ರಪ್ರಸಾದ್, ಹೆಚ್.ವಿ.ಶಿವಪ್ಪ, ಹೆಚ್.ಬಿ.ಚಂದ್ರಪ್ಪ, ಎಂ.ಎನ್. ಕುಮಾರಪ್ಪ, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಕೆ.ಕೆ. ನಾಗರಾಜಶೆಟ್ಟಿ, ವಿ.ಎಸ್. ಆನಂದಕುಮಾರ್, ಹೆಚ್.ಟಿ. ವಸಂತ್, ಎಂ.ಡಿ. ಕೃಷ್ಣಪ್ಪ, ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಚೆಸ್ಕಾಂ ಅಧಿಕಾರಿ ವಿನಯ್ ಮತ್ತಿತರರು ಇದ್ದರು.

ಇದೇ ಸಂದರ್ಭ ಸಹಕಾರ ಸಚಿವ ಹೆಚ್.ಎಸ್. ಮಹದೇವಪ್ರಸಾದ್ ನಿಧನಕ್ಕೆ ಎರಡು ನಿಮಿಷಗಳ ಕಾಲ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.