*ಗೋಣಿಕೊಪ್ಪಲು, ಸೆ. 10: ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಇಟ್ಟುಕೊಂಡಿದ್ದ ಮೂವರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿ ಉಳಿದವರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ತಿತಿಮತಿ ಸಮೀಪದ ಚೇಣಿಹಡ್ಲು ಹಾಡಿಯಲ್ಲಿ ಜರುಗಿದೆ. ಚೇಣಿ ಹಡ್ಲು ಹಾಡಿಯ ವಿಜಯ ಬಂಧಿತ ಆರೋಪಿ. ಉಳಿದ ಆರೋಪಿಗಳಾದ ಆಯುರಹೊಸಳ್ಳಿ ಹಾಡಿಯ ಗಣೇಶ್, ಧನಂಜಯ ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳು ನಾಗರಹೊಳೆ ವನ್ಯಜೀವಿ ವಿಭಾಗದ ಅರಣ್ಯದಲ್ಲಿ ಜಿಂಕೆ ಕೊಂದು ಅದರ ಮಾಂಸವನ್ನು ಇಟ್ಟುಕೊಂಡಿದ್ದರು ಎನ್ನಲಾಗಿದೆ. ಸುಳಿವು ದೊರೆತ ಮತ್ತಿಗೋಡು ವನ್ಯಜೀವಿ ವಿಭಾಗದ ಆರ್‍ಎಫ್‍ಒ ಕಿರಣ್ ಕುಮಾರ್ ಶನಿವಾರ ಮುಂಜಾನೆ ಹಾಡಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಜಯ ಅವರ ಮನೆಯಲ್ಲಿ ಒಣಗಿಸಿದ್ದ ಮಾಂಸ ಮತ್ತು ಅರ್ಧ ಬೇಯಿಸಿದ ಮಾಂಸದ ತುಂಡುಗಳು ಪತ್ತೆಯಾಗಿವೆ. ಬಳಿಕ ವಿಜಯನನ್ನು ತನಿಖೆಗೆ ಒಳಪಡಿಸಿದಾಗ ಜಿಂಕೆಯ ಚರ್ಮದ ಚೂರು ಹಾಗೂ ಮೂಳೆಗಳು ದೊರಕಿವೆ.

ಆರೋಪಿ ವಿಜಯನ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಮೊಕದ್ದಮೆ ದಾಖಲಿಸಿ, ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು ಎಂದು ಕಿರಣ್ ಕುಮಾರ್ ತಿಳಿಸಿದರು.