ಮಡಿಕೇರಿ, ಅ. 5: ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಗ್ಗೆ ಇಂದು ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತಗೊಂಡಿತು.

ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಹುತೇಕ ಸದಸ್ಯರು ಪಿಡಿಓಗಳ ಬಗ್ಗೆ ಆರೋಪಗಳ ಸುರಿಮಳೆಗೈದರು. ಪಿಡಿಓಗಳು ಜಿಲ್ಲಾ ಪಂಚಾಯಿತಿ ಸದಸ್ಯರುಗಳಿಗೆ ಗೌರವ ನೀಡುತ್ತಿಲ್ಲ. ನಿರಾಪೇಕ್ಷಣ ಪತ್ರಗಳನ್ನು ನೀಡಲು ನಿರಾಕರಿಸುವದಲ್ಲದೆ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಿಂದ ಅನುಮತಿ ಕೋರುವಂತೆ ಸೂಚಿಸುತ್ತಾರೆ. ಇಲ್ಲ - ಸಲ್ಲದ ಕಾನೂನುಗಳನ್ನು ಸ್ವತಃ ಸೃಷ್ಟಿಸಿ ಜನಸಾಮಾನ್ಯರಿಗೆ ಸ್ಪಂಧಿಸದೆ ಸತಾಯಿಸುತ್ತಾರೆ. ಜಿ.ಪಂ. ಸದಸ್ಯರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸೇರಿದಂತೆ ಸದಸ್ಯರಾದ ಕುಮುದಾ ಧರ್ಮಪ್ಪ, ಮುರಳಿ ಕರುಂಬಮಯ್ಯ, ಸರೋಜಮ್ಮ, ಇತರರು ತಮ್ಮ ಅಸಮಾಧಾನ ಹೊರಹಾಕಿದರು. ಜಿ.ಪಂ. ಉಪಾಧ್ಯಕ್ಷರೆ ಪಿಡಿಓಗಳ ವಿರುದ್ಧ ಸಭೆಯಲ್ಲಿ ದೂರು ಮುಂದಿಟ್ಟ ಹಿನ್ನೆಲೆಯಲ್ಲಿ ಇದನ್ನೇ ಅಸ್ತ್ರವಾಗಿಸಿಕೊಂಡ ವಿಪಕ್ಷ ಸದಸ್ಯರುಗಳಾದ ಸರಿತಾ ಪೂಣಚ್ಚ, ಲತೀಫ್, ಚಂದ್ರಕಲಾ ಇವರುಗಳು ಅಧಿಕಾರಿಗಳನ್ನು ನಿಯಂತ್ರಿಸಬೇಕಾಗಿರುವದು ಆಡಳಿತ ನಡೆಸುವವರ ಕರ್ತವ್ಯ; ಅದನ್ನು ಬಿಟ್ಟು ಸಭೆಯಲ್ಲಿ ಆಡಳಿತ ನಡೆಸುವವರೆ ಅಧಿಕಾರಿಗಳ ಬಗ್ಗೆ ಆರೋಪ ವ್ಯಕ್ತಪಡಿಸುವದು ಹಾಸ್ಯಾಸ್ಪದ ಎಂದು ಟೀಕಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತಾರೂಢ ಸದಸ್ಯರಾದ ಸಿ.ಕೆ. ಬೋಪಣ್ಣ, ಕಿರಣ್ ಕಾರ್ಯಪ್ಪ, ಮುರಳಿ ಇವರುಗಳು ಅಭಿವೃದ್ಧಿ ಸಂಬಂಧ ನೀವು ರಾಜಕೀಯ ಮಾಡಬೇಡಿ. ಜಿ.ಪಂ.ನಲ್ಲಿ ಬಿಜೆಪಿ ಆಡಳಿತವಿದೆ ನಿಜ. ಆದರೆ ರಾಜ್ಯದಲ್ಲಿ ನಿಮ್ಮದೆ ಕಾಂಗ್ರೆಸ್ ಸರ್ಕಾರವಿದೆ. ಹೀಗಿರುವಾಗ ಕೊಡಗಿನಲ್ಲಿ ಎಷ್ಟು ಹುದ್ದೆಗಳು ಖಾಲಿ ಬಿದ್ದಿವೆ ಎಂಬದು ನಿಮಗೆ ಗೊತ್ತೇ? ಮೊದಲು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನಿಮ್ಮ ಸರ್ಕಾರದೊಂದಿಗೆ ನೀವು ಬೇಡಿಕೆ ಮುಂದಿಡಿ, ಅದನ್ನು ಬಿಟ್ಟು ವ್ಯರ್ಥ ಮಾತುಗಳನ್ನಾಡಬೇಡಿ ಎಂದು ತಿರುಗೇಟು ನೀಡಿದರು.

ಸದಸ್ಯೆ ಸರೋಜಮ್ಮ ಮಾತನಾಡಿ, ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಬಾಲಕರಿಗೆ ಶೌಚಾಲಯವಿಲ್ಲ. ಶಿಕ್ಷಣ ಇಲಾಖೆಯ ಗಮನಕ್ಕೆ ಇದು ಬಂದಿಲ್ಲವೆ ಎಂದು ಪ್ರಶ್ನಿಸಿದರು. ಸರ್ಕಾರಿ ವಾಹನಗಳು ದುರುಪಯೋಗ ವಾಗುತ್ತಿವೆ ಎಂದು ಆರೋಪಿಸಿದ ಅವರು, ಅಧಿಕಾರಿಗಳ ವಾಹನಗಳಲ್ಲಿ ಅನ್ಯರು ಓಡಾಡುತ್ತಾರೆ. ಇದು ಸರಿಯಲ್ಲ ಎಂದರು. ಕೆ.ಆರ್.ಐ.ಡಿ. ಎಲ್. ಹಾಗೂ

(ಮೊದಲ ಪುಟದಿಂದ) ನಿರ್ಮಿತಿ ಕೇಂದ್ರಗಳಿಗೆ ವಹಿಸಿದ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಅವರಿಗೆ ನೀಡಲಾಗಿರುವ ಟೆಂಡರನ್ನು ರದ್ದುಪಡಿಸಿ ಎಂದು ಸದಸ್ಯರಾದ ಪ್ರತ್ಯು, ಬೋಪಣ್ಣ ಒತ್ತಾಯಿಸಿದರು.

ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಪಿಡಿಓ ಬಗ್ಗೆ ದೂರು ಬಂದಿದ್ದು, ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸದಸ್ಯ ಪುಟ್ಟರಾಜು ಪ್ರಶ್ನಿಸಿದರು. ಈ ಸಂದರ್ಭ ಸಿಇಓ ಚಾರುಲತಾ ಈ ಬಗ್ಗೆ ಸಭೆಯಲ್ಲಿ ಪ್ರಶ್ನಿಸಲು ಅವಕಾಶವಿಲ್ಲ ಎಂದರು. ಇದಕ್ಕೆ ಆಕ್ಷೇಪಿಸಿದ ಸದಸ್ಯರಾದ ಪುಟ್ಟರಾಜು, ಲತೀಫ್, ಚಂದ್ರಕಲಾ ಇವರುಗಳು ಯಾಕೆ ಪ್ರಶ್ನಿಸಬಾರದು ಎಂದು ಮರು ಪ್ರಶ್ನೆ ಹಾಕಿದರು. ಸರ್ಕಾರದಿಂದ ಸುತ್ತೋಲೆ ಬಂದಿದೆ ಎಂದು ಸಿಇಓ ಹೇಳಿದಾಗ ಅದನ್ನು ಸಭೆಗೆ ಓದಿ ತಿಳಿಸುವಂತೆ ಸದಸ್ಯರು ಒತ್ತಾಯಿಸಿದರು. ಆ ಸಂದರ್ಭ ಪಿಡಿಓ ಬಗ್ಗೆ ದೂರು, ಆಡಳಿತಾತ್ಮಕ ವಿಚಾರಗಳ ಬಗ್ಗೆ ಸ್ಥಾಯಿ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುವಂತಿಲ್ಲ ಎಂಬದಾಗಿ ಸೂಚಿಸಲಾಗಿತ್ತು. ಸ್ಥಾಯಿ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುವಂತಿಲ್ಲ ಎಂದು ಸುತ್ತೋಲೆಯಲ್ಲಿದೆ ಹೊರತು, ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸುವಂತಿಲ್ಲ ಎಂದು ಸುತ್ತೋಲೆಯಲ್ಲಿ ಸೂಚಿಸಿಲ್ಲ. ಆದೇಶವನ್ನು ಅರ್ಥೈಸಿಕೊಳ್ಳದೆ ಸದಸ್ಯರಿಗೆ ಅವಮಾನ ಮಾಡಬೇಡಿ ಎಂದು ಸದಸ್ಯರುಗಳು ಸಿಇಓ ಅವರಿಗೆ ಹೇಳಿದರು. ಹಾಡಿಗಳಲ್ಲಿ ವಾಸಿಸುತ್ತಿರುವ ಜನರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಆದರೆ ಮನೆ ನಿರ್ಮಿಸಲು ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ ಎಂದು ಸದಸ್ಯೆ ಪಂಕಜ ಪ್ರಸ್ತಾಪಿಸಿದರು. ಈ ವಿಚಾರದ ಬಗ್ಗೆ ಕೆಲಹೊತ್ತು ಗಂಭೀರ ಚರ್ಚೆ ನಡೆಯಿತು. ಈ ಬಗ್ಗೆ ಚರ್ಚಿಸಲು ಪ್ರತ್ಯೇಕ ಸಭೆ ಏರ್ಪಡಿಸಿರುವದಾಗಿ ಅಧ್ಯಕ್ಷ ಹರೀಶ್ ಹೇಳಿದರು.