ಮಡಿಕೇರಿ, ನ. 9: ಮುಂಗಾರಿನ ಕೊರತೆಯಿಂದ ಉದ್ಭವಿಸಿರುವ ಬರದ ಛಾಯೆಯಡಿ ಸಂಕಷ್ಟಕ್ಕೆ ಸಿಲುಕಿರುವ ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ವಿಶೇಷ ಅಧಿವೇಶನ ಕರೆಯಬೇಕೆಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ.
ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರನ್ನು ಆಗ್ರಹಿಸಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ ನಿಯೋಗ ಬೇಡಿಕೆ ಗಳನ್ನೊಳಗೊಂಡ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿ, ರೈತಪರ ವಿಷಯಗಳ ಕುರಿತು ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ಮೂರು ದಿನಗಳ ಅವಧಿಯ ವಿಶೇಷ ಅಧಿವೇಶನವನ್ನು ತಕ್ಷಣವೇ ಕರೆಯಬೇಕೆಂದು ಮುಖ್ಯಮಂತ್ರಿ ಗಳನ್ನು ಒತ್ತಾಯಿಸಲಾಗಿದೆ.
ರೈತ ಸಮೂಹ ತನ್ನ ಕೃಷಿ ಚಟುವಟಿಕೆಗಳಿಗಾಗಿ ಸಹಕಾರ ಸಂಘ ಮತ್ತು ಇತರೆ ಬ್ಯಾಂಕುಗಳಿಂದ ಪಡೆದಿರುವ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು. ಬರ, ನೆರೆ ಮತ್ತು ಅಣೆಕಟ್ಟಿನ ನೀರಿನ ಕೊರತೆಯಿಂದ ಬೆಳೆ ನಷ್ಟಕ್ಕೆ ಒಳಗಾಗಿರುವ ರೈತರಿಗೆ ವೈಜ್ಞಾನಿಕವಾಗಿ ನಷ್ಟವನ್ನು ಅಂದಾಜಿಸಿ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿರುವದಲ್ಲದೆ ರಾಜ್ಯ ಸರ್ಕಾರ ಶೇ. 35 ರಷ್ಟು ಮತ್ತು ಕೇಂದ್ರ ಸರ್ಕಾರ ಶೇ. 65 ರಷ್ಟು ಆರ್ಥಿಕ ಜವಾಬ್ದಾರಿಯನ್ನು ವಹಿಸಿಕೊಂಡು ತೀವ್ರ ಬರದ ಹೊಡೆತಕ್ಕೆ ಸಿಲುಕಿರುವ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ರೈತ ಸಂಘ ಒತ್ತಾಯಿಸಿದೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅರಣ್ಯ ನಾಶ ಮತ್ತು ಮರಗಳ್ಳತನವನ್ನು ತಡೆಗಟ್ಟಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಬೇಸಿಗೆಯ ಸಂದರ್ಭ ಉಂಟಾಗುತ್ತಿರುವ ಕಾಡ್ಗಿಚ್ಚಿನ ಹಾನಿಯನ್ನು ತಪ್ಪಿಸಲು ಮುಂಜಾಗ್ರತೆ ವಹಿಸಬೇಕೆಂದು ತಿಳಿಸಲಾಗಿದೆ
ಮನವಿ ಸಲ್ಲಿಕೆ ಸಂದರ್ಭ ಸಂಘದ ಪ್ರಧಾನ ಕಾರ್ಯದರ್ಶಿ ಚಟ್ರುಮಾಡ ಸುಜೈ ಬೋಪಯ್ಯ, ವಕ್ತಾರ ಮಲಚ್ಚೀರ ಗಿರೀಶ್, ಸದಸ್ಯ ಎಸ್. ಮಾಚಯ್ಯ ಉಪಸ್ಥಿತರಿದ್ದರು.