ಮಡಿಕೇರಿ, ಜ.25: ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 94ಸಿ ರಡಿ ಸಕ್ರಮಗೊಂಡ ಅರ್ಹ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಹಾಗೂ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಬುಧವಾರ ಹಕ್ಕುಪತ್ರ ನೀಡಿದರು.

ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ 94ಸಿ ರಡಿ ಹಲವರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಸಚಿವರು ಸರ್ಕಾರ 94 ಸಿ ಮತ್ತು 94 ಸಿಸಿ ರಡಿ ಅರ್ಹರಿಗೆ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಮಹತ್ವಾಂಕಾಕ್ಷೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆ ಯೋಜನೆಯಡಿ ಅರ್ಜಿ ಸಲ್ಲಿಸಿದ ಬಡವರೆಲ್ಲರಿಗೂ ಹಕ್ಕುಪತ್ರ ವಿತರಿಸಲು ಮುಂದಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಧಿಕಾರಿಗಳು ಜನಪರವಾಗಿ ಕಾರ್ಯನಿರ್ವಹಿಸಬೇಕು. ಬಡವರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಮುಂದಾಗಬೇಕು. ಸರ್ಕಾರಿ ಜಮೀನಿನಡಿ ಅನಧಿಕೃತವಾಗಿ ನಿರ್ಮಿಸಿ ಕೊಂಡಿರುವ ಮನೆಗಳ ಸಕ್ರಮಕ್ಕಾಗಿ ಅಗತ್ಯ ದಾಖಲೆ ಗಳೊಂದಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ ಕೊನೆ ವಾರದೊಳಗೆ ಅವಕಾಶವಿದೆ ಎಂದು ಸಚಿವರು ತಿಳಿಸಿದರು.

ಸೋಮವಾರಪೇಟೆ ತಾಲೂಕಿನಲ್ಲಿ 94 ಸಿ ರಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಹಕ್ಕುಪತ್ರ ವಿತರಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ಸ್ಪಷ್ಟ ನಿರ್ದೇಶನ ನೀಡಿದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ 94 ಸಿ ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ಹಕ್ಕುಪತ್ರ ನೀಡಬೇಕು. ಹಕ್ಕುಪತ್ರ ಪಡೆದವರು ಮನೆ ಕಟ್ಟಲು ಮುಂದಾಗಬೇಕು. ಯಾವದೇ ಕಾರಣಕ್ಕೂ ಮಾರಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.

ಬಸವನಹಳ್ಳಿ ಹಾಗೂ ಹೆಬ್ಬಾಲೆಯಲ್ಲಿ ದಿಡ್ಡಳ್ಳಿಯ ಗಿರಿಜನರಿಗೆ ಗುರುತಿಸಲಾಗಿರುವ ನಿವೇಶನವನ್ನು ಒದಗಿಸಬಾರದು. ಸೋಮವಾರಪೇಟೆ ತಾಲೂಕಿನ ಗಿರಿಜನರಿಗೆ ಒದಗಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ಪ್ರಮುಖ ಕೆ.ಎಂ.ಲೋಕೇಶ್ ಮಾತನಾಡಿ 94ಸಿ ರಡಿ ಹಕ್ಕು ಪತ್ರ ವಿತರಣೆಗಾಗಿ ಎಷ್ಟು ಅರ್ಜಿಗಳು ಬಾಕಿ ಇವೆ. ಅವುಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಮನವಿ ಮಾಡಿದರು.

ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್, ತಾ.ಪಂ.ಅಧ್ಯಕ್ಷೆ ಪುಷ್ಪಾ ರಾಜೇಶ್, ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಜಿ.ಪಂ. ಮುಖ್ಯ ಯೋಜನಾ ಅಧಿಕಾರಿ ಸತ್ಯನ್, ತಹಶೀಲ್ದಾರ್ ಕೃಷ್ಣ, ತಾ.ಪಂ.ಇಒ ಚಂದ್ರಶೇಖರ್, ತಾ.ಪಂ.ಸದಸ್ಯರು ಇತರರು ಇದ್ದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ದಿಡ್ಡಳ್ಳಿಯ ಗಿರಿಜನರಿಗೆ ನಿವೇಶನ ಕಲ್ಪಿಸಲು ಬಸವನಹಳ್ಳಿ ಸೇರಿದಂತೆ ಮೂರು ಕಡೆ ಜಾಗ ಗುರುತಿಸಲಾಗಿದ್ದು, ಶೀಘ್ರ ನಿವೇಶನ ಹಂಚಿಕೆ ಮಾಡಲಾಗುವುದು. ದಿಡ್ಡಳ್ಳಿಯಲ್ಲಿಯೇ ನಿವೇಶನ ಕೊಡಲು ಕಷ್ಟವಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟಿಗೆ ಅವಕಾಶ ಮಾಡಿದಂತೆ ರಾಜ್ಯದ ಕರಾವಳಿ ಭಾಗದ ಹಬ್ಬ ಕಂಬಳಕ್ಕೆ ಅವಕಾಶ ಮಾಡಬೇಕು. ಆ ನಿಟ್ಟಿನಲ್ಲಿ ಶಾಂತಿಯುತವಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯುವಂತಾಗಬೇಕು ಎಂದು ಅವರು ಅಭಿಪ್ರಾಯಿಸಿದರು.