ಮಡಿಕೇರಿ, ಆ. 24: ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಮನಕ್ಕೆ ತಾರದೆ ಜಿಲ್ಲಾ ಪಂಚಾಯಿತಿ ಸಂಕೀರ್ಣಕ್ಕೆ ಜಾಗ ಗುರುತು ಮಾಡಲು ಮುಂದಾದ ಅಧಿಕಾರಿಗಳ ಕ್ರಮದ ಬಗ್ಗೆ ಕೆ. ನಿಡುಗಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀಟಾ ಮುತ್ತಣ್ಣ ಅಸಮಾಧಾನ ಹಾಗೂ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಇಂದು ನಡೆಯಿತು.ಕೆ. ನಿಡುಗಣೆ ಗ್ರಾಮದಲ್ಲಿಂದು ತಹಶೀಲ್ದಾರ್ ಎನ್. ಕುಸುಮ ಹಾಗೂ ಎಡಿಎಲ್‍ಆರ್ ಷಂಶುದ್ದೀನ್ ಇವರುಗಳ ನೇತೃತ್ವದಲ್ಲಿ ಜೆಸಿಬಿ ಯಂತ್ರ ಸಹಿತ ಜಾಗ ಸಮತಟ್ಟು ಮಾಡಲು ಪೊಲೀಸ್ ಬಂದೋಬಸ್ತ್‍ನೊಂದಿಗೆ ಸಿದ್ಧತೆ ನಡೆದಿತ್ತು. ಸ್ಥಳಕ್ಕೆ ಬಂದ ಕೆ. ನಿಡುಗಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀಟಾ ಮುತ್ತಣ್ಣ ಅಧಿಕಾರಿಗಳ ಕ್ರಮಕ್ಕೆ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಇತ್ತೀಚೆಗೆ ಹಲವು ಮನೆಗಳನ್ನು ಕೆಡವಿ ಜನರನ್ನು ಬೀದಿಗೆ ಬರುವಂತೆ ಮಾಡಲಾಗಿದೆ. ಇದೀಗ ಜೆಸಿಬಿ ಯಂತ್ರ ತರಿಸಿ ಇನ್ಯಾರ ಮನೆಗಳನ್ನು ಉರುಳಿಸಲು ಮುಂದಾಗಿದ್ದೀರಿ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿಗಳ ಸೂಚನೆಯಂತೆ ಜಿಲ್ಲಾ ಪಂಚಾಯಿತಿ ಸಂಕೀರ್ಣಕ್ಕಾಗಿ ಜಾಗ ಗುರುತಿಸಲು ಬಂದಿರುವದಾಗಿ ಅಧಿಕಾರಿಗಳು ಸಮಜಾಯಿಸಿಕೆ ನೀಡಿದರಾದರೂ, ತನ್ನ ಗಮನಕ್ಕೆ ತಾರದೆ ಈ ರೀತಿ ತೀರ್ಮಾನ ಕೈಗೊಳ್ಳುವದು ಎಷ್ಟು ಸರಿ ಎಂದು ಅಧ್ಯಕ್ಷರು ಪ್ರಶ್ನಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಗಳೊಂದಿಗೆ ಸಮಾಲೋಚಿ ಸುವದಾಗಿ ಅಧಿಕಾರಿಗಳು ಭರವಸೆ ನೀಡಿದರು. ಅಲ್ಲದೇ ಯಾವದೇ ಮನೆಗಳನ್ನು ಕೆಡವಲು ಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿ ದರು. ಸದ್ಯದಲ್ಲಿಯೇ ಉಸ್ತುವಾರಿ ಸಚಿವರು ಜಿ.ಪಂ. ಸಂಕೀರ್ಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವರು. ಈ ಹಿನ್ನೆಲೆಯಲ್ಲಿ ಕಾಡು ಕಡಿದು ಶುಚಿಗೊಳಿಸಲು ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಅಧ್ಯಕ್ಷರು ಸಮ್ಮತಿಸಿದರು.

ಪ್ರತಿಕ್ರಿಯಿಸಿದ ತಹಶೀಲ್ದಾರ್

ಈ ಎಲ್ಲ ಬೆಳವಣಿಗೆಗಳ ಬಗ್ಗೆ ತಹಶೀಲ್ದಾರ್ ಕುಸುಮಾ ಅವರ ಬಳಿ ಮಾಧ್ಯಮದವರು ಮಾಹಿತಿ ಬಯಸಿದಾಗ ಯಾವದೇ ಪ್ರತಿಕ್ರಿಯೆ ನೀಡಲು ತಹಶೀಲ್ದಾರ್ ನಿರಾಕರಿಸಿದರು. ಸುದ್ದಿಗಾರ ರೊಂದಿಗೆ ಮಾತನಾಡಿದ ಎಡಿಎಲ್‍ಆರ್ ಜಿಲ್ಲಾ ಪಂಚಾಯಿತಿ ಸಂಕೀರ್ಣಕ್ಕಾಗಿ ಒತ್ತುವರಿ ಆಗದ 5 ಎಕರೆ ಜಾಗವನ್ನು ಗುರುತಿಸಲು ಬಂದಿದ್ದು, ಯಾವದೇ ಮನೆಗಳಿಗೂ ಹಾನಿ ಮಾಡುವದಿಲ್ಲ ಎಂದು ಸ್ಪಷ್ಟಪಡಿಸಿದರು. ಅಧ್ಯಕ್ಷೆ ರೀಟಾ ಮುತ್ತಣ್ಣ ಮಾತನಾಡಿ, ಈಗಾಗಲೇ ಈ ಭಾಗದ ಹಲವು ಕುಟುಂಬಗಳು ನೆಲೆ ಕಳೆದುಕೊಂಡು ನೊಂದಿವೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜಿಲ್ಲಾಡಳಿತ ಆತಂಕದ ಸ್ಥಿತಿ ನಿರ್ಮಾಣ ಮಾಡಬಾರದು ಎಂದು ಮನವಿ ಮಾಡಿದರು.