ಮಡಿಕೇರಿ, ಆ. 10: ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿ ಜಿ.ಪಂ.ನ ಬಿಜೆಪಿ ಸದಸ್ಯರು ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ನೇತೃತ್ವದಲ್ಲಿ ಸಿಇಓ ಅವರನ್ನು ಭೇಟಿ ಮಾಡಿ ಸಿಇಓ ವರ್ತನೆಗೆ ಆಕ್ಷೇಪ ಹಾಗೂ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಇಂದು ನಡೆಯಿತು.

ಆರೋಪವೇನು?

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಅವರಿಗೆ ಸರ್ಕಾರದ ಯೋಜನೆ ಕುರಿತಾಗಿ ಸಿಇಓ ಚಾರುಲತ ಸೋಮಲ್ ಅವರು ಮಾಹಿತಿ ಕೊಡುತ್ತಿಲ್ಲ. ಅಧ್ಯಕ್ಷರು ದೂರವಾಣಿ ಕರೆ ಮಾಡಿ ತಮ್ಮನ್ನು ಭೇಟಿ ಮಾಡುವಂತೆಯೂ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚಿಸುವಂತೆಯೂ ಹಲವು ಬಾರಿ ಸೂಚಿಸಿದರೂ, ಸಿಇಓ ಅವರು ಸ್ಪಂದಿಸುತ್ತಿಲ್ಲ. ಏನೇ ಇದ್ದರೂ ದೂರವಾಣಿ ಮೂಲಕವೇ ಚರ್ಚಿಸಿ ಎಂದು ಉಡಾಫೆಯ ಮಾತುಗಳನ್ನಾಡುತ್ತಾರೆ. ಈ ಹಿನ್ನೆಲೆಯಲ್ಲಿ ಪತ್ರ ಮುಖೇನ ಸ್ಪಷ್ಟನೆ ಕೋರಿದರೂ ಪ್ರತಿಕ್ರಿಯೆ ನೀಡಿಲ್ಲ. ಕೆಲದಿನಗಳ ಹಿಂದೆ ಬಿಜೆಪಿಯ ಕೆಲ ಮಹಿಳಾ ಸದಸ್ಯರು ಭೇಟಿ ಮಾಡಿ ಸಿಇಓ ಅವರಿಗೆ ಈ ಬಗ್ಗೆ ವಿವರಿಸಿ

ಸ್ಪಂದನೆ ಕೋರಿದರೂ ಪ್ರಯೋಜವಾಗಿಲ್ಲ ಎಂಬದು ಸಿಇಓ ಮೇಲಿರುವ ಆರೋಪ.

ಚರ್ಚೆ - ಭೇಟಿ

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಕೊಠಡಿಯಲ್ಲಿ ಸಭೆ ಸೇರಿದ ಬಿಜೆಪಿ ಸದಸ್ಯರು ಸಿಇಓ ವರ್ತನೆ ಬಗ್ಗೆ ಚರ್ಚಿಸಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರನ್ನು ಹೊರತುಪಡಿಸಿ ಉಪಾಧ್ಯಕ್ಷರಾದಿಯಾಗಿ ಸಿಇಓ ಅವರನ್ನು ಭೇಟಿ ಮಾಡಿದರು.

ಅಹಂ ಭಾವನೆ ಬೇಡ

ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ವಿಜುಸುಬ್ರಮಣಿ, ಶಶಿ ಸುಬ್ರಮಣಿ, ಸಿ.ಕೆ. ಬೋಪಣ್ಣ, ಕವಿತಾಪ್ರಭಾಕರ್, ಮಂಜುಳಾ, ಮುರಳಿ ಇತರರು ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಜಿ.ಪಂ. ಅಧ್ಯಕ್ಷರು ಹಾಗೂ ಸಿಇಓ ಅವರು ಒಟ್ಟಾಗಿ ಕೆಲಸ ಮಾಡುವದು ಅನಿವಾರ್ಯ. ಒಂದು ವೇಳೆ ಪರಸ್ಪರ ಹೊಂದಾಣಿಕೆ ಇಲ್ಲದಿದ್ದರೆ ಅದು ಕೊಡಗಿನ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ‘ಅಹಂ’ ಭಾವನೆ ಬಿಟ್ಟು ಅಧ್ಯಕ್ಷರೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಸ್ಥಾಯಿ ಸಮಿತಿ ಚುನಾವಣೆ ಶೀಘ್ರ ನಡೆಸಬೇಕು. ಮಾತ್ರವಲ್ಲದೆ ಅಧ್ಯಕ್ಷರನ್ನು ಗೌರವಯುತವಾಗಿ ನಡೆಸಿಕೊಳ್ಳುವಂತೆ ಕೋರಿದರು. ಜಿಲ್ಲಾ ಪಂಚಾಯಿತಿ ಅಧಿಕಾರಿ ಬಂದು 3 ತಿಂಗಳಾದರೂ ಯಾವದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಇದರಿಂದಾಗಿ ಜನರಿಂದ ಬೈಗುಳ ಕೇಳಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಮುಂದುವರೆದರೆ ಜನ ರೊಚ್ಚಿಗೇಳುವ ಸಾಧ್ಯತೆಯು ಇದೆ. ಭದ್ರತೆಯೊಂದಿಗೆ ತೆರಳುವ ನಿಮಗೆ ತೊಂದರೆ ಇಲ್ಲ. ಆದರೆ ಯಾವದೇ ಭದ್ರತೆ ಇಲ್ಲದೆ ತೆರಳುವ ಸದಸ್ಯರುಗಳು ಜನರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ತಾವುಗಳು ಅಭಿವೃದ್ಧಿಗೆ ಮುಕ್ತ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಹಕಾರ ಕೊಟ್ಟಿದ್ದೇನೆ

ಬಿಜೆಪಿ ಸದಸ್ಯರ ಆರೋಪದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಇಓ ಚಾರುಲತಾ ಸೋಮಲ್ ಇದುವರೆಗೂ ತಾನು ಸಂಪೂರ್ಣ ಸಹಕಾರ ನೀಡಿದ್ದೇನೆ. ಯಾವದಾದರೂ ಚರ್ಚೆ ಮಾಡಬೇಕಿದ್ದರೆ ತನಗೆ ತಿಳಿಸಿ ಎಂದು ಹೇಳಿದ್ದೆ. ಆದರೆ ನನಗೆ ತಿಳಿಸಿಲ್ಲ. ಆದರೂ ಇನ್ನು ಮುಂದೆ ಯಾವದೇ ಯೋಜನೆ ಅಥವಾ ಕಾಮಗಾರಿಗಳ ಬಗ್ಗೆ ತಾನು ಅಧ್ಯಕ್ಷರಿಗೆ ಮಾಹಿತಿ ನೀಡುತ್ತೇನೆ, ಸಹಕಾರ ನೀಡುತ್ತೇನೆ. ಹತ್ತು ದಿನದೊಳಗೆ ಸಭೆಗೆ ದಿನಾಂಕ ನಿಗದಿ ಮಾಡಿ ಸ್ಥಾಯಿ ಸಮಿತಿ ಚುನಾವಣೆ ನಡೆಸಲಾಗುತ್ತದೆ. ಮಳೆಗಾಲವಾಗಿರುವ ಹಿನ್ನೆಲೆ ಅಭಿವೃದ್ಧಿ ಕಾಮಗಾರಿಗಳು ನಿಧಾನವಾಗುತ್ತಿದೆ. ಏನೇ ವಿಚಾರವಿದ್ದರೂ ತನ್ನ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳುತ್ತೇನೆ. ತಾನು ಯಾರ ವಿರುದ್ಧವೂ ಮಾತನಾಡಲಾರೆ ಎಂದು ಹೇಳಿದರು.

ಪ್ರತಿಷ್ಠೆ ಬದಿಗಿಡಲಿ

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಪ್ರತಿಕ್ರಿಯಿಸಿ, ಸಿಇಓ ಅವರು ಪ್ರತಿಷ್ಠೆ ಬದಿಗಿಟ್ಟು ಕೆಲಸ ಮಾಡಲಿ. ಇಲ್ಲವಾದರೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುವದಿಲ್ಲ. ಉಡಾಫೆಯಿಂದ ವರ್ತಿಸುವದು ಶೋಭೆಯಲ್ಲ ಎಂದು ಹೇಳಿದರು.