ಮಡಿಕೇರಿ, ಜ. 25: ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಕೆಲವೇ ದಿನಗಳಲ್ಲಿ ಅಂತಿಮ ಗೊಳ್ಳಲಿರುವ ಕುರಿತು ಖಚಿತ ಮೂಲಗಳಿಂದ ತಿಳಿದುಬಂದಿದೆ. ಅಧ್ಯಕ್ಷ ಸ್ಥಾನಾಕಾಂಕ್ಷಿಗಳಾಗಿ ಹಲವಾರು ಮಂದಿ ಪೈಪೋಟಿ ನಡೆಸಿದ್ದರಾದರೂ ಪಕ್ಷದ ಹಿರಿಯ ಮುಖಂಡ ಬಹುತೇಕ ಪಕ್ಷದ ಎಲ್ಲಾ ಪ್ರಮುಖರಿಂದಲೂ ಗೌರವ ಪಡೆಯುವ ಬಿ.ಜಿ. ಮಿಟ್ಟು ಚಂಗಪ್ಪ ಅವರನ್ನು ಆಯ್ಕೆ ಮಾಡುವ ಬಗ್ಗೆ ರಾಜ್ಯ ವರಿಷ್ಠರು ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.ಪಕ್ಷದಲ್ಲಿ ಆಂತರಿಕವಾಗಿ ಉಂಟಾದ ಕೆಲವು ಗೊಂದಲಗಳೂ ಮಿಟ್ಟು ಚಂಗಪ್ಪ ಅವರ ನೇಮಕಾತಿಯ ನಿರ್ಧಾರಕ್ಕೆ ಒಂದು ಕಾರಣ ಎಂದೂ ವಿಶ್ಲೇಷಿಸಲಾಗುತ್ತದೆ. ಕೊಡವ ಜನಾಂಗದವರಿಗೆ ಅಧ್ಯಕ್ಷ ಸ್ಥಾನ ನೀಡಬಾರದು ಎಂಬ ಆಗ್ರಹ ಕೆಲವರಿಂದ ಬಹಿರಂಗವಾಗಿ ಕೇಳಿಬಂದಿರುವದು ಒಂದೆಡೆಯಾದರೆ. ಕೊಡವ ಜನಾಂಗದವರಿಗೆ ಕೊಡಗು ಹೊರತುಪಡಿಸಿ ಬೇರೆ ಎಲ್ಲಿ ಅವಕಾಶವಿದೆ ಎಂಬ ವಾದ ಮತ್ತೊಂದೆಡೆಯಾಗಿದೆ.
ಈ ಎಲ್ಲಾ ಕಾರಣ ಗಳಿಂದಾಗಿ ಪಕ್ಷದಲ್ಲಿ ಕಳೆದ ಹಲವಾರು ವರ್ಷಗಳಿಂದ ದುಡಿದಿರುವ ಪಕ್ಷದ ಬಲವರ್ಧನೆಗೆ ಆರ್ಥಿಕವಾಗಿಯೂ ಕೊಡುಗೆ ನೀಡುತ್ತಾ ಬಂದಿರುವ ಹಿರಿಯರೂ ಆದ ಮಿಟ್ಟು ಚಂಗಪ್ಪ ಅವರ ಆಯ್ಕೆಯೇ ಸೂಕ್ತ ಎಂಬದು ವರಿಷ್ಠರ ಚಿಂತನೆಯಾಗಿದೆ ಎನ್ನಲಾಗಿದೆ.
ಪಕ್ಷಕ್ಕೆ ಮಿಟ್ಟು ಚಂಗಪ್ಪ ಅವರ ಕಾಣಿಕೆ ಸಾಕಷ್ಟು ಇರುವದರಿಂದ ಇವರ ಆಯ್ಕೆಯನ್ನು ಪ್ರಶ್ನಿಸಲು ಇತರ ಆಕಾಂಕ್ಷಿಗಳಿಗೆ ಕಷ್ಟಸಾಧ್ಯ ಜತೆಗೆ ಇವರು ಆರಂಭದಿಂದಲೂ ಈ ಪಕ್ಷದಲ್ಲೇ ಗಟ್ಟಿಯಾಗಿ ಉಳಿಯುವ ಮೂಲಕ ಗುರುತಿಸಿಕೊಂಡಿದ್ದಾರೆ. ಮಿಟ್ಟು ಚಂಗಪ್ಪ ಅವರ ಹೆಸರು ಈ ಹಿಂದಿನಿಂದಲೇ ಪ್ರಸ್ತಾಪದಲ್ಲಿದ್ದರೂ ಅವರೇ ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದರಿಂದ ವಿಳಂಬವಾಗಿರುವ ದಾಗಿಯೂ ಹೇಳಲಾಗುತ್ತಿದೆ. ಇದೀಗ ಮಿಟ್ಟು ಚಂಗಪ್ಪ ಮನಬದಲಿಸಿದ್ದು ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆನ್ನ ಲಾಗಿದ್ದು, ಸದ್ಯದಲ್ಲೇ ನೂತನ ಅಧ್ಯಕ್ಷರ ಹೆಸರು ಅಧಿಕೃತವಾಗಿ ಪ್ರಕಟಗೊಳ್ಳುವ ಸಾದ್ಯತೆಯಿದೆ.
ಕಳೆದ 13 ತಿಂಗಳಿನಿಂದ ಟಿ.ಪಿ. ರಮೇಶ್ ಅವರು ಪ್ರಬಾರ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಟಿ.ಪಿ. ರಮೇಶ್ ಇದೀಗ ರೇಷ್ಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆಗಿದ್ದಾರೆ, ಅಲ್ಲದೆ ವಿಧಾನಸಭಾ ಚುನಾವಣೆಯೂ ಸಮೀಪಿಸುತ್ತಿರುವದರಿಂದ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನವನ್ನು ಅಂತಿಮಗೊಳಿಸಲೇ ಬೇಕಾಗಿದೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೊಡವ ಜನಾಂಗದವರನ್ನು ಆಯ್ಕೆ ಮಾಡಿದಲ್ಲಿ ಇತರ ಆಕಾಂಕ್ಷಿಗಳ ಮನವೊಲಿಕೆಗೆ ಮೂವರಿಗೆ ಉಪಾಧ್ಯಕ್ಷ ಸ್ಥಾನ ಕಲ್ಪಿಸುವ ನಿರ್ಧಾರವನ್ನು ಹೈಕಮಾಂಡ್ ಕೈಗೊಂಡಿದೆ ಎನ್ನಲಾಗಿದೆ. ಜಿಲ್ಲೆಗೆ ಆಗಮಿಸಿರುವ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಚರ್ಚೆ ನಡೆಸಿ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ಹೈಕಮಾಂಡ್ ಮೂಲಕ ಪ್ರಕಟಿಸಲಾಗುವದು ಎಂದು ಮೂಲಗಳಿಂದ ತಿಳಿದುಬಂದಿದೆ.
ಅಧ್ಯಕ್ಷ ಸ್ಥಾನಕ್ಕೆ ವೀರಾಜಪೇಟೆ ತಾಲೂಕಿನಿಂದ ಅರುಣ್ ಮಾಚಯ್ಯ, ಸರಿತಾ ಪೂಣಚ್ಚ, ಶಿವು ಮಾದಪ್ಪ, ಮಡಿಕೇರಿಯಿಂದ ಕೆ.ಎಂ. ಗಣೇಶ್, ಮಿಟ್ಟು ಚಂಗಪ್ಪ, ಸೋಮವಾರಪೇಟೆ ತಾಲೂಕಿನಿಂದ ನಾಪಂಡ ಮುತ್ತಪ್ಪ, ಕೆ.ಪಿ. ಚಂದ್ರಕಲಾ, ಕೆ.ಎಂ. ಲೋಕೇಶ್, ಕೆ.ಕೆ. ಮಂಜುನಾಥ್ ಕುಮಾರ್ ಅವರುಗಳ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು.